ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಿಯನ್ನು ಬಳಸಿಕೊಂಡು ಜಾಲತಾಣ ಹ್ಯಾಕ್ ಮಾಡಿಸಿದ್ದ ಇನ್‌ಸ್ಪೆಕ್ಟರ್‌ಗಳು!

* ಬಿಟ್ ಕಾಯಿನ್ ಅಕ್ರಮ: ಎಸ್‌ಐಟಿ ತನಿಖೆ * ಹ್ಯಾಕರ್ ಶ್ರೀಕಿಗೆ ಲ್ಯಾಪ್‌ಟಾಪ್ ಕೊಡಿಸಿ ಕೃತ್ಯ
Published 27 ಜನವರಿ 2024, 0:30 IST
Last Updated 27 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದ ಸಿಸಿಬಿ ಪೊಲೀಸರು, ಆತನನ್ನು ಬಳಸಿಕೊಂಡು ವಿವಿಧ ಜಾಲತಾಣ ಹಾಗೂ ಸರ್ವರ್‌ಗಳನ್ನು ಹ್ಯಾಕ್ ಮಾಡಿಸಿ ಹಣ ದೋಚಿರುವ ಸಂಗತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳ ಜೊತೆ ಸೇರಿ ಅಕ್ರಮ ಎಸಗಿದ್ದ ಹಾಗೂ ಸಾಕ್ಷ್ಯ ನಾಶಪಡಿಸಿರುವ ಆರೋಪದಡಿ ಸಿಸಿಬಿ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ಬಾಬು ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್‌ಕುಮಾರ್ ಅವರನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು, ಅವರಿಬ್ಬರ ವಿಚಾರಣೆ ಮುಂದುವರಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿಗಳೂ ಆಗಿದ್ದ, ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮಿಕಾಂತಯ್ಯ, ಚಂದ್ರಾಧರ್, ಶ್ರೀಧರ್ ಕೆ. ಪೂಜಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ನೋಟಿಸ್ ನೀಡಲಾಗಿದೆ.

ಬಿಟ್‌ ಕಾಯಿನ್ ವಂಚನೆಗೆ ಸಂಬಂಧಪಟ್ಟಂತೆ ಕಾಟನ್‌ಪೇಟೆ, ಅಶೋಕನಗರ ಹಾಗೂ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ 2020ರಲ್ಲಿ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿದ್ದವು. ಶ್ರೀಕಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದ ಅಂದಿನ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮಿಕಾಂತಯ್ಯ, ಶ್ರೀಧರ್ ಪೂಜಾರ ಹಾಗೂ ಚಂದ್ರಾಧರ್, ಆತನನ್ನು ಬಳಸಿಕೊಂಡು ಹಲವು ಅಕ್ರಮ ಎಸಗಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಅಮೆಜಾನ್ ಸರ್ವರ್ ಹ್ಯಾಕ್: ‘ಆರೋಪಿ ಶ್ರೀಕಿ, ಅಮೆಜಾನ್‌ ಕಂಪನಿಯ ಸರ್ವರ್‌ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಇದರ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ನಾಶಪಡಿಸಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ಅತಿಥಿಗೃಹದಲ್ಲಿ ಅಕ್ರಮ ಬಂಧನ:

‘ಕೆಂಪೇಗೌಡ ನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶ್ರೀಕಿಯನ್ನು ಕಸ್ಟಡಿಗೆ ಪಡೆದಿದ್ದ ಅಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ(ಸದ್ಯ ಡಿವೈಎಸ್‌ಪಿ), 2020ರ ನ. 14ರಿಂದ 17ರವರೆಗೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಅತಿಥಿ ಗೃಹದ ಕೊಠಡಿಯಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಿಟ್ ಕಾಯಿನ್ ವಿನಿಮಯ ಮಾಡುತ್ತಿದ್ದ ರಾಬಿನ್ ಆನ್‌ಲೈನ್ ಸರ್ವೀಸ್ ಕಂಪನಿ ಮಾಲೀಕ ರಾಬಿನ್ ಖಂಡೇಲ್‌ವಾಲಾನನ್ನು ಸಹ ನ. 14ರಿಂದ 30ರವರೆಗೆ ಅತಿಥಿ ಗೃಹದ ಕೊಠಡಿ ಹಾಗೂ ಸಿಸಿಬಿ ಕಚೇರಿಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ಮಧ್ಯವರ್ತಿ ಪ್ರಶಾಂತ್:

‘ಪ್ರಶಾಂತ್ ಬಾಬು ಜಿಸಿಐಡಿ ಟೆಕ್ನಾಲಜೀಸ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್‌ಕುಮಾರ್ ಜೊತೆ ಒಡನಾಟ ಹೊಂದಿದ್ದರು. ಬಿಟ್‌ ಕಾಯಿನ್‌ ಪ್ರಕರಣದ ತನಿಖಾಧಿಕಾರಿಗಳಿಗೆ ಸಂತೋಷ್‌ ಕುಮಾರ್ ಅವರನ್ನು ಪರಿಚಯ ಮಾಡಿಕೊಟ್ಟು ಮಧ್ಯವರ್ತಿ ಕೆಲಸ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘₹ 60 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ಅಕ್ರಮವಾಗಿ ಖರೀದಿಸಿದ್ದ ಪ್ರಶಾಂತ್‌ ಬಾಬು, ಅದನ್ನು ಹ್ಯಾಕರ್‌ ಶ್ರೀಕಿಗೆ ಕೊಟ್ಟಿದ್ದರು.  ಆತನಿಂದ ಹಲವು ಜಾಲತಾಣ ಹಾಗೂ ಸರ್ವರ್‌ಗಳನ್ನು ಹ್ಯಾಕ್ ಮಾಡಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ಕ್ರಿಫ್ಟೊ ಕರೆನ್ಸಿ ವ್ಯವಹಾರ ನಡೆಸುವ ಸಂಸ್ಥೆಗಳ ಸರ್ವರ್‌ಗಳ ಹಲವು ಖಾತೆಗಳನ್ನು ಅಕ್ರಮವಾಗಿ ಪ್ರವೇಶಿಸಿ, ಹಣ ವರ್ಗಾವಣೆ ಮಾಡಿಕೊಂಡಿರುವುದಕ್ಕೆ ಪುರಾವೆಗಳು ಲಭ್ಯವಾಗಿವೆ’ ಎಂದು ಮೂಲಗಳು ಹೇಳಿವೆ.

‘ಶ್ರೀಕಿ ಮೂಲಕ ಹಲವು ಖಾತೆಗಳ ಯೂಸರ್‌ ನೇಮ್ ಹಾಗೂ ಪಾಸ್‌ವರ್ಡ್ ಬದಲಾಯಿಸಲಾಗಿದೆ. ಪ್ರಕರಣದ ತನಿಖೆ ನಡೆಸುವ ವರಿಗೆ ಯಾವುದೇ ಸಾಕ್ಷ್ಯ ಲಭ್ಯವಾಗದಂತೆ, ಎಲ್ಲವನ್ನೂ ಅಳಿಸಿ ಹಾಕಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿ, ರಾಜಕಾರಣಿಗಳ ವಿಚಾರಣೆ: ‘ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು ಭಾಗಿಯಾಗಿರುವ ಅನುಮಾನವಿದೆ. ಎಲ್ಲರಿಗೂ ನೋಟಿಸ್ ನೀಡಿ, ವಿಚಾರಣೆ ನಡೆಸಲು ಚಿಂತನೆ ನಡೆದಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT