ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲರನ್ನು ವೈಯಕ್ತಿಕವಾಗಿ ನಿಂದಿಸಿದ, ಅವರ ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು, ಸುಟ್ಟಿರುವ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್ ಮತ್ತಿತರರ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.
ಒಂದು ವೇಳೆ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸದಿದ್ದರೆ ಕಾನೂನು ಹೋರಾಟದ ಜತೆಗೆ, ರಾಷ್ಟ್ರಪತಿಯವರಿಗೆ ದೂರು ನೀಡಲಾಗುವುದು ಎಂದು ಅವರು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಅವರನ್ನು ‘ನಾಲಾಯಕ್’ ಎಂದು ವೈಯಕ್ತಿಕವಾಗಿ ಏಕವಚನ ಪ್ರಯೋಗ ಮಾಡಿದ್ದೂ ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ರಾಜಭವನದಿಂದ ಗೆಹಲೋತ್ ಅವರನ್ನು ಓಡಿಸುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ತಮ್ಮ ಮುಂದೆಯೇ ನಡೆದರೂ ಪೊಲೀಸರು ಮೌನ ವಹಿಸಿದ್ದಾರೆ. ತಕ್ಷಣವೇ ಅವರನ್ನೆಲ್ಲ ಬಂಧಿಸಬೇಕಿತ್ತು ಎಂದು ನಾರಾಯಣಸ್ವಾಮಿ ಹೇಳಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟರೆ ನೀವೇ ಹೊಣೆ’ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹಮದ್ ಖಾನ್ ರಾಜ್ಯಪಾಲರಿಗೇ ಬೆದರಿಕೆ ಹಾಕಿದ್ದಾರೆ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ರಾಜ್ಯಪಾಲರೇನು ಈ ರಾಜ್ಯದ ಮುಖ್ಯಮಂತ್ರಿಯೇ? ಗೃಹ ಸಚಿವರೇ? ಇಡೀ ರಾಜ್ಯದಲ್ಲಿ ಗಲಭೆ ಹಬ್ಬಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಂತಿದೆ ಎಂದು ಅವರು ಕಿಡಿಕಾರಿದರು.
ಐವನ್ ಡಿಸೋಜ ‘ದೇಶದ್ರೋಹಿ’:
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಾಂಗ್ಲಾದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುವುದಾಗಿ ಐವನ್ ಡಿಸೋಜ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿ ಅಲ್ಲಿನ ಪ್ರಧಾನಿಯನ್ನು ಓಡಿಸಿದರು. ಇಲ್ಲಿ ಐವನ್ ಡಿಸೋಜಗೆ ಪಾಕಿಸ್ತಾನದ ಭಯೋತ್ಪಾದಕರ ನಂಟು ಇದೆಯೇ? ಉಗ್ರರ ಜೊತೆಗಿನ ನಂಟು ಮತ್ತು ರಾಜ್ಯದ ವಿರುದ್ಧ ದಂಗೆಗೆ ಪ್ರಚೋದನೆ ನೀಡುವುದು ದೇಶದ್ರೋಹಿ ಕೃತ್ಯ ಆಗುತ್ತದೆ. ಆದ್ದರಿಂದ, ಡಿಸೋಜ ಅವರಿಗೆ ‘ದೇಶದ್ರೋಹಿ’ ಪಟ್ಟ ಕಟ್ಟಿ ವಿಧಾನಪರಿಷತ್ ಸದಸ್ಯತ್ವದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.