ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ. ದೇವೇಗೌಡರಿಗೆ ಸೋಕಿದ ಬಿಜೆಪಿ ಗಾಳಿ - ಮುಖ್ಯಮಂತ್ರಿ ಸಿದ್ದರಾಮಯ್ಯ

Published 6 ಜನವರಿ 2024, 15:55 IST
Last Updated 6 ಜನವರಿ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. ‘ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ’ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ದೇವೇಗೌಡರಿಗೂ ಸೋಕಿದಂತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.

‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಂತ್ಯ ಕಾಣಲಿದೆ’ ಎಂಬ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಮಾತಿಗೆ ‘ಎಕ್ಸ್‌’ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಇದು ಸಂಗ ದೋಷದ ಫಲ’ ಎಂದಿದ್ದಾರೆ.

‘ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ, ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

‘ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು, ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟ ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು’ ಎಂದೂ ಹೇಳಿದ್ದಾರೆ.

‘ಜೆಡಿಎಸ್‌ ‘ಬಿಜೆಪಿಯ ಬಿ ಟೀಮ್’ ಎಂದು ಹಿಂದಿನಿಂದಲೇ ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತು ಒಪ್ಪಿಕೊಂಡು ತಮ್ಮ ಸೈದ್ಧಾಂತಿಕ ನಿಲುವು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಜಾತ್ಯತೀತ ಮತದಾರರು ದಾರಿ ತಪ್ಪುವುದನ್ನು ಜೆಡಿಎಸ್‌ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಜಾತ್ಯತೀತ ಜನತಾದಳ ಅಂತ್ಯವಾಗಬಾರದು. ಅದೇ ರೀತಿ ದೇವೇಗೌಡರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಬಯಸುತ್ತೇನೆ. ಆದರೆ, ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ಬಯಸುತ್ತೇನೆ. ಈ ಬಯಕೆ ಈಡೇರಿಕೆಗೆ ಕಾಂಗ್ರೆಸ್ ನಿರಂತರ ಪ್ರಯತ್ನ ಮಾಡಲಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT