ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40ರ ಲಂಚ: ತನಿಖೆಗೆ ವ್ಯಾಪ್ತಿ ನಿಗದಿ

ನಾಗಮೋಹನ್‌ದಾಸ್‌ ಹಾಗೂ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ
Published 9 ಅಕ್ಟೋಬರ್ 2023, 16:30 IST
Last Updated 9 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2019ರ ಜುಲೈ 26ರಿಂದ 2023ರ ಮಾರ್ಚ್‌ 31ರ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಿಲ್‌ ಮಂಜೂರು ಮಾಡಲು ಶೇ 40 ಲಂಚ, ಅವ್ಯವಹಾರ ನಡೆದಿರುವ ಆರೋಪ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ವಿಚಾರಣಾ ಆಯೋಗಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ.

ಆಯೋಗದ ತನಿಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ಇದೇ 6ರಂದು ಅಧಿಸೂಚನೆ ಹೊರಡಿಸಿರುವ ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ), ತನಿಖೆಗೆ ಯಾವುದೇ ರೀತಿಯ ಕನಿಷ್ಠ ಅಥವಾ ಗರಿಷ್ಠ ಮೊತ್ತವನ್ನು ನಿರ್ದಿಷ್ಟಪಡಿಸಿಲ್ಲ. ಹೀಗಾಗಿ, ತನಿಖೆಯ ವ್ಯಾಪ್ತಿಗೆ ವಹಿಸಿದ ಎಲ್ಲ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು ಎಂದೂ ಹೇಳಿದೆ.

ಬಿಬಿಎಂಪಿ, ಬಿಡಿಎ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಮತ್ತು ಜಲಸಂಪನ್ಮೂಲ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳ ವ್ಯವಹಾರಗಳಿಗೆ ಕಮಿಷನ್‌ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ, ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ಎಲ್ಲ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರ ಆರೋಪಗಳನ್ನು ವಿಚಾರಣೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡಬೇಕು ಎಂದೂ ಆಯೋಗಕ್ಕೆ ಸೂಚಿಸಲಾಗಿದೆ.

ಜಾನ್ ಮೈಕಲ್ ಕುನ್ಹಾ ಆಯೋಗ‌ದ ವ್ಯಾಪ್ತಿ‌: ಕೋವಿಡ್‌ ನಿವಾರಣೆ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ರಚಿಸಲಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಮೊದಲ ಲಾಕ್‌ಡೌನ್‌ ಆರಂಭವಾದ ದಿನದಿಂದ 2022ರ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿನ ಆರೋಪ, ನಿಯಮ ಉಲ್ಲಂಘನೆ, ಲೋಪಗಳ ಕುರಿತು ತನಿಖೆ ನಡೆಸುವಂತೆ ಇದೇ 7ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (2020–21) ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಪರಿಶೀಲಿಸಲು ಮತ್ತು ಸಕ್ಷಮ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ನೀಡಿದ್ದ ಅನುಮೋದನೆ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಔಷಧಿ, ಆಮ್ಲಜನಕ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆಯ ನಿರ್ವಹಣೆಯಲ್ಲಿ ನಡೆದಿರುವ ಅವ್ಯವಹಾರ, ಲೋಪದೋಷಗಳ ‌ತನಿಖೆ ನಡೆಸಬೇಕು ಎಂದು ಆಯೋಗಕ್ಕೆ ಸೂಚಿಸಲಾಗಿದೆ.

ಕಿದ್ವಾಯಿ ಸಂಸ್ಥೆಗೆ ಸಂಬಂಧಿಸಿದಂತೆ ಟೆಂಡರ್‌ಗಳು, ನೇಮಕಾತಿಗಳು, ಔಷಧಿ, ಉಪಕರಣಗಳು, ವೆಂಟಿಲೇಟರುಗಳು, ಆಕ್ಸಿಜನ್‌ ಘಟಕದ ನಿರ್ವಹಣೆ ಇವುಗಳ ಅವ್ಯವಹಾರಗಳ ತನಿಖೆ, ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಿಷಯಗಳು, ಕೋವಿಡ್‌ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ಮಾನದಂಡಗಳ ಉಲ್ಲಂಘನೆ, ಆಮ್ಲಜನಕ ಕೊರತೆ ಮತ್ತು ನಿರ್ವಹಣೆಯಲ್ಲಿ ನಿಯಮ ಪಾಲನೆ, ಕೋವಿಡ್‌ ನಿರ್ವಹಣೆಗೆ ಸಲ್ಲಿಕೆಯಾದ ಪ್ರಸ್ತಾವನೆಗಳಿಗೆ ಅನುಮೋದನೆ ವಿಳಂಬ ಮುಂತಾದ ವಿಷಯಗಳ ಕುರಿತು ತನಿಖೆ ನಡೆಸಿ, ಕೈಗೊಳ್ಳಬಹುದಾದ ಕ್ರಮದ ಕುರಿತು ಮತ್ತು ಮುಂದೆ ಇಂತಹ ಲೋಪ, ನಿಯಮ ಉಲ್ಲಂಘನೆ ಆಗದಂತೆ ವಹಿಸಬಹುದಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಲಹೆಗಳನ್ನು ನೀಡಬೇಕು ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT