ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈಸ್‌’ ಯೋಜನೆ ವಶಕ್ಕೆ ಬಿಜೆಪಿ, ಜೆಡಿಎಸ್‌ ಆಗ್ರಹ

‘ದಳ‘ ಕಚೇರಿಯಲ್ಲಿ ಎಚ್‌ಡಿಕೆ, ಬೊಮ್ಮಾಯಿ ಜಂಟಿ ಪತ್ರಿಕಾಗೋಷ್ಠಿ
Published 21 ಜುಲೈ 2023, 16:14 IST
Last Updated 21 ಜುಲೈ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ನೈಸ್’ ಕಂಪನಿ ನಿರ್ವಹಿಸುತ್ತಿರುವ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಯೋಜನೆಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಜನರ ಭೂಮಿ ಹಾಗೂ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. 2016ರಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿ ವರದಿಯಂತೆ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಶುಕ್ರವಾರ ವಿಧಾನಸೌಧದ ಜೆಡಿಎಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ನೈಸ್ ರಸ್ತೆಯ ಅಕ್ರಮ ಕುರಿತು ಮೌನವಾಗಿದ್ದಾರೆ. ಒಪ್ಪಂದದಂತೆ 2012ರ ಒಳಗೆ ಕಾಂಕ್ರಿಟ್‌ ರಸ್ತೆ ಮಾಡಬೇಕಿತ್ತು. ಅಲ್ಲಿಯವರೆಗೂ ಟೋಲ್ ಸಂಗ್ರಹ ಮಾಡದಂತೆ ಸೂಚಿಸಲಾಗಿತ್ತು. ಆದರೂ, ಷರತ್ತು ಉಲ್ಲಂಘಿಸಿ ₹ 1,325 ಕೋಟಿ ರೂಪಾಯಿ ಟೋಲ್‌ ಸಂಗ್ರಹಿಸಿದ್ದರು. ಆ ಹಣವನ್ನು ಸರ್ಕಾರ ವಾಪಸ್‌ ಪಡೆಯಬೇಕು ಎಂದು ಸದನ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪನಿ ಸಾಕಷ್ಟು ವಂಚನೆ ಮಾಡಿದ್ದರೂ, ಕ್ರಮ ಸಾಧ್ಯವಾಗಿಲ್ಲ. ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಒಂದಷ್ಟು ಕ್ರಮಗಳಾಗಿವೆ. ನೈಸ್‌ ವಿರುದ್ಧದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಲವು ಆದೇಶಗಳು ಬಂದಿವೆ. ಹಾಗಾಗಿ, ಹಿಂದಿನ ಬಿಜೆಪಿ ಸರ್ಕಾರವನ್ನು ಅಭಿನಂದಿಸುವೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಸದನದಲ್ಲಿ ಕಾಂಗ್ರೆಸ್‌ ಶಾಸಕ ಟಿ.ಬಿ. ಜಯಚಂದ್ರ ದನಿ ಎತ್ತಿದ್ದಾರೆ. ಚರ್ಚೆಗೆ ನಾವೂ ಅವಕಾಶ ಕೇಳಿದ್ದೆವು. ನಿಲುವಳಿ ಸೂಚನೆ ಮಂಡಿಸಿದ್ದೆವು. ಬಳಿಕ ಅದನ್ನು ನಿಯಮ 69ಕ್ಕೆ ಬದಲಾಯಿಸಿ, ಚರ್ಚಗೆ ಅವಕಾಶ ಕೊಡುವ ಭರವಸೆ ನೀಡಲಾಗಿತ್ತು. ಅವಕಾಶ ನೀಡಲೇ ಇಲ್ಲ. ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಈಸ್ಟ್ ಇಂಡಿಯಾ ಕಂಪನಿಯಂತಹ ಸಂಸ್ಥೆ ವಿರುದ್ಧ ನಿಲ್ಲುತ್ತೇವೆ. ಜನರ ಹಿತಾಸಕ್ತಿಗಾಗಿ ಜೆಡಿಎಸ್‌ ಹಾಗೂ ಬಿಜೆಪಿ ಸದನದ ಒಳಗೆ, ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದರು.

ಬಸವರಾಜ ಬೊಮ್ಮಾಯಿ‌ ಮಾತನಾಡಿ, ರಸ್ತೆ ಕಾಮಗಾರಿಗೆ ಹೆಚ್ಚುವರಿ ಭೂಮಿ ಪಡೆಯಲಾಗಿದೆ. ಈ ಹೆಚ್ಚುವರಿ ಭೂಮಿ ಮರುಬಳಕೆಯ ನಿರ್ಧಾರ ಸರ್ಕಾರಕ್ಕಿದೆ ಎಂದು ಸುಪ್ರೀಂಕೋರ್ಟ್‌ ಸಹ ಹೇಳಿದೆ ಎಂದರು.  

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್‍ಯಾನಾಯ್ಕ, ಶಾಸಕರಾದ ಆರಗ ಜ್ಞಾನೇಂದ್ರ, ನೇಮಿರಾಜ್ ನಾಯಕ್, ರಾಜೂಗೌಡ, ಕರೆಮ್ಮ ನಾಯಕ್, ಕೆ.ಎ.ತಿಪ್ಪೇಸ್ವಾಮಿ ಇದ್ದರು.

ನೈಸ್ ಯೋಜನೆಗೆ ಸರ್ಕಾರ ನೀಡಿದ್ದ ಭೂಮಿ ರಿಯಲ್ ಎಸ್ಟೇಟ್‌ ದಂಧೆಗೆ ಬಳಕೆಯಾಗುತ್ತಿದೆ. ಸಂಪುಟ ಉಪ ಸಮಿತಿ ಶಿಫಾರಸಿನಂತೆ ಹೆಚ್ಚುವರಿ ಭೂಮಿಯನ್ನು ಸರ್ಕಾರ ವಾಪಸ್‌ ಪಡೆಯಬೇಕು
ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕ

‘ನೈಸ್‌’ ವಶಕ್ಕೆ ಪಡೆದರೆ ₹30 ಸಾವಿರ ಕೋಟಿ ಲಭ್ಯ’

ನೈಸ್‌ ಯೋಜನೆಯನ್ನು ವಶಕ್ಕೆ ಪಡೆದರೆ ಸುಮಾರು ₹ 30 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ಸಿಗಲಿದೆ. ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಬಹುದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.  ‘ಸದನ ಸಮಿತಿ ನೀಡಿದ ವರದಿ ಇಟ್ಟುಕೊಂಡು ಕುಳಿತರೆ ಯಾರಿಗೆ ಲಾಭ?. ಈಗ ‘ಬ್ರ್ಯಾಂಡ್‌’ ಬೆಂಗಳೂರು ಎಂದು ಜಪ ಮಾಡುತ್ತಿರುವವರು ಹಿಂದೆ ನೈಸ್ ಜೊತೆ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ಅದಕ್ಕೆ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ನೈಸ್ ರಸ್ತೆಯ ಸುತ್ತಮುತ್ತ ಯಾವುದೇ ಪಕ್ಷದ ರಾಜಕಾರಣಿಗಳ‌ ಭೂಮಿ ಇದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸಲಹೆ’ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT