ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರು ಪೊಲೀಸ್‌ ವಶಕ್ಕೆ

Published 7 ಫೆಬ್ರುವರಿ 2024, 8:57 IST
Last Updated 7 ಫೆಬ್ರುವರಿ 2024, 8:57 IST
ಅಕ್ಷರ ಗಾತ್ರ

ಬೆಂಗಳೂರು: ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ, ಬಳಿಕ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಕಾರರರು ಘೋಷಣೆ ಕೂಗಿದರು.

ಪ್ರತಿಭಟನೆ ವೇಳೆ ಮಾತನಾಡಿದ ಆರ್. ಅಶೋಕ, ‘ರೈತರು ಸಂಕಷ್ಟದಲ್ಲಿದ್ದರೆ ಮಜಾ ಮಾಡಲು ಕಾಂಗ್ರೆಸ್‌ನವರು ದೆಹಲಿಗೆ ಹೋಗಿದ್ದಾರೆ. ಅವರ ದೆಹಲಿ ಪ್ರವಾಸದಿಂದ ವಿಧಾನಸೌಧ ಖಾಲಿ ಖಾಲಿಯಾಗಿದೆ. ಸಚಿವರಿಲ್ಲದೆ ಅಧಿಕಾರಿಗಳಿಗೆ ಕೆಲಸ ಇಲ್ಲದಂತಾಗಿದೆ’ ಎಂದರು.

‘ಬರಗಾಲದಿಂದ ಮಲೆನಾಡಿನಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಶೇ 30ರಷ್ಟು ಕಡಿತ ಮಾಡಲಾಗಿದೆ. ಹೀಗಾಗಿ ನಮಗೆ ನೀರಿನ ಕೊರತೆಯಾಗಿದೆ’ ಎಂದರು. 

‘ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು, ಆಗೊಂದು ಈಗೊಂದು ಗ್ಯಾರಂಟಿ ಷರತ್ತುಗಳ ಹಾಕಿ ಜಾರಿಗೆ ತಂದಿದ್ದಾರೆ. ಆ ಮೂಲಕ, ರಾಜ್ಯದ ಜನರಿಗೆ ನಾಮ ಹಾಕುತ್ತಿದ್ದಾರೆ. 80 ಜನರಿಗೆ ಸಂಪುಟ ದರ್ಜೆ ನೀಡಿ ನಿಯಮ ಉಲ್ಲಂಘಿಸಿದ್ದಾರೆ. ಈ ಸರ್ಕಾರದಲ್ಲಿ ಮುಲ್ಲಾಗಳಿಗೆ ₹10 ಸಾವಿರ ಕೋಟಿ ಕೊಡಲು ಹಣ ಇದೆ. ಆದರೆ, ರೈತರಿಗೆ ಕೊಡಲು ಹಣ ಇಲ್ಲ. ಭಾಗ್ಯಗಳ ಸರ್ಕಾರದಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ ಸಿಕ್ಕಿದೆ. ಕಿಸಾನ್ ಸಮ್ಮಾನ್​ಗೆ ರಾಜ್ಯದಿಂದ ಹಣ ಸೇರಿಸಿ ಕೊಡಲಾಗುತ್ತಿತ್ತು. ಅದನ್ನೂ ಕಿತ್ತುಕೊಂಡಿದ್ದಾರೆ. ರೈತ ವಿದ್ಯಾನಿಧಿಯನ್ನೂ ಹಾಳು ಮಾಡಿದರು’ ಎಂದು ವಾಗ್ದಾಳಿ ನಡೆಸಿದರು.

‘ನಿಮಗೆ ರೈತರ ಬಗ್ಗೆ ಯಾವ ಕಾಳಜಿ ಇದೆ? ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ವಿಧಾನಸೌಧ. ವಿಕಾಸಸೌಧ ಜನರೇಟರ್​ನಿಂದ ನಡೆಯುತ್ತಿರಬೇಕು ಅನ್ನಿಸುತ್ತಿದೆ. ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ. ಚಾತಕ ಪಕ್ಷಿಯಂತೆ ಅನುದಾನಕ್ಕಾಗಿ ಶಾಸಕರು ಕಾದು ಕುಳಿತಿದ್ದಾರೆ. ಸಿದ್ದರಾಮಯ್ಯ ನಾಳೆ ಬಾ ಎನ್ನುವ ಫಲಕ ಹಾಕಿಕೊಂಡು ಕುಳಿತಿದ್ದಾರೆ’ ಎಂದು ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ರಾಜ್ಯದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಮತ್ತೊಂದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ತತ್ವ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಸ್ವಾರ್ಥ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಕಾವೇರಿ, ಮಹದಾಯಿ ವಿಚಾರದಲ್ಲಿ ಎಡವಟ್ಟು ಮಾಡಿದರೆ, ರೈತರಿಗೆ ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ, ಯಾವ ಮುಖ ಇಟ್ಟುಕೊಂಡು ದೆಹಲಿಯಲ್ಲಿ ಧರಣಿ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಮನಮೋಹನ್ ಸಿಂಗ್ ಸರ್ಕಾರ ಮತ್ತು ಮೋದಿ ಸರ್ಕಾರದ ಅವಧಿಯ ಅನುದಾನ ಬಿಡುಗಡೆ ವಿಚಾರವನ್ನು ಬಹಿರಂಗಪಡಿಸಿ, ಆಗ ಎಲ್ಲವೂ ಗೊತ್ತಾಗಲಿದೆ. 2014-2024ರವರೆಗೆ ₹ 2 ಲಕ್ಷ ಕೋಟಿ ಹೆಚ್ಚು ಅನುದಾನ ಮೋದಿ ಸರ್ಕಾರದಲ್ಲಿ ಬಂದಿದೆ. ಶೇ 30  ಇದ್ದ ತೆರಿಗೆ ವಾಪಸಾತಿಯನ್ನು ಮೋದಿ ಶೇ 40ಕ್ಕೆ ಹೆಚ್ಚಿಸಿದ್ದಾರೆ. ಅನುದಾನ ಕೇಂದ್ರ ನಿರ್ಧಾರ ಮಾಡುವುದಿಲ್ಲ. ಅದನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಅನುದಾನ ಕಡಿತಕ್ಕೆ ಸಿದ್ದರಾಮಯ್ಯ ಕಾರಣವೇ ಹೊರತು ಮೋದಿ ಸರ್ಕಾರ ಅಲ್ಲ’  ಎಂದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT