ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಭೇಟಿಗೆ ಬಿಜೆಪಿ ನಾಯಕರ ಹುರುಪು

Last Updated 14 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ವೆಗಾಸ್ ಆಸ್ಪತ್ರೆಯಲ್ಲಿಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಹುತೇಕ ಗುಣಮುಖರಾಗಿದ್ದು,ಭಾನುವಾರ ಬೆಳಿಗ್ಗೆ ಮನೆಗೆ ತೆರಳಲಿದ್ದಾರೆ.

ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿ ಹಾಗೂ ಶುಭ ಹಾರೈಸಿ ಈಗಾಗಲೇ ನೂರಾರು ಗಣ್ಯರು ಆಸ್ಪತ್ರೆಗೆ ಬಂದಿದ್ದು, ಕಾಂಗ್ರೆಸ್‌ಗಿಂತ ಬಿಜೆಪಿ ನಾಯಕರೇ ಅಧಿಕ ಸಂಖ್ಯೆಯಲ್ಲಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು,ನೂತನ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಅನರ್ಹ ಶಾಸಕರಾದ ಎಚ್.ವಿಶ್ವನಾಥ,ಮುನಿರತ್ನ ಅವರೂ ಭೇಟಿ ಮಾಡಿದರು.

ವೈರಿಗಳಲ್ಲ

‘ನಾನು ಮತ್ತು ಸಿದ್ದರಾಮಯ್ಯ ವೈರಿಗಳಲ್ಲ, ನಾನು ಮತ್ತು ಅವರು ಭಾರತ–ಪಾಕಿಸ್ತಾನ ಅಲ್ಲ,. ಮತಭೇದ, ಯೋಚನಾಲಹರಿ ಬೇರೆ ಬೇರೆ ಇರಬಹುದು.ನಮ್ಮ ನಡುವೆ ಸ್ನೇಹ ಇದ್ದೇ ಇದೆ’ ಎಂದು ಎಚ್‌. ವಿಶ್ವನಾಥ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ರಾಷ್ಟ್ರದಲ್ಲಿ ಯಾರೂ ಪಕ್ಷಾಂತರ ಮಾಡಿಯೇ ಇಲ್ಲವೇ? ಹೀಗಾಗಿ ನಾವು ಬೆನ್ನಿಗೆ ಚೂರಿ ಹಾಕಿದ್ದೇವೆ ಎಂದು ಹೇಳುವುದು ತಪ್ಪು’ ಎಂದರು.

‘ಮಂತ್ರಿ ಸ್ಥಾನ ಯಾರಿಗೆ ಕೊಡಬೇಕು ಎಂಬುದು ಸಿಎಂಗೆ ಬಿಟ್ಟದ್ದು. ರಾಜಕಾರಣದಲ್ಲಿ ಹಠ ಇರದೆ ಹೋದರೆ ಏನು ಸಿಗುತ್ತದೆ? ಇಂದಿರಾ ಗಾಂಧಿಯೇ ಸೋತಿದ್ದಾರೆ. ಇಲ್ಲಿ ಸೋಲು, ಗೆಲುವು ಸಾಮಾನ್ಯ. ನನ್ನ ಉಸಿರಿರುವವರೆಗೆ ರಾಜಕೀಯದಲ್ಲೇ ಇರುತ್ತೇನೆ. ದೇವೇಗೌಡರ ಹಾಗೆ ನಾನು ಸಹ ರಾಜಕೀಯ ಮಾಡುತ್ತೇನೆ’ ಎಂದರು.

‘ಒಟ್ಟಿಗೆ ಬಂದಿದೀರಾ..!’

‘ಮೂವರೂ ಒಟ್ಟಿಗೆ ಬಂದಿದೀರಲ್ಲಪ್ಪಾ. . . ಯಾವಾಗ ಸಚಿವರಾಗೋದು !’ ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು.

ಒಟ್ಟಾಗಿ ಆಸ್ಪತ್ರೆಗೆ ಬಂದ ಸೋಮಶೇಖರ್, ಬಸವರಾಜ್ ಹಾಗೂ ಮುನಿರತ್ನ ಅವರನ್ನು ಕಂಡ ಸಿದ್ದರಾಮಯ್ಯ, ‘ಏನ್ರಯ್ಯಾ. . ಎಲ್ಲರೂ ಒಟ್ಟಿಗೆ ಬಂದಿದ್ದೀರಾ. ಚುನಾವಣೆಲಿ ಗೆದ್ದಿದ್ದಕ್ಕೆ ಕಂಗ್ರಾಟ್ಸ್‌. ನಿಮ್ಮನ್ನು ಯಡಿಯೂರಪ್ಪನವ್ರು ಸಚಿವರಾಗಿ ಮಾಡ್ತಾರೆ ಬಿಡಿ. ಒಳ್ಳೆದಾಗಲಿ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರಿಗೆ ಆಪ್ತರೆನಿಸಿದ ಹಲವರು ಇದೀಗ ಬಿಜೆಪಿಯಲ್ಲಿದ್ದರೂ ತಮ್ಮ ನಾಯಕರನ್ನುಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT