ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

Published 8 ಮೇ 2024, 16:14 IST
Last Updated 8 ಮೇ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸೋಗಲಾಡಿ ಸಿಎಂ ಸಿದ್ದರಾಮಯ್ಯ ಅವರೇ, ಸರ್ಕಾರದ ಯಡವಟ್ಟುಗಳು, ದುರಾಡಳಿತ ಹಾಗೂ ಬೇಜವಾಬ್ದಾರಿಯಿಂದ ಜನರು ಅನುಭವಿಸುವ ಸಂಕಷ್ಟಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಮುಖಂಡ ಆರ್. ಅಶೋಕ್ ಕಿಡಿಯಾಡಿದ್ದಾರೆ.

‘ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಮಂತ್ರಿ ಹೇಳುತ್ತಿರುವ ಸುಳ್ಳುಗಳ ನೆನಪಾಯಿತು’ ಎಂದು ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ರಾಜ್ಯದ ರೈತರು, ಮಹಿಳೆಯರು, ಯುವಕರು, ಬಡವರು ಸಾಲು ಸಾಲು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಊಟಿಯಲ್ಲಿ ಮಜಾ ಮಾಡಿಕೊಂಡು, ಪ್ರಧಾನಿ ಮೋದಿ ಅವರ ಬಗ್ಗೆ ಅನವಶ್ಯಕ ಟೀಕೆ ಮಾಡುತ್ತಾ ಚುನಾವಣೆ ನಂತರವೂ ರಾಜಕೀಯ ಮಾಡುತ್ತಿರುವ ತಮಗೆ ನಿಜಕ್ಕೂ ನಾಚಿಕೆ ಆಗಬೇಕು’ ಎಂದು ಆರೋಪಿಸಿದ್ದಾರೆ.

‘ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಕಳೆದ 23 ವರ್ಷಗಳಿಂದ ಸತತವಾಗಿ ಸರ್ಕಾರದ ಮುಖ್ಯಸ್ಥರಾಗಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಜನರ ಸೇವೆ ಮಾಡುತ್ತಿರುವ ಮೋದಿ ಅವರೆಲ್ಲಿ... ತಾವೆಲ್ಲಿ. ನಾಲ್ಕು ವಾರ ಪ್ರಚಾರ ಮಾಡಿದ್ದಕ್ಕೆ ಊಟಿಯಲ್ಲಿ ಪಾರ್ಟಿ ಮಾಡಲು ಹೋಗಿರುವ ತಮಗೆ, ಮೋದಿ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರೇ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಜನತೆಯ ಸಂಕಷ್ಟಗಳಿಗೆ ಸ್ಪಂದಿಸದೆ ಊಟಿಯಲ್ಲಿ ಮಜಾ ಮಾಡಲು ಹೋಗಿರುವ ತಮಗೆ ರಾಜ್ಯದ ಜನರ ಬಗ್ಗೆ ಎಷ್ಟು ಮಾತ್ರ ಬದ್ಧತೆ ಇದೆ ಅಂತ ತಾವೇ ಜಗಜ್ಜಾಹೀರು ಮಾಡಿದ್ದೀರಿ’ ಎಂದಿರುವ ಅಶೋಕ, ಯಡವಟ್ಟುಗಳ ಪಟ್ಟಿ ಮಾಡಿದ್ದಾರೆ.

* ಕೇಂದ್ರ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು ₹3,454 ಕೋಟಿ ಬಿಡುಗಡೆ ಮಾಡಿ ಎರಡು ವಾರ ಕಳೆದರೂ ಒಂದು ನಯಾ ಪೈಸೆ ಬರ ಪರಿಹಾರ ಇನ್ನೂ ರೈತರ ಕೈಸೇರಿಲ್ಲ

* ಹೈನುಗಾರರಿಗೆ 7 ತಿಂಗಳಿಂದ ಬಾಕಿ ಇರುವ ₹700 ಕೋಟಿ ಪಾವತಿ ಬಾಕಿ ಇದೆ

* ತೆಂಗು ಬೆಳೆಗಾರರ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಇನ್ನೂ ಸಮಿತಿ ರಚಿಸಿಲ್ಲ

* ಹೆಣ್ಣು ಭ್ರೂಣ ಪತ್ತೆ ಹತ್ಯೆ ಪ್ರಕರಣದ ಜಾಲ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಇನ್ನೂ SIT ರಚನೆ ಆಗಿಲ್ಲ

* ಅಂಗನವಾಡಿಗಳಲ್ಲಿ ಊಟ ಆರೈಕೆ ಸರಿ ಇಲ್ಲದೆ 2 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಕಡಿಮೆ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ

* ಆಂಬ್ಯುಲೆನ್ಸ್ ಚಾಲಕರಿಗೆ ಮೂರು ತಿಂಗಳಿಂದ ವೇತನ ಪಾವತಿ ಆಗಿಲ್ಲ

* ರಾಜ್ಯದಲ್ಲಿ ಬಂಡವಾಳ ವೆಚ್ಚ ಶೇ 20ರಷ್ಟು ಕುಸಿತಗೊಂಡು ಅಭಿವೃದ್ಧಿ ಶೂನ್ಯತೆ ಆವರಿಸಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ

* ಸಿಇಟಿ ಪ್ರಶ್ನೆಪತ್ರಿಕೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ

* ಒಂದು ವಾರದೊಳಗೆ ಬಾಕಿ ಬಿಲ್ ಪಾವತಿ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಗಡುವು ನೀಡಿದ್ದರೂ ನಿಮ್ಮ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ

* ಹುಬ್ಬಳ್ಳಿಯ ಸಹೋದರಿ ನೇಹಾ ಅವರ ಲವ್ ಜಿಹಾದ್ ಪ್ರಕರಣದಲ್ಲಿ 120 ದಿನಗೊಳಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದ ತಮಗೆ ಪ್ರಕರಣದ ತನಿಖೆ ಚುರುಕುಗೊಳಿಸುವ ಉದ್ದೇಶವೇ ಇಲ್ಲ ಎಂದು ಬಿಜೆಪಿ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT