ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಕದ್ದಾಲಿಕೆ: ತನಿಖೆಗೆ ಅಶೋಕ ಆಗ್ರಹ

ಚೀನಾ ಯಂತ್ರಗಳಿಂದ ಕದ್ದಾಲಿಕೆ ಆರೋಪ
Published 21 ಮೇ 2024, 15:57 IST
Last Updated 21 ಮೇ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ವಿರೋಧ ಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ವಿಷಯದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಮುಖರ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. 

‘ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುತ್ತಿಲ್ಲ ಎನ್ನುವುದಾದರೆ ಕದ್ದಾಲಿಕೆ ಉಪಕರಣಗಳು ಎಲ್ಲಿವೆ ಎಂಬುದರ ಬಗ್ಗೆ ತನಿಖೆ ಮಾಡಿಸಲಿ. ಅಂತಹ ಉಪಕರಣಗಳನ್ನು ವಶಕ್ಕೆ ತೆಗೆದುಕೊಂಡರೆ ಆಗ ಯಾರು ಕದ್ದಾಲಿಕೆ ಮಾಡಿದ್ದಾರೆ? ಯಾರು ಮಾಡಿಸಿದ್ದಾರೆ ಎಂಬ ಅಂಶ ಬಯಲಿಗೆ ಬರುತ್ತದೆ’ ಎಂದರು.

‘ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರ ಬಳಿ ಇರುವ ಮಾಹಿತಿಯಡಿ ಇದನ್ನು ಹೇಳಿದ್ದಾರೆ. ಯಾರೇ ಆಗಲಿ, ಈ ರೀತಿ ಕದ್ದಾಲಿಕೆ ಮಾಡಿಸುವುದು ಅಪರಾಧ. ಅಂತಹವರನ್ನೆಲ್ಲ ಜೈಲಿಗೆ ಕಳುಹಿಸಬೇಕು. ದೂರವಾಣಿ ಕದ್ದಾಲಿಕೆಯಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಅಶೋಕ ಒತ್ತಾಯಿಸಿದರು.

ಸುಮಾರು ₹50 ಲಕ್ಷಕ್ಕೆ ಚೀನಾ ನಿರ್ಮಿತ ದೂರವಾಣಿ ಕದ್ದಾಲಿಕೆ ಉಪಕರಣಗಳು ಸಿಗುತ್ತವೆ. ಈ ರೀತಿ ಚೀನಾದಿಂದ ಎಷ್ಟು ದೂರವಾಣಿ ಕದ್ದಾಲಿಕೆ ಉಪಕರಣಗಳು ಬಂದಿವೆ. ಅವು ಯಾರ ಯಾರ ಮನೆಗಳಲ್ಲಿವೆ ಎಂಬುದನ್ನು ಪತ್ತೆ ಮಾಡಬೇಕು. ವಿದೇಶಿ ಉಪಕರಣಗಳ ಮೂಲಕ ಕದ್ದಾಲಿಕೆ ಮಾಡಿಸಿದರೆ ಇಲ್ಲಿನ ಪೊಲೀಸರಿಂದ ಏನು ಮಾಡುವುದಕ್ಕೂ ಸಾಧ್ಯವಿಲ್ಲ ಎಂದರು.

ಎಲ್ಲ ಸ್ಥಾನಗಳನ್ನು ಗೆಲ್ಲಲು ಪ್ರಯತ್ನ:

ಚುನಾವಣೆ ನಡೆಯುತ್ತಿರುವ ವಿಧಾನ ಪರಿಷತ್ತಿನ ಎಲ್ಲ ಆರು ಸ್ಥಾನಗಳನ್ನು ಗೆಲ್ಲುವ ಸಂಬಂಧ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಶೋಕ ತಿಳಿಸಿದರು.

‘ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆ ಸಂಬಂಧ ಅಭ್ಯರ್ಥಿಗಳ ಕುರಿತು ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ಗೊಂದಲಗಳೇನೂ ಇಲ್ಲ’ ಎಂದರು.

ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಸ್‌.ಸುರೇಶ್‌ ಕುಮಾರ್, ಮಾಜಿ ಸಚಿವ ಗೋವಿಂದ ಕಾರಜೋಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT