ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನವಿಡೀ ಕಾದರೂ ಬೊಮ್ಮಾಯಿಗೆ ಸಿಗದ ವರಿಷ್ಠರು

Published 7 ಆಗಸ್ಟ್ 2023, 18:29 IST
Last Updated 7 ಆಗಸ್ಟ್ 2023, 18:29 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ನಡುವೆಯೇ, ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸೋಮವಾರ ದಿನವಿಡೀ ಪ್ರಯತ್ನ ಪಟ್ಟರೂ ಯಶಸ್ಸು ಸಿಗಲಿಲ್ಲ. 

ವಿಪಕ್ಷ ನಾಯಕರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೊಮ್ಮಾಯಿ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿದ್ದವು. ಭಾನುವಾರ ರಾತ್ರಿಯೇ ದೆಹಲಿಗೆ ಬಂದಿದ್ದ ಬೊಮ್ಮಾಯಿ ಅವರು, ಸೋಮವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಸಂಸತ್‌ ಭವನದಲ್ಲಿ ವರಿಷ್ಠರ ಭೇಟಿಗೆ ಕಸರತ್ತು ನಡೆಸಿದರು. ಆದರೆ, ರಾಷ್ಟ್ರೀಯ ನಾಯಕರ ಭೇಟಿ ಲಭ್ಯವಾಗಲಿಲ್ಲ. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಬೊಮ್ಮಾಯಿ, ‘ನನಗೆ ವರಿಷ್ಠರು ಬುಲಾವ್‌ ನೀಡಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು. 

‘ಸಂಸತ್‌ ಅಧಿವೇಶನದ ಸಮಯದಲ್ಲಿ ದೆಹಲಿಗೆ ಬನ್ನಿ ಎಂದು ರಾಜ್ಯದ ಸಂಸದರು ಆಹ್ವಾನಿಸಿದ್ದರು. ನನಗೂ ಅವರನ್ನು ಭೇಟಿಯಾಗಬೇಕಿತ್ತು. ಹಾಗಾಗಿ, ಇಲ್ಲಿಗೆ ಬಂದು ಅವರೊಂದಿಗೆ ಮಾತುಕತೆ ನಡೆಸಿದೆ’ ಎಂದರು. 

‘ರಾಜ್ಯಸಭೆಯಲ್ಲಿ ದೆಹಲಿ ಸೇವಾ ವಿಷಯಗಳ ಮೇಲಿನ ನಿಯಂತ್ರಣ ಕುರಿತ ಮಸೂದೆಯ ಚರ್ಚೆ ನಡೆಯುತ್ತಿದ್ದು, ಅಮಿತ್‌ ಶಾ ಅಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಜೆ.ಪಿ.ನಡ್ಡಾ ಅವರನ್ನು ಮಂಗಳವಾರ ಭೇಟಿ ಮಾಡುವ ಉದ್ದೇಶವಿದ್ದು, ಕಾಲಾವಕಾಶ ಕೇಳಿದ್ದೇನೆ’ ಎಂದು ಅವರು ಹೇಳಿದರು. ಶಾ ಅವರು ಸಮಯಾವಕಾಶ ಕೊಟ್ಟರೆ ಭೇಟಿಯಾಗುತ್ತೇನೆ ಎಂದರು. 

ವಿರೋಧ ಪಕ್ಷದ ನಾಯಕರ ಆಯ್ಕೆ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗ ಸಂಸತ್‌ ಅಧಿವೇಶನ ನಡೆಯುತ್ತಿದೆ. ಐದು ರಾಜ್ಯಗಳ ಚುನಾವಣೆಗೆ ಸಿದ್ಧತೆ ನಡೆಸಬೇಕಿದೆ. ನಮ್ಮ ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಬಗ್ಗೆ ಗಮನ ಹರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧದ ಲಂಚ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ರಾಜಭವನ ವಿವರಣೆ ಕೇಳಿರುವ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಾಮಾನ್ಯವಾಗಿ ಯಾವುದೇ ದೂರುಗಳು ಬಂದಾಗ ರಾಜಭವನದ ಅಧಿಕಾರಿಗಳು ಸರ್ಕಾರಕ್ಕೆ ಕಳುಹಿಸುತ್ತಾರೆ. ಇದೊಂದು ಸಹಜ ಪ್ರಕ್ರಿಯೆ. ಅದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು. ಲಂಚದ ಬಗ್ಗೆ ಪತ್ರ ಬರೆದಿದ್ದರೆ ಅದೊಂದು ಗಂಭೀರ ವಿಚಾರ. ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT