ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೀ ಶಾಸಕರು, ಭಾವೀ ಸಚಿವರಿಗೆ ಅಭಿನಂದನೆ: ಬಿ.ಎಸ್‌.ಯಡಿಯೂರಪ್ಪ

ಬಿಜೆಪಿಗೆ ಅನರ್ಹ ಶಾಸಕರು
Last Updated 14 ನವೆಂಬರ್ 2019, 8:09 IST
ಅಕ್ಷರ ಗಾತ್ರ

ಬೆಂಗಳೂರು: 'ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದಿರುವ ಶಾಸಕರಿಗೆ, ಅವರ ಬೆಂಬಲಿಗರಿಗೆ ನಳೀನ್ ಕುಮಾರ್ ಕಟೀಲ್ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಭರವಸೆ ಕೊಡುತ್ತೇನೆ. ನಾವು ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಈಡೇಸ್ತೀವಿ. ವಿಶ್ವಾಸ ದ್ರೋಹ ಮಾಡಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅನರ್ಹ ಶಾಸಕರಿಗೆ ಭರವಸೆ ನೀಡಿದರು.

'ಇಂದಿನ ಮಾಜಿ ಶಾಸಕರು, ನಾಳೆಯ ಭಾವಿ ಶಾಸಕರು ಮತ್ತು ಭಾವಿ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ' ಎನ್ನುವ ಮೂಲಕ ಬಿಜೆಪಿ ಸೇರ್ಪಡೆಯಾಗಿರುವ ಅನರ್ಹ ಶಾಸಕರಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಯಡಿಯೂರಪ್ಪ ಆಡಿದರು.

ನಮಗಾಗಿ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಕೊಟ್ಟ ನಂತರ ಬಿಜೆಪಿಗೆ ಸೇರಿದ್ದಾರೆ. ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದಿರುವ ಶಾಸಕರಿಗೆ ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಈಡೇರಿಸುತ್ತೇವೆ ಎಂದರು.

ದೇಶದ ರಾಜಕಾರಣದಲ್ಲಿ ಈ ರೀತಿ 16–17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ನಮಗಾಗಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ. ಒಡಕಿನ ಮಾತು ಆಡದೆ ಎಲ್ಲ ರೀತಿಯ ಸಹಕಾರ ನೀಡಿ, ತನು ಮನ ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಿ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಮನವಿ ಮಾಡಿದರು.

ಡಿ.5ಕ್ಕೆ ಚುನಾವಣೆ, 9ಕ್ಕೆ ಫಲಿತಾಂಶ ಹೊರಬೀಳಲಿದೆ. ಗೆದ್ದ ಎಲ್ಲ ಶಾಸಕರಿಗೆ ದೊಡ್ಡ ಮೈದಾನದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಮಾಜಿ ಶಾಸಕರಿಗೆ ನಾನು ಭರವಸೆ ಕೊಡುತ್ತೇನೆ, 15ಕ್ಕೆ 15 ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ. ಇದು ನನ್ನ ಭರವಸೆ ಎಂದು ಹೇಳಿದರು.

ಕಾಗವಾಡಕ್ಕೆ ರಮೇಶ್ ಜಿಗಜಿಣಗಿ ಮತ್ತುಉಮೇಶ್‌ ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶಿವಾಜಿನಗರ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡುತ್ತಾರೆ. ನಮ್ಮೆಲ್ಲ ಸಂಸದರು ಮತ್ತು ಕಾರ್ಯಕರ್ತರು ನಿಮ್ಮ ಜೊತೆಗೆ ಇರುತ್ತಾರೆ. ಕೇಂದ್ರದ ನಾಯಕತ್ವ ನಿಮ್ಮ ಜೊತೆಗಿದೆ. ನೀವು ಅಧೀರರಾಗಬೇಕಿಲ್ಲ ಎಂದು ಯಡಿಯೂರಪ್ಪ ಅನರ್ಹ ಶಾಸಕರಲ್ಲಿ ಆತ್ಮವಿಶ್ವಾಸ ತುಂಬಿದರು.

ಪ್ರಚಾರ ಬಯಸದೇ ಅಭ್ಯರ್ಥಿಗಳ ಗೆಲುವಿಗೆ ಪರಿಶ್ರಮ ಹಾಕಿ. ನಮ್ಮ ಪಕ್ಷಕ್ಕೆ ಬಂದಿರುವವರೊಂದಿಗೆ ಪ್ರಾಮಾಣಿಕವಾಗಿ ಹೊಂದಿಕೊಂಡು ಹೋಗಬೇಕು. ನಾವು ಬಿಜೆಪಿಗೆ ಹೊಸಬರು, ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕ ಅವರಲ್ಲಿದೆ. ನಮ್ಮ ಪಕ್ಷ ಮತ್ತು ಕಾರ್ಯಕರ್ತರು ನಿಮ್ಮ ಜೊತೆಗಿದ್ದಾರೆ ಎಂದು ನಾನು ಭರವಸೆ ಕೊಟ್ಟಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT