ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕ್ಷೇತ್ರಗಳಲ್ಲೂ ತಪ್ಪು ಸಂದೇಶ ಕಳವಳಕಾರಿ: ಸಿದ್ದಲಿಂಗಯ್ಯ

ಊರು ಕೇರಿ –3, ಯಾತ್ರೆ ಕೃತಿ ಬಿಡುಗಡೆ
Last Updated 9 ಸೆಪ್ಟೆಂಬರ್ 2018, 8:55 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಕ್ಷೇತ್ರಗಳಲ್ಲೂ ತಪ್ಪು ನಿರ್ಧಾರಗಳು ಮತ್ತು ಸಂದೇಶಗಳು ಹೋಗುತ್ತಿರುವುದು ಕಳವಳಕಾರಿ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು.

ನಗರದಲ್ಲಿ ತಮ್ಮ ಕೃತಿ ‘ಊರು–ಕೇರಿ’ಯ 3ನೇ ಆವೃತ್ತಿ ಮತ್ತು ಶೂದ್ರ ಶ್ರೀನಿವಾಸ್‌ ಅವರ ಯಾತ್ರೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬದಲಾವಣೆಯ ಕಾಲಘಟ್ಟದಲ್ಲಿ ಮೌಲ್ಯಗಳೂ ಬೇರೆಯದೇ ಹಾದಿ ಹಿಡಿಯುತ್ತಿವೆ. ರಾಜಕೀಯ ವ್ಯವಸ್ಥೆಯಲ್ಲಿ ಇತ್ತೀಚೆಗಂತೂ ತೀರಾ ಕಳವಳಕಾರಿ ವಿದ್ಯಮಾನಗಳು ನಡೆಯುತ್ತಿವೆ. ಈ ಕ್ಷೇತ್ರಕ್ಕೆ ಗೌರವ, ಘನತೆಯ ಜತೆಗೆ ತಿಳಿವಳಿಕೆ ಹೊಂದಿರುವ ವ್ಯಕ್ತಿಗಳು ಬರಬೇಕು. ಅಂಥವರು ಬಂದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದರು.

ಕೃತಿ ಬಿಡುಗಡೆ ಮಾಡಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್‌ ಮಾತನಾಡಿ, ‘ಈ ಪುಸ್ತಕಗಳು ಕನ್ನಡ ಸಂಸ್ಕೃತಿಯ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸುತ್ತವೆ. ಸಿದ್ದಲಿಂಗಯ್ಯ ಅವರು ಎಲ್ಲೆಲ್ಲಾ ಇದ್ದರೋ ಅಲ್ಲೆಲ್ಲಾ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಆತ್ಮಚರಿತ್ರೆ ಅಂದರೆ ಒಂದು ಸಮುದಾಯದ ಆತ್ಮಚರಿತ್ರೆ. ಅವರ ಹಾಡುಗಳಿಗೆ ಒಂದು ಸಂಸ್ಕೃತಿಯನ್ನು ನೋಡುವ ಶಕ್ತಿ ಇದೆ’ ಎಂದರು.

‘ಶೂದ್ರ ಶ್ರೀನಿವಾಸ್‌ ಅವರದ್ದು ಎಲ್ಲರನ್ನೂ ಪ್ರೀತಿಸುವ ಗುಣ. 70ರ ದಶಕದಲ್ಲಿ ನಡೆದ ಸಾಂಸ್ಕೃತಿಕ ಚಳವಳಿಗಳಲ್ಲಿ ಅವರ ಪಾತ್ರ ಇದೆ’ ಎಂದರು.

ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಮಾತನಾಡಿ, ‘ಊರು–ಕೇರಿಯ ಭಾಗ 1 ಸಿದ್ದಲಿಂಗಯ್ಯ ಅವರ ಬಾಲ್ಯ ಜೀವನವನ್ನು ಹೇಳಿದೆ. 2ನೇ ಭಾಗ ವೃತ್ತಿ ಬದುಕನ್ನು ಹೇಳಿದೆ. 3ನೇ ಭಾಗವು ಅವರ ಸಾರ್ವಜನಿಕ ಬದುಕನ್ನು ತೆರೆದಿಟ್ಟಿದೆ. ಮೂರೂ ಕೃತಿಗಳಲ್ಲಿ ಹಾಸ್ಯ ಸ್ಥಾಯಿಯಾಗಿ ಇದೆ. ಹಸಿವಿನ ಚಿತ್ರಣ ಸ್ಥಿರವಾಗಿ ಕಾಣಿಸುತ್ತದೆ. ಹಾಸ್ಯದ ಮೂಲಕ ಸಾಮರಸ್ಯದ ಸಂದೇಶ ಕೊಡುವ ಕೆಲಸ ನಡೆದಿದೆ’ ಎಂದರು.

ಪತ್ರಕರ್ತ ಜಿ.ಎನ್‌.ಮೋಹನ್‌ ಮಾತನಾಡಿ, ‘ಊರು ಕೇರಿ ಮತ್ತು ಯಾತ್ರೆ ಕೃತಿಗಳು ಒಂದೇ ದಾರಿಯಲ್ಲಿ ಕ್ರಮಿಸುತ್ತದೆ. ಎರಡೂ ಸಮಕಾಲೀನ ಚಿಂತನೆ ಹಾಗೂ ಮೌಲ್ಯಗಳನ್ನು ಒಳಗೊಂಡಿವೆ. ಕೆಲವೆಡೆ ಮಾತ್ರ ಸ್ವಲ್ಪ ಭಿನ್ನವಾದ ವ್ಯಾಖ್ಯಾನಕ್ಕೆ ಒಳಗಾಗಿವೆ’ ಎಂದರು.

ಜಾಗತೀಕರಣ ನಮ್ಮ ಮಾದರಿಗಳನ್ನು ಬದಲಾಯಿಸಿದೆ. ಈ ಮಾದರಿಯಲ್ಲಿ ಅಗೋಚರ ಶತ್ರುಗಳು ಇದ್ದಾರೆ. ಮಾಹಿತಿಯನ್ನೇ ಜ್ಞಾನ ಎಂದು ನಂಬಿಸಲಾಗುತ್ತಿದೆ. ವಾಸ್ತವವಾಗಿ ಮಾಹಿತಿ ಎನ್ನುವುದು ಜ್ಞಾನ ಅಲ್ಲ ಎಂದರು. ಲೇಖಕ ಶೂದ್ರ ಶ್ರೀನಿವಾಸ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT