ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ಯ ಮೇಲೆ ಕಾರ್ಮೋಡ!

ಯೋಜನೆ ಮುಂದುವರಿಸಬೇಕೇ?: ಆದೇಶಕ್ಕೆ ಕಾದಿರುವ ಅಧಿಕಾರಿಗಳು
Published 29 ಜುಲೈ 2023, 22:55 IST
Last Updated 29 ಜುಲೈ 2023, 22:55 IST
ಅಕ್ಷರ ಗಾತ್ರ

ಮೈಸೂರು/ ಮಂಗಳೂರು: ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ಯ ಮೇಲೆ ಕಾರ್ಮೋಡ ಕವಿದಿದೆ. ಪ್ರಸಕ್ತ ಸಾಲಿನಲ್ಲಿ ಮುಂದುವರಿಸಬೇಕೋ, ಬೇಡವೋ ಎಂಬ ಬಗ್ಗೆ ಈಗಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ.

2021–22ನೇ ಸಾಲಿನಿಂದ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಹಿಂದಿನ ಸಾಲಿನವರೆಗೂ ಚಾಲ್ತಿಯಲ್ಲಿತ್ತು. 19 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದರು. ‘ಯೋಜನೆಯನ್ನು ಈ ಸರ್ಕಾರ ರದ್ದುಪಡಿಸಿದೆ’ ಎಂದು ಬಿಜೆಪಿ ಆರೋಪಿಸಿದೆ. ‘ಸರ್ಕಾರದಿಂದ ಅಧಿಕೃತ ನಿರ್ದೇಶನ ಬಂದಿಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಯೋಜನೆ ಮುಂದುವರಿಸಬೇಕು ಮತ್ತು ಮೊತ್ತ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

2021–22ನೇ ಸಾಲಿನಲ್ಲಿ 10.44 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು ₹464 ಕೋಟಿ ವಿತರಣೆಯಾಗಿದ್ದರೆ, 2022–23ನೇ ಸಾಲಿನಲ್ಲಿ 8.56 ಲಕ್ಷ ವಿದ್ಯಾರ್ಥಿಗಳಿಗೆ ₹ 375 ಕೋಟಿ ವಿತರಣೆಯಾಗಿದೆ.

ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಂಡಿರುವ ಈ ಯೋಜನೆಯಡಿ ಮೊದಲ ವರ್ಷ ವಿದ್ಯಾರ್ಥಿಗಳು ತಾವು ಕಲಿಯುವ ಶಿಕ್ಷಣ ಸಂಸ್ಥೆ ಮೂಲಕ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. 2022ನೇ ಸಾಲಿನಲ್ಲಿ ನೇರವಾಗಿ ಸ್ಕಾಲರ್‌ಷಿಪ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿತ್ತು.

ರೈತರ ಮಕ್ಕಳು ಶಿಕ್ಷಣ ಮುಂದುವರಿಸಬೇಕೆಂಬ ಆಶಯದಿಂದ ಪಿಯುಸಿ ಹಂತದಿಂದ ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ₹2,500ರಿಂದ ಗರಿಷ್ಠ ₹11ಸಾವಿರದವರೆಗೆ ಇದನ್ನು ನೀಡಲಾಗುತ್ತಿದೆ.

‘ಪದವಿ ಓದುವಾಗ ₹5,000 ವಿದ್ಯಾರ್ಥಿವೇತನ ದೊರೆತಿತ್ತು. ಈಗ ಸ್ನಾತಕೋತ್ತರ ಪದವಿ ಓದುತ್ತಿದ್ದು, 2022–23ನೇ ಸಾಲಿನ ವಿದ್ಯಾರ್ಥಿ ವೇತನ ₹10ಸಾವಿರ ಕಳೆದ ಮಾರ್ಚ್‌ನಲ್ಲೇ ಖಾತೆಗೆ ಜಮಾ ಆಗಿದೆ. ಇದರಿಂದ ಶೈಕ್ಷಣಿಕ ವೆಚ್ಚಕ್ಕೆ ಪಾಲಕರಿಂದ ಹಣ ಕೇಳುವ ಪ್ರಮೇಯ ತಪ್ಪುತ್ತದೆ. ರೈತರ ಮಕ್ಕಳಲ್ಲಿ ಹೆಚ್ಚಿನವರು ಬಿಪಿಎಲ್ ಕಾರ್ಡ್‌ ಹೊಂದಿದವರೇ ಇರುತ್ತಾರೆ. ಹೀಗಾಗಿ, ವಿದ್ಯಾನಿಧಿ ಯೋಜನೆಯಿಂದ ತುಂಬಾ ಅನುಕೂಲವಾಗಿದ್ದು, ಈಗಿನ ಸರ್ಕಾರ ಈ ಮೊತ್ತ ಹೆಚ್ಚಳ ಮಾಡಬೇಕು’ ಎಂದು ಮಂಗಳೂರಿನ ವಿದ್ಯಾರ್ಥಿ ಶಂಕರ್ ಓಬಳಬಂಡಿ ವಿನಂತಿಸಿದರು.

‘ವಿಧಾನಸಭೆ ಚುನಾವಣೆ ಘೋಷಣೆಯಾಗುವ ಕೆಲದಿನಗಳ ಮೊದಲು ನಮ್ಮ ಬ್ಯಾಂಕ್ ಖಾತೆಗೆ ಈ ಸಾಲಿನ ರೈತ ವಿದ್ಯಾನಿಧಿ ಮೊತ್ತ ಜಮಾ ಆಗಿದೆ. ಪದವಿ ವಿದ್ಯಾರ್ಥಿಗಳಿಗೆ ನೀಡುವ ₹5,000 ಮೊತ್ತವನ್ನು ಹೆಚ್ಚಳ ಮಾಡಿದರೆ ಅನುಕೂಲ’ ಎಂದು ನಗರದ ಕಾಲೇಜಿನ ಬಿ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ಶಂಕರ್ ಯಮನೂರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT