ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮಾರಾಟ: 8 ಆರೋಪಿಗಳ ಬಂಧನ

ತಮಿಳುನಾಡಿನಿಂದ ಹಸುಗೂಸು ತಂದು ಮಾರಾಟ
Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಹಸುಗೂಸುಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಹಾಲಕ್ಷ್ಮಿ, ತಮಿಳುನಾಡಿನ ಈರೋಡ್‌ ಕಣ್ಣನ್ ರಾಮಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ ಮತ್ತು ಮುರುಗೇಶ್ವರಿ ಎಂಬುವರನ್ನು ಬಂಧಿಸಲಾಗಿದೆ.

ಸಿಸಿಬಿಯವರು ಈ ಆರೋಪಿಗಳನ್ನು ಹತ್ತು ದಿನ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ 20 ದಿನದ ಮಗುವೊಂದನ್ನು ರಕ್ಷಿಸಿ, ಮಕ್ಕಳ ಸಾಂತ್ವನ ಕೇಂದ್ರದಲ್ಲಿ ಇಡಲಾಗಿದೆ.

ಆರೋಪಿಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ವಿವಿಧೆಡೆ ಮಕ್ಕಳ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿದ್ದರು. ಅವರು 10 ಮಕ್ಕಳನ್ನು ಮಾರಾಟ ಮಾಡಿರುವ ಪೋಷಕರ ವಿಳಾಸ ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್‌ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳು ತಮಿಳುನಾಡಿನ ಕೆಲವು ಆಸ್ಪತ್ರೆಗಳ ವೈದ್ಯರ ಜೊತೆಗೆ ಸಂಪರ್ಕ ಹೊಂದಿದ್ದರು. ಹಣದ ಅವಶ್ಯ ಇರುವ ಮಹಿಳೆಯರನ್ನು ಪತ್ತೆ ಮಾಡುತ್ತಿದ್ದರು. ಅವರಿಗೆ ಕೃತಕ ಗರ್ಭಧಾರಣೆಗೆ ಒಳಗಾಗುವಂತೆ ಮನವೊಲಿಸುತ್ತಿ ದ್ದರು. ಕೃತಕ ಗರ್ಭಧಾರಣೆಗೆ ಒಳಗಾದ ಮಹಿಳೆ ಯರಿಗೆ ಹಣ ನೀಡು ತ್ತಿದ್ದರು. ಗರ್ಭಿಣಿಯರಿಗೆ ಆರೋಪಿಗಳೇ ಆರೈಕೆ ಮಾಡುತ್ತಿದ್ದರು’ ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ.

ಅಂಡಾಣು ಮಾರಾಟ: ಆರೋಪಿಗಳು ಹಸುಗೂಸುಗಳನ್ನು ಮಾರಾಟ ಮಾಡುವುದಲ್ಲದೇ, ತಮಿಳುನಾಡು ಮತ್ತು ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಅಕ್ರಮವಾಗಿ ತಮ್ಮ ಅಂಡಾಣುಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಗಂಡು ಮಗುವಿಗೆ ₹ 8ರಿಂದ ₹10 ಲಕ್ಷ: ‘ಆರ್ಥಿಕ ತೊಂದರೆಯಿಂದಾಗಿ ಮಕ್ಕಳನ್ನು ಸಾಕುವುದು ಕಷ್ಟವಾಗುತ್ತಿದೆ ಎಂದು ಗರ್ಭಪಾತ ಮಾಡಿಸಲು ಬರುವ ಗರ್ಭಿಣಿಯರನ್ನು ವೈದ್ಯರ ಮೂಲಕವೇ ಪರಿಚಯ ಮಾಡಿಕೊಳ್ಳುತ್ತಿದ್ದರು. ಗರ್ಭಪಾತ ಮಾಡಿಸಿಕೊಳ್ಳದಂತೆ ಅವರ ಮನವೊಲಿಸುತ್ತಿದ್ದರು. ಹಣದ ಆಮಿಷವೊಡ್ಡಿ ಮಗುವಿಗೆ ಜನ್ಮ ನೀಡುವಂತೆ ಕೋರುತ್ತಿದ್ದರು. ಅಂತಹ ಮಹಿಳೆಯರಿಗೆ ಹಣ ಕೊಟ್ಟು, ತಮ್ಮ ಮನೆ ಅಥವಾ ಪರಿಚಯಸ್ಥರ ಮನೆಯಲ್ಲೇ ಅವರನ್ನು 9 ತಿಂಗಳು ಆರೈಕೆ ಮಾಡುತ್ತಿದ್ದರು. ತಮ್ಮ ಸಂಪರ್ಕದಲ್ಲಿದ್ದ ತಮಿಳುನಾಡಿನ ವೈದ್ಯರಿಂದ ಹೆರಿಗೆ ಮಾಡಿಸುತ್ತಿದ್ದರು’

‘20 ರಿಂದ 25 ದಿನಗಳವರೆಗೆ ಮಗುವನ್ನು ತಾಯಿ ಬಳಿ ಬಿಟ್ಟು, ನಂತರ ಆಕೆಗೆ ₹ 2 ಲಕ್ಷದಿಂದ ₹2.50 ಲಕ್ಷದವರೆಗೆ ಕೊಟ್ಟು ಮಗು ಖರೀದಿಸುತ್ತಿದ್ದರು. ಆ ಹಸುಗೂಸನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು’.

ಮಗು ಬೇಕಾದವರ ಪತ್ತೆ: ಆರೋಪಿಗಳು ಮಗು ಬೇಕಾದ ದಂಪತಿಗಳನ್ನು ಪತ್ತೆ ಮಾಡುತ್ತಿದ್ದರು. ಅವರಿಗೆ ವಾಟ್ಸ್‌ಆ್ಯಪ್‌ ಮೂಲಕ ಮಗುವಿನ ಫೋಟೊ ಕಳುಹಿಸುತ್ತಿದ್ದರು. ಮಗುವಿನ ಬಣ್ಣ, ಲಿಂಗ ತಿಳಿದ ಪೋಷಕರು ಮಗು ಖರೀದಿಗೆ ಮುಂದಾಗುತ್ತಿದ್ದರು. ಗಂಡು ಮಗುವಿಗೆ ₹ 8 ಲಕ್ಷದಿಂದ ₹10 ಲಕ್ಷ, ಹೆಣ್ಣು ಮಗುವಿಗೆ ₹ 4 ಲಕ್ಷದಿಂದ ₹ 5 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ನಕಲಿ ದಾಖಲೆ ಸೃಷ್ಟಿ: ‘ಮಾರಾಟವಾದ ಮಗುವಿಗೆ ಬೇಕಾದ ಎಲ್ಲ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸುತ್ತಿದ್ದರು. ಜನನ ಪ್ರಮಾಣ ಪತ್ರಕ್ಕೆ ಬೇಕಾದ ಪೋಷಕರ ಆಧಾರ್ ಕಾರ್ಡ್, ಆಸ್ಪತ್ರೆಯ ವೈದ್ಯರ ಸಹಿ ಕೂಡ ನಕಲು ಮಾಡಿ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಪರಸ್ಪರ ಪರಿಚಯಸ್ಥರು

ಆರೋಪಿಗಳ ಪೈಕಿ ತಮಿಳುನಾಡಿನ ಆರು ಮಹಿಳೆಯರು ಈ ಹಿಂದೆ ಐವಿಎಫ್‌ ಕೇಂದ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಮಹಾಲಕ್ಷ್ಮಿ ಅಲ್ಲೇ ಕೆಲಸದಲ್ಲಿ ಇದ್ದಳು. ಅವರು ಕೆಲಸ ಮಾಡುತ್ತಿದ್ದ ಕೇಂದ್ರಗಳು ಆರು ವರ್ಷಗಳ ಹಿಂದೆ ಬಂದ್ ಆಗಿದ್ದವು. ಎಲ್ಲರೂ ಕೆಲಸ ಬಿಟ್ಟಿದ್ದರು. ಎಲ್ಲರೂ ಪರಿಚಯಸ್ಥರಾಗಿದ್ದರು. ಕೆಲಸ ಬಿಟ್ಟ ಮೇಲೆ ಮಕ್ಕಳಿಲ್ಲದ ಪೋಷಕರಿಗೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಅದಾದ ಮೇಲೆ ಮಕ್ಕಳ ಮಾರಾಟಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದರು.

ಮದ್ಯ ವ್ಯಸನಿ ನೀಡಿದ್ದ ಮಾಹಿತಿ

ರಾಜರಾಜೇಶ್ವರಿ ನಗರದಲ್ಲಿ ಮದ್ಯವ್ಯಸನಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಹಸುಗೂಸು ಮಾರಾಟ ಜಾಲ ಪತ್ತೆಯಾಗಿದೆ. ನ.24ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಇದಾದ ಮೇಲೆ ಕಾರ್ಯಾಚರಣೆ ನಡೆಸಿ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಐದು ತಿಂಗಳ ಹಿಂದೆ ಬೆಂಗಳೂರಿನ ಮಹಾಲಕ್ಷ್ಮಿ, ತಮಿಳುನಾಡಿನ ಗೋಮತಿಗೆ ಗಂಡು ಮಗುವೊಂದು ಬೇಕೆಂದು ಕರೆ ಮಾಡಿ ತಿಳಿಸಿದ್ದರು. ಹೀಗಾಗಿ ಐದು ತಿಂಗಳ ಹಿಂದೆ ಮುರುಗೇಶ್ವರಿಯನ್ನು ಗೋಮತಿ ಬೆಂಗಳೂರಿಗೆ ಕರೆತಂದು ರಾಜಾಜಿನಗರ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿ ಆರೈಕೆ ಮಾಡಿದ್ದರು. 25 ದಿನಗಳ ಹಿಂದೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು. 20 ದಿನಗಳ ಹಿಂದೆ ಅಲ್ಲಿಯೇ ಆಕೆಗೆ ಗಂಡು ಮಗು ಜನಿಸಿತ್ತು. ಬಳಿಕ ತಮಿಳುನಾಡಿನಿಂದ ಇತರೆ ಆರೋಪಿಗಳು ಬಂದು ಮಗು ಮಾರಾಟ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ.

ಇದುವರೆಗೆ ಆರೋಪಿಗಳು 60 ಹಸುಗೂಸುಗಳನ್ನು ಮಾರಾಟ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇನ್ನು 10 ಮಕ್ಕಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಮಕ್ಕಳಿಲ್ಲದ ದಂಪತಿಗಳಿಂದ ಮುಂಗಡ ಹಣ ಪಡೆದಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT