ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ, ಪ್ರಧಾನಿ ಮಾಡುತ್ತೇನೆಂದರೂ ಬಿಜೆಪಿಗೆ ಹೋಗೋಲ್ಲ: ಸಿದ್ದರಾಮಯ್ಯ

Published 3 ಏಪ್ರಿಲ್ 2024, 13:27 IST
Last Updated 3 ಏಪ್ರಿಲ್ 2024, 13:27 IST
ಅಕ್ಷರ ಗಾತ್ರ

ಮೈಸೂರು: ‘ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡುತ್ತೇನೆ ಎಂದರೂ ಬಿಜೆಪಿಗೆ ಹೋಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಅವರು ಮಾತನಾಡಿದರು.

‘ನಮಗೆ ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕೀಯ ಶಕ್ತಿ ಬರುತ್ತದೆ. ಬಿಜೆಪಿ, ಆರ್‌ಎಸ್‌ಎಸ್‌ ಕಡೆ ಯಾರೂ ತಲೆ ಹಾಕಬಾರದು’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ಶೂದ್ರರು, ದಲಿತರು ಹಾಗೂ ಮಹಿಳೆಯರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಯೊಳಗೆ ಪ್ರವೇಶವನ್ನೇ ಕೊಡುವುದಿಲ್ಲ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿಯಾಗಿವೆ. ಹೀಗಾಗಿ ಮೀಸಲಾತಿಯನ್ನು ಅವು ಇಷ್ಟಪಡುವುದಿಲ್ಲ. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ. ಅದು ಶೋಷಿತ ಜನ ಸಮುದಾಯಗಳ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರಬೇಕು’ ಎಂದರು.

ಬಿಜೆಪಿ ಹುನ್ನಾರ ಅರಿಯಿರಿ:

‘ಮನುಸ್ಮೃತಿಪ್ರೇರಿತ ಅಮಾನವೀಯ ಪದ್ಧತಿಗಳು ರದ್ದಾಗಿದ್ದು ನಮ್ಮ ಸಂವಿಧಾನದಿಂದ. ಹೀಗಾಗಿ ಈ ಸಂವಿಧಾನ ಬದಲಾಯಿಸಿ ಮತ್ತೆ ಮನುಸ್ಮೃತಿ ತರಬೇಕು ಎನ್ನುವುದು ಬಿಜೆಪಿ–ಆರ್‌ಎಸ್‌ಎಸ್‌ನವರ ಹುನ್ನಾರ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಆರ್‌ಎಸ್‌ಎಸ್‌, ಬಿಜೆಪಿ ಜೊತೆ ಜೆಡಿಎಸ್ ಸೇರಿಕೊಂಡಿದೆಯಲ್ಲಾ, ಇದನ್ನು ಟೀಕಿಸಬಾರದಾ? ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಅಭಿವೃದ್ಧಿ ಹಣದಲ್ಲಿ ಶೇ24.1ರಷ್ಟು ಹಣ ಮೀಸಲಿಡಬೇಕು ಎನ್ನುವ ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಪ್ರಗತಿಪರ ಕಾನೂನನ್ನು ಇಡಿ ದೇಶದಲ್ಲಿ ಬಿಜೆಪಿಯ ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಮಾಡಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ. ಇದನ್ನೆಲ್ಲಾ ಜನ ಸಮುದಾಯ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

‘ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ವಿರೋಧಿಸಿದ್ದು ಇದೇ ಬಿಜೆಪಿ ತಾನೇ? ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಬದುಕಿಗೆ ಕೊಳ್ಳಿ ಡುವವರೊಂದಿಗೆ ಸೇರದೇ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಬೇಕು’ ಎಂದು ಕರೆ ನೀಡಿದರು.

ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮತ್ತು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT