ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ

ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರಿಂದ ಕೃತ್ಯ;
Last Updated 1 ಅಕ್ಟೋಬರ್ 2018, 19:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ನುಗ್ಗಿದ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ದಾಂಧಲೆ ನಡೆಸಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು (ಎನ್ಎಸ್‌ಎಸ್‌) ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಆಯೋಜಿಸಿತ್ತು. ಈ ವೇಳೆ ಒಳನುಗ್ಗಿ ಬಂದ ಕಾಕತಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ ಹಾಗೂ ಸಂಗಡಿಗರು, ಈ ಕಾರ್ಯಕ್ರಮಕ್ಕೆ ಶಾಸಕರನ್ನು ಏಕೆ ಆಹ್ವಾನಿಸಿಲ್ಲವೆಂದು ಕೂಗಾಡಿ, ರಾದ್ಧಾಂತ ನಡೆಸಿದರು.

ಆಕ್ರೋಶದಿಂದ ಪೀಠೋಪಕರಣಗಳನ್ನು ಎತ್ತಿ ಬಿಸಾಡಿದರು. ಹೂವಿನ ಕುಂಡಗಳನ್ನು ಒಡೆದುಹಾಕಿದರು. ಕಿಟಕಿಯ ಗಾಜುಗಳನ್ನು ಒಡೆದರು. ಗಾಜಿನ ಚೂರುಗಳು ಕೆಲವರಿಗೆ ತಾಗಿ, ನೆಲದ ಮೇಲೆ ರಕ್ತ ಚೆಲ್ಲಾಡಿತು. ಘಟನೆಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿಯರು ರಕ್ಷಣೆಗೆ ಮೊರೆಯಿಟ್ಟರು. ದಾಂಧಲೆಕೋರರು ಹಾಗೂ ವಿದ್ಯಾರ್ಥಿಗಳ ನಡುವೆ ಕೆಲಹೊತ್ತು ಜಟಾಪಟಿ ನಡೆಯಿತು.

ಕುಲಪತಿ ಘೇರಾವ್‌:

ಕುಲಪತಿ ಶಿವಾನಂದ ಹೊಸಮನಿ ಅವರನ್ನು ಸುತ್ತುವರಿದ ದಾಂಧಲೆಕೋರರು, ವಿಶ್ವವಿದ್ಯಾಲಯದ ಕಾರ್ಯಕ್ರಮಗಳಿಗೆ ಶಾಸಕರನ್ನು ಕಡ್ಡಾಯವಾಗಿ ಕರೆಯಲೇಬೇಕು ಎಂದು ಒತ್ತಾಯಿಸಿದರು.

ಬಿಜೆಪಿಮಯವಾಗಿದೆ– ಆರೋಪ:

‘ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನನಗೆ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕುಲಪತಿ ಅವರು ಆಹ್ವಾನ ನೀಡುತ್ತಿಲ್ಲ. ಅದನ್ನು ಪ್ರಶ್ನಿಸಲು ವಿಶ್ವವಿದ್ಯಾಲಯಕ್ಕೆ ಹೋಗಿದ್ದೇವು. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಲ್ಲ, ನೂಕು ನುಗ್ಗಲು ಆಗಿದೆ ಅಷ್ಟೇ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊನ್ನೆಯಷ್ಟೇ ವಿಶ್ವವಿದ್ಯಾಲಯದ ಬಳಿ ಅಂಡರ್‌ಪಾಸ್‌ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಸದ, ಬಿಜೆಪಿಯ ಸುರೇಶ ಅಂಗಡಿ ಅವರನ್ನೊಬ್ಬರನ್ನು ಮಾತ್ರ ಕುಲಪತಿಯವರು ಆಹ್ವಾನಿಸಿದ್ದರು. ಸ್ಥಳೀಯ ಶಾಸಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ವಿಶ್ವವಿದ್ಯಾಲಯವನ್ನು ಬಿಜೆಪಿಮಯ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಸಂಪರ್ಕಕ್ಕೆ ಸಿಗದ ವಿಸಿ:

ಪ್ರತಿಕ್ರಿಯೆಗೆ ಕುಲಪತಿ ಶಿವಾನಂದ ಹೊಸಮನಿ ಲಭ್ಯವಾಗಲಿಲ್ಲ. ಅವರನ್ನು ಸಂಪರ್ಕಿಸಲು ಹಲವು ಬಾರಿ ದೂರವಾಣಿ ಕರೆ ಮಾಡಲಾಯಿತು. ಅವರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT