ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಚಲುವರಾಯಸ್ವಾಮಿ ವಿರುದ್ಧ 7 ಅಧಿಕಾರಿಗಳ ದೂರು: ಸಿಎಸ್‌ಗೆ ರಾಜಭವನ ಪತ್ರ

Published 7 ಆಗಸ್ಟ್ 2023, 16:39 IST
Last Updated 7 ಆಗಸ್ಟ್ 2023, 16:39 IST
ಅಕ್ಷರ ಗಾತ್ರ

ಬೆಂಗಳೂರು/ಮಂಡ್ಯ: ‘ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಲಂಚ ನೀಡುವಂತೆ ತಮ್ಮನ್ನು ಒತ್ತಾಯಿಸಿದರು’ ಎಂದು ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರಾಜಭವನ ಪತ್ರ ಬರೆದಿದೆ.

ಕೃಷಿ ಇಲಾಖೆಯಲ್ಲಿ ಎಲ್ಲ ಹಂತದ ಅಧಿಕಾರಿಗಳ ಹುದ್ದೆಗೆ ತಕ್ಕಂತೆ ದರ ನಿಗದಿ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಅದಾದ ಬಳಿಕ, ಯಾವ ಹುದ್ದೆಗೆ ಎಷ್ಟು ದರ ಎಂಬ ಪಟ್ಟಿಯೊಂದು ಬಿಡುಗಡೆಯಾಗಿತ್ತು. ಅದು ತಣ್ಣಗಾದ ಬೆನ್ನಲ್ಲೇ, ಮತ್ತೊಂದು ಪತ್ರ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ವರ್ಗಾವಣೆಯ ಗುಸುಗುಸು ಈಗ ರಾಜಭವನದ ಕದ ತಟ್ಟಿದೆ ಎನ್ನಲಾಗಿದ್ದು, ಖುದ್ದು ರಾಜಭವನವೇ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಹೊಸ ಬೆಳವಣಿಗೆಯಾಗಿದೆ. 

‘ಈ ಪತ್ರವೇ ನಕಲಿ ಹಾಗೂ ನನ್ನ ವಿರುದ್ಧ ನಡೆಸುತ್ತಿರುವ ಕುತಂತ್ರ’ ಎಂದು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಜಭವನದ ಪತ್ರ:

ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರ ಪರವಾಗಿ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ.ಪ್ರದೀಪ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮ ಅವರಿಗೆ ಬರೆದಿರುವ ಪತ್ರ ಸೋಮವಾರ ಬಹಿರಂಗಗೊಂಡಿದೆ. 

‘ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಯು ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಅಧಿಕಾರಿಗಳು ಉಲ್ಲೇಖಿಸಿರುವಂತೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ₹6 ಲಕ್ಷದಿಂದ ₹8 ಲಕ್ಷದವರೆಗೆ ನೀಡುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಲಂಚ ಕೇಳುವ ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲು ಕ್ರಮ ವಹಿಸದಿದ್ದರೆ ಅಧಿಕಾರಿಗಳು ಕುಟುಂಬದ ಸದಸ್ಯರ ಜತೆಗೆ ವಿಷ ಕುಡಿಯುವುದಾಗಿ ತಿಳಿಸಿದ್ದಾರೆ. ಈ ದೂರನ್ನು ನಿಯಮದ ಅನುಸಾರ ಪರಿಶೀಲಿಸಿ, ಸೂಕ್ತ ಕ್ರಮವಹಿಸಬೇಕು’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೂಚಿಸಿದ್ದಾರೆ.

ರಾಜಭವನದಿಂದ ಇದೇ 1ರಂದು ಮುಖ್ಯಕಾರ್ಯದರ್ಶಿಯವರಿಗೆ ಪತ್ರ ರವಾನೆಯಾಗಿದ್ದು, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇದೇ 3ರಂದು ಪತ್ರವನ್ನು ಸ್ವೀಕರಿಸಿ, ಸಹಿ ಮಾಡಿದ್ದಾರೆ.

ರಾಜಭವನಕ್ಕೆ ಕೃಷಿ ಅಧಿಕಾರಿಗಳು ಪತ್ರ ಬರೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸಚಿವ ಚಲುವರಾಯಸ್ವಾಮಿ ಅವರು ಪತ್ರ ಬರೆದ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ‘ತಾವು ಅಂತಹ ಪತ್ರ ಬರೆದಿಲ್ಲ’ ಎಂದು ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ ಎಂಬ ಸುದ್ದಿಯೂ ಹರಡಿದೆ.

ವರ್ಗಾವಣೆ ದರ ಪಟ್ಟಿ ಆರೋಪ:

ಕಳೆದ ವಿಧಾನಸಭಾ ಅಧಿವೇಶನದ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು, ಕೃಷಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಮತ್ತು ಪ್ರತಿಯೊಂದು ಹುದ್ದೆಗೂ ದರ ಪಟ್ಟಿ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ದರ ಪಟ್ಟಿಯೂ ಸೋರಿಕೆ (ಎಕ್ಸೆಲ್‌ಶೀಟ್) ಆಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಇದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಗಿತ್ತು.

ಅಲ್ಲದೇ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಜಗದೀಶ್‌ ಆತ್ಮಹತ್ಯೆ ಪ್ರಯತ್ನದ ವಿಚಾರವಾಗಿ ಚಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ಮಧ್ಯೆ ವಿಧಾನಸಭೆಯಲ್ಲಿ ಜಟಾಪಟಿ ನಡೆದಿತ್ತು. ಸಚಿವರ ಒತ್ತಾಸೆಯಿಂದಲೇ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ  ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಗರಿಷ್ಠ ಮಟ್ಟ ತಲುಪಿದೆ. ಹಣ ಕೊಟ್ಟವರಿಗೆ ಹುದ್ದೆಗಳನ್ನು ಹರಾಜು ಹಾಕಲಾಗುತ್ತಿದೆ
- ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಶಾಸಕ
ಮಂಡ್ಯದಲ್ಲಿ ನಾವು ಏಳಕ್ಕೆ ಆರು ಗೆದ್ದು ಬಿಟ್ಟಿದ್ದೀವಲ್ಲ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ತನಿಖೆ ಮಾಡಿಸೋಣ ಬಿಡಿ
- ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ
ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ ಅಗತ್ಯ ಕಂಡು ಬಂದಲ್ಲಿ ತನಿಖೆ ನಡೆಸುತ್ತೇವೆ
- ಸಿದ್ದರಾಮಯ್ಯ ಮುಖ್ಯಮಂತ್ರಿ
ತನಿಖೆಗೆ ಸಿಎಂಗೆ ಮನವಿ:
ಚಲುವರಾಯಸ್ವಾಮಿ ‘ಕೆಲವರು ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಹಿಂದೆ ಬಸ್‌ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಇದೇ ರೀತಿ ಕುತಂತ್ರ ಮಾಡಿದ್ದರು. ಇದೊಂದು ನಕಲಿ ಪತ್ರವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು. ‘ಕೃಷಿ ಇಲಾಖೆ ಜಂಟಿ ನಿರ್ದೇಶಕ ಈಗಾಗಲೇ ಸಹಾಯಕ ನಿರ್ದೇಶಕರ ಜೊತೆ ಆನ್‌ಲೈನ್‌ ಸಭೆ ನಡೆಸಿದ್ದಾರೆ. ಯಾರೂ ಕೂಡ ಈ ರೀತಿ ಪತ್ರ ಬರೆದಿಲ್ಲ ಎಂದು ತಿಳಿಸಿರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಿಂದ ಅದೊಂದು ನಕಲಿ ಪತ್ರ ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಸೂಚಿಸಿದ್ದೇನೆ’ ಎಂದರು.
ಪತ್ರ ಬರೆದಿಲ್ಲ: ಜೆ.ಡಿ ಸ್ಪಷ್ಟನೆ
‘ನಮ್ಮ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ ನಮ್ಮ ಜಿಲ್ಲೆಯಿಂದ ಯಾವುದೇ ದೂರು ರಾಜ್ಯಪಾಲರ ಕಚೇರಿಗೆ ಹೋಗಿಲ್ಲ’ ಎಂದು ಕೃಷಿ ಇಲಾಖೆಯ ಮಂಡ್ಯದ ಜಂಟಿ ನಿರ್ದೇಶಕ ವಿ.ಎಸ್‌.ಅಶೋಕ್‌ ಹೇಳಿದರು. ‘ಎಲ್ಲಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ ಎಂದು ಎಲ್ಲರೂ ತಿಳಿಸಿದ್ಧಾರೆ. ಈ ಬಗ್ಗೆ ಸಚಿವರು ವಿವರಣೆ ಕೋರಿದ್ದರು. ನಮ್ಮ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT