ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆಗೆ ಶಾಸಕರ ಹಾಜರಿ ಕಡ್ಡಾಯ: ಕಾಂಗ್ರೆಸ್ ಸೂಚನೆ

Last Updated 29 ಆಗಸ್ಟ್ 2022, 2:29 IST
ಅಕ್ಷರ ಗಾತ್ರ

ಬೆಂಗಳೂರು: ‌ರಾಜ್ಯದಲ್ಲಿ ಸೆಪ್ಟೆಂಬರ್‌ 30ರಿಂದ 21 ದಿನ‌ ನಡೆಯಲಿರುವ ‘ಭಾರತ ಒಗ್ಗೂಡಿಸಿ’ (ಭಾರತ್‌ ಜೋಡೋ) ಪಾದಯಾತ್ರೆಯಲ್ಲಿ ಪಕ್ಷದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಪಾದಯಾತ್ರೆಯ ಸ್ವರೂಪ, ಸಿದ್ಧತೆ ಮತ್ತಿತರ ವಿವರಗಳನ್ನು ಚರ್ಚಿಸುವುದಕ್ಕಾಗಿಯೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ರಾತ್ರಿ ಸಭೆ ನಡೆಯಿತು.

‘ನಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಸಾಗುವುದಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯಾವುದೇ ಶಾಸಕರು ಕಾರ್ಯಕ್ರದಿಂದ ದೂರ ಉಳಿಯಬಾರದು. ಎಲ್ಲ ಶಾಸಕರೂ ತಮಗೆ ನಿಗದಿಪಡಿಸಿದ ದಿನದಂದು ಪಾದಯಾತ್ರೆಯಲ್ಲಿ ಭಾಗವಹಿಸಲೇಬೇಕು’ ಎಂದು ಸಿದ್ದರಾಮಯ್ಯ ಸೇರಿದಂತೆ ನಾಯಕರು ಸೂಚನೆ ನೀಡಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪಾದಯಾತ್ರೆಯಲ್ಲಿ ಭಾಗವಹಿಸುವ ಜನರಿಗೆ ಊಟ, ವಸತಿ ವ್ಯವಸ್ಥೆ ಮಾಡಬೇಕು. ಯಾತ್ರೆ ಸಾಗುವ ಮಾರ್ಗದಲ್ಲಿನ ಸಾಹಿತಿಗಳು, ಚಿಂತಕರ ಜತೆ ಚರ್ಚೆ ನಡೆಸುವುದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಬೇಕು. ಪ್ರತಿ ದಿನವೂ ಕೆಲವು ಕಡೆ ಸಭೆಗಳನ್ನು ನಡೆಸುವುದಕ್ಕೆ ಸ್ಥಳ ಗುರುತಿಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

‘ಭಾರತ ಒಗ್ಗೂಡಿಸಿ’ ಕಾರ್ಯಕ್ರಮದ ರೂಪುರೇಷೆ, ನಡೆದಿರುವ ಸಿದ್ಧತೆಗಳ ಕುರಿತು ಶಾಸಕರಿಗೆ ಸಭೆಯಲ್ಲಿ ವಿವರಿಸಲಾಯಿತು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯದಲ್ಲಿ ಪಾದಯಾತ್ರೆಯ ಉಸ್ತುವಾರಿಯೂ ಆಗಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್‌ ದತ್‌, ಮಯೂರ್‌ ಜಯಕುಮಾರ್‌, ವಿಷ್ಣುನಾಥನ್‌, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಆರ್‌. ಧ್ರುವನಾರಾಯಣ ಸೇರಿ ಹಲವು ನಾಯಕರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT