ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ವಿಶ್ಲೇಷಣೆ | ‘ಕೈ’ ಟಿಕೆಟ್‌ ಕಸರತ್ತು: ಪೈಪೋಟಿಯಲ್ಲಿ ಯುವ ಮುಖಗಳು?

ಕನಿಷ್ಠ 20 ಕ್ಷೇತ್ರ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ನಾಯಕರ ಕಾರ್ಯತಂತ್ರ
Published 29 ಡಿಸೆಂಬರ್ 2023, 20:35 IST
Last Updated 29 ಡಿಸೆಂಬರ್ 2023, 20:35 IST
ಅಕ್ಷರ ಗಾತ್ರ

ಬೆಂಗಳೂರು:  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಅದಕ್ಕಾಗಿ ಜನವರಿ ಅಂತ್ಯದ ವೇಳೆಗೆ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಆ ಬೆನ್ನಲ್ಲಿ, ಆಕಾಂಕ್ಷಿಗಳು ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಸಚಿವರನ್ನು ಕಣಕ್ಕಿಳಿಸುವ ಇರಾದೆ ಕಾಂಗ್ರೆಸ್‌ ವರಿಷ್ಠರದ್ದಾಗಿದೆ. ಆದರೆ, ಲೋಕಸಭೆಯ ಅಖಾಡಕ್ಕೆ ಇಳಿಯಲು ಸಚಿವರು ಉತ್ಸುಕರಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಯುವ, ಹೊಸ ಮುಖಗಳಿಗೆ ಮಣೆ ಹಾಕಿ, ಮತ ಸೆಳೆದು ಯಶಸ್ಸು ಕಾಣುವ ಯೋಚನೆಯೂ ನಾಯಕರಲ್ಲಿದೆ. ಈ ನಡುವೆ ತಮ್ಮ ಸಂಬಂಧಿಕರಿಗೆ ಟಿಕೆಟ್ ಗಿಟ್ಟಿಸಲು ಕೆಲವು ಪ್ರಮುಖ ನಾಯಕರು ಯತ್ನ ನಡೆಸಿದ್ದಾರೆ.‌ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ತಮ್ಮ ಮಗ ಸುನೀಲ್ ಬೋಸ್ ಅವರನ್ನು ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ಬಯಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಆಕಾಂಕ್ಷಿಗಳು ಇಲ್ಲ. ಈ ಕ್ಷೇತ್ರ ವ್ಯಾಪ್ತಿಯ ಕೈ ಶಾಸಕರು ಮಹದೇವಪ್ಪ ಅವರ ಹೆಸರನ್ನೇ ಸೂಚಿಸುತ್ತಿದ್ದಾರೆ. ಆದರೆ, ಮಹದೇವಪ್ಪ ಅವರು ಒಪ್ಪುತ್ತಿಲ್ಲ. ಬದಲಿಗೆ ಸುನೀಲ್‌ ಬೋಸ್‌ಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗದಿಂದ ಕಣಕ್ಕಿಳಿಸಲು ಇಚ್ಛಿಸಿದ್ದಾರೆ. ಗೀತಾ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನಟ ಶಿವರಾಜ್ ಕುಮಾರ್ ಬಳಿ ಇತ್ತೀಚೆಗೆ ಕೋರಿಕೆ ಮುಂದಿಟ್ಟಿದ್ದರು. ಆದರೆ, ಗೀತಾ ಅವರ ಸ್ಪರ್ಧೆಗೆ ಅವಕಾಶ ನೀಡುವಂತೆ ಬಹಿರಂಗವಾಗಿಯೇ ಶಿವರಾಜ್ ಕುಮಾರ್ ಕೋರಿದ್ದಾರೆ.

ಬಾಗಲಕೋಟೆಯಿಂದ ತಮ್ಮ ಪತ್ನಿ ವೀಣಾ ಅವರಿಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಟಿಕೆಟ್ ಬಯಸಿದ್ದಾರೆ. 2019ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಮತ್ತೆ ಅಖಾಡಕ್ಕಿಳಿಯಲು ಬಯಸಿದ್ದು, ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ವಿಜಯಾನಂದ ಕಾಶಪ್ಪನವರ್ ಬಹಿರಂಗವಾಗಿ ಹೇಳಿದ್ದಾರೆ.

ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಸುಧೀರ್‌ ಕುಮಾರ್ ಮುರೊಳ್ಳಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಾದ್ಯಂತ ಓಡಾಡುತ್ತಿರುವ ಅವರು, ಪಕ್ಷದ ಸಂಘಟನೆಯಲ್ಲೂ ಸಕ್ರಿಯರಾಗಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ತಂದು ಇಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌  ಯತ್ನ ನಡೆಸಿದೆ. 

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿಯಿಂದ ಪುತ್ರಿ ಪ್ರಿಯಾಂಕಾ ಅವರ ರಾಜಕೀಯ ಪ್ರವೇಶದ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ಪುತ್ರ ಮೃಣಾಲ್‌ ಅವರನ್ನು ಕಣಕ್ಕಿಳಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಯೋಚನೆಯಲ್ಲಿದ್ದಾರೆ.  ಮೈಸೂರು-ಕೊಡಗು ಕ್ಷೇತ್ರದಿಂದ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿದೆ.

ದಾವಣಗೆರೆ ಕ್ಷೇತ್ರದಲ್ಲಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಇನ್‌ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್  ಸಂಸ್ಥಾಪಕ ವಿನಯ್‌ ಕುಮಾರ್ ಹೆಸರು ಓಡಾಡುತ್ತಿದೆ. ಕಾಂಗ್ರೆಸ್‌ನ ಯುವ ನಾಯಕ ನಿಖಿಲ್ ಕೊಂಡಜ್ಜಿ ಹೆಸರೂ ತೆರೆಮರೆಯಲ್ಲಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರು ಪ್ರಬಲ ಆಕಾಂಕ್ಷಿ.  ಆದರೆ, ಇಲ್ಲಿನ ಮಾಜಿ ಸಂಸದ ವೀರಪ್ಪ ಮೊಯಿಲಿ ಕೂಡಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ಕಾತುರದಲ್ಲಿದ್ದಾರೆ. 

ಹಾವೇರಿ ಮತ್ತು ಬೆಂಗಳೂರು ಕೇಂದ್ರ ಸೇರಿದಂತೆ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಅಹಮದ್‌ ಬಯಸಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಎಐಸಿಸಿಗೆ ಕಳುಹಿಸಲಾಗುವುದು, ನಂತರ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಗಳ‌ ಪಟ್ಟಿಯನ್ನು ಅಂತಿಮಗೊಳಿಸಲು ಎರಡು ಸಮೀಕ್ಷೆಗಳನ್ನು ನಡೆಸುತ್ತಾರೆ. ಜನವರಿ ಅಂತ್ಯದ ವೇಳೆಗೆ ಪಟ್ಟಿ ಸಿದ್ಧವಾಗುತ್ತದೆಂಬ ನಿರೀಕ್ಷೆ ನಮ್ಮದು ಎನ್ನುತ್ತಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT