ಬೆಂಗಳೂರು: ‘ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾನೂನು ಕುಣಿಕೆಯ ಒಳಗೆ ಸಿಲುಕಿಸುವ ಹತಾಶ ಪ್ರಯತ್ನವನ್ನು ಬಿಜೆಪಿ– ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ’ ಎಂದು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್. ಶಿವಣ್ಣ ಆರೋಪಿಸಿದ್ದಾರೆ.
‘ದೇವರಾಜ ಅರಸು ಅವರ ರೀತಿ ಹಿಂದುಳಿದ ವರ್ಗದ ನಾಯಕನಾಗಿರುವ ಸಿದ್ದರಾಮಯ್ಯ ಅವರ ಮೇಲೆ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಬಿಜೆಪಿಯ ದೆಹಲಿ ನಾಯಕತ್ವ ಇದರ ಹಿಂದೆ ಇದೆ. ಹೀಗಾಗಿ, ಸಿದ್ದರಾಮಯ್ಯ ಅವರ ಪರವಾಗಿ ಎಲ್ಲ ಶೋಷಿತ ವರ್ಗಗಳು ಒಟ್ಟಾಗಿ ನಿಲ್ಲಬೇಕು’ ಎಂದು ಅವರು ಮನವಿ ಮಾಡಿರುವ ಅವರು, ‘ಇದೇ 9ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಮಾವೇಶವು ಯಾವುದೇ ಜಾತಿ, ವರ್ಗದ ವಿರುದ್ಧವಲ್ಲ’ ಎಂದಿದ್ದಾರೆ.
‘ಧ್ವನಿ ಇಲ್ಲದವರ ಧ್ವನಿಯಾಗಿರುವ ಸಿದ್ದರಾಮಯ್ಯ ಅವರನ್ನು ರಕ್ಷಿಸಿಕೊಳ್ಳುವುದು ಈ ಕ್ಷಣದ ಅನಿವಾರ್ಯ ಕರ್ತವ್ಯ. ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ಸಿದ್ಧಾಂತಗಳ ಅಪ್ಪಟ ಅನುಯಾಯಿ ಆಗಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸಲಾರದೆ ಬಿಜೆಪಿ– ಜೆಡಿಎಸ್ ಕುತಂತ್ರ ರಾಜಕಾರಣದಲ್ಲಿ ತೊಡಗಿದೆ. ಸಿದ್ದರಾಮಯ್ಯನವರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಪ್ರಜ್ಞಾವಂತ ನಾಗರಿಕರು, ಪ್ರಗತಿಪರ ಚಿಂತಕರು, ರೈತಪರ ಹೋರಾಟಗಾರರು, ಶೋಷಿತ ಸಮುದಾಯಗಳು ಒಗ್ಗಟ್ಟಿನಿಂದ ಇದನ್ನು ಖಂಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಒಬ್ಬ ಹಿಂದುಳಿದ ವರ್ಗದ ನಾಯಕ ಮತ್ತೆ ಮತ್ತೆ ಅಧಿಕಾರದಲ್ಲಿ ಪ್ರತಿಷ್ಠಾಪನೆಗೊಳ್ಳುವುದನ್ನು ಸ್ಥಾಪಿತ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ದೇವರಾಜ ಅರಸು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಯಾರು ಕಾರಣರಾಗಿದ್ದರೊ ಅವರೇ ಈಗ ಸಿದ್ದರಾಮಯ್ಯ ವಿರುದ್ಧ ಭೂ ಅಕ್ರಮದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರ ಹಾಗೂ ಕ್ಷಣಿಕ ಆಸೆಗಳಿಗಾಗಿ ಕಾಂಗ್ರೆಸ್ ತೊರೆದು, ಜೆಡಿಎಸ್, ಬಿಜೆಪಿ ಸುತ್ತಿದ ಗೋಸುಂಬೆ ರಾಜಕಾರಣಿ ಎಚ್. ವಿಶ್ವನಾಥ ಅವರು ಮುಡಾ ವಿಚಾರದಲ್ಲಿ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ. ದೇವೇಗೌಡರು ಈಗ ಸಿದ್ದರಾಮಯ್ಯ ವಿರುದ್ಧ ದೆಹಲಿಯಲ್ಲಿ ಕಾರ್ಯತಂತ್ರ ನಡೆಸುತ್ತಿರುವುದು ಸುಳ್ಳೇ. ಪಾದಯಾತ್ರೆ ಮೈಸೂರು ತಲುಪುವುದರೊಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸುವುದರಲ್ಲಿ ಯಾವ ನೈತಿಕತೆ ಇದೆ’ ಎಂದೂ ಶಿವಣ್ಣ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.