ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ವಿರುದ್ಧ ನ್ಯಾಯಾಂಗ ನಿಂದನೆ: ದೋಷಾರೋಪ ನಿಗದಿಗೆ ನಿರ್ಧಾರ

Published 11 ಆಗಸ್ಟ್ 2023, 15:45 IST
Last Updated 11 ಆಗಸ್ಟ್ 2023, 15:45 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ಆದೇಶದ ಹೊರತಾಗಿಯೂ ಜಮೀನು ಮಾಲೀಕರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲು ವಿಳಂಬ ಮಾಡಿರುವ ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನ (ಈಗ ಯಲಹಂಕ ತಾಲ್ಲೂಕು) ತಹಶೀಲ್ದಾರ್‌ ವಿರುದ್ಧ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಪಡಿಸಲು ಹೈಕೋರ್ಟ್ ನಿರ್ಧರಿಸಿದೆ.

ಸಾಗುವಳಿ ಚೀಟಿ ನೀಡಬೇಕೆಂಬ ಆದೇಶವನ್ನು ಪಾಲಿಸದ ತಹಶೀಲ್ದಾರ್‌ ವಿರುದ್ಧ ತಾರಹುಣಸೆ ಅಗ್ರಹಾರ ನಿವಾಸಿ ದೊಡ್ಡಣ್ಣ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಶುಕ್ರವಾರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಸಾಗುವಳಿ ಚೀಟಿ ಮಂಜೂರು ಕೋರಿ ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಕಾನೂನು ರೀತಿ ಪರಿಶೀಲಿಸಿ ತಹಶೀಲ್ದಾರ್‌ ಕ್ರಮ ಕೈಗೊಳ್ಳಲಿದ್ದಾರೆ‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘2005ರಲ್ಲಿ ಸಾಗುವಳಿ ಚೀಟಿ ನೀಡುವ ತೀರ್ಮಾನವಾಗಿದೆ. ಅರ್ಜಿದಾರರು ಮನವಿಯನ್ನೂ ಕೊಟ್ಟಿದ್ದಾರೆ. ಸಾಗುವಳಿ ಚೀಟಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹಿಂಬರಹವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿ, ಎರಡು ತಿಂಗಳಲ್ಲಿ ಸಾಗುವಳಿ ಚೀಟಿ ಮಂಜೂರು ಮಾಡಬೇಕು ಎಂದು 2022ರ ಸೆಪ್ಟೆಂಬರ್ 28ರಂದು ನಿರ್ದೇಶಿಸಿತ್ತು. ಆದರೆ, ಆಧಾರರಹಿತ ತಾಂತ್ರಿಕ ನೆಪ ಮುಂದಿಟ್ಟುಕೊಂಡು ತಹಶೀಲ್ದಾರ್‌ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಿದ್ದಾರೆ‘ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಈ ಪ್ರಕರಣದಲ್ಲಿ ತಹಶೀಲ್ದಾರ್‌ಗೆ ನ್ಯಾಯಾಲಯದ ಆದೇಶದ ಬಗ್ಗೆ ಗಂಭೀರತೆ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ, ಮುಂದಿನ ವಿಚಾರಣೆ ವೇಳೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ದೋಷಾರೋಪ ನಿಗದಿಪಡಿಸಲಾಗುವುದು. ಆ ದಿನ ತಹಶೀಲ್ದಾರ್‌ ವಿಚಾರಣೆಗೆ ಖುದ್ದು ಹಾಜರಾಗಬೇಕು‘ ಎಂದು ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT