ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಸಾಬೀತಾದ ದಿನವೇ ಅಪರಾಧಿ ಬಿಡುಗಡೆ

ಉತ್ತಮ ನಡತೆಯಿಂದ ಬಾಳುವಂತೆ ಷರತ್ತು ವಿಧಿಸಿದ ನ್ಯಾಯಾಲಯ
Last Updated 6 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸಾಕ್ಷ್ಯ ನಾಶ ಮಾಡಿ ಮಹಿಳಾ ಕಾನ್‌ಸ್ಟೆಬಲ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಿ ಗೀತಾ ಎಂಬಾಕೆಯನ್ನು ತಪ್ಪಿತಸ್ಥೆ ಎಂದು ತೀರ್ಮಾನಿಸಿದ ನ್ಯಾಯಾಲಯ, ‘ಮುಂದಿನ ದಿನಗಳಲ್ಲಿ ಉತ್ತಮ ನಡತೆಯಿಂದ ಬಾಳಬೇಕು’ ಎಂದು ಎಚ್ಚರಿಕೆ ನೀಡಿ ಆಕೆಯನ್ನು ಬಿಡುಗಡೆ ಮಾಡಿದೆ.

ಚಂದ್ರಾಲೇಔಟ್ ಠಾಣೆಯಲ್ಲಿ 2013ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ ಬಾಬು ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎನ್‌. ಅರುಣ್ ವಾದಿಸಿದ್ದರು.

‘ನಾನು ಇತರ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿಲ್ಲ. ಗೊತ್ತಿಲ್ಲದೆ ಒಂದು ಬಾರಿ ತಪ್ಪು ಮಾಡಿದ್ದೇನೆ. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ. ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬಹುದು. ಶಿಕ್ಷೆಯಿಂದ ರಿಯಾಯಿತಿ ನೀಡಿ ಉತ್ತಮ ನಡತೆಯಿಂದ ಬಾಳಲು ಅವಕಾಶ ನೀಡಬೇಕು’ ಎಂದು ಆರೋಪಿ ಗೀತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ‍‘ಪರಿವೀಕ್ಷಣಾ ಅಪರಾಧಿಗಳ ಕಾಯ್ದೆ’ ಅಡಿ ಕೆಲವು ಷರತ್ತುಗಳನ್ನು ವಿಧಿಸಿ ಅಪರಾಧಿಯನ್ನು ಗುರುವಾರವೇ ಬಿಡುಗಡೆ ಮಾಡಿತು.

ಪ್ರಕರಣದ ವಿವರ: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೀತಾ ವಿರುದ್ಧ ವ್ಯಕ್ತಿಯೊಬ್ಬರು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀರು, ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದರು. ಅವುಗಳ ದೃಢೀಕರಣ ಪ್ರತಿ ಪಡೆಯುವುದಕ್ಕಾಗಿ ಗೀತಾ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಮಾನ್ಯ ಮಾಡಿದ್ದ ಪೊಲೀಸರು, ಠಾಣೆಗೆ ಬಂದು ದಾಖಲೆ ಪಡೆಯುವಂತೆ ಹೇಳಿದ್ದರು. ಗೀತಾ ಠಾಣೆಗೆ ಬಂದಾಗ, ದಾಖಲೆಗಳ ಪ್ರತಿಗಳನ್ನು ಜೆರಾಕ್ಸ್‌ ಮಾಡಿಸಿಕೊಂಡು ಬರುವಂತೆ ಠಾಣಾಧಿಕಾರಿ, ಕಾನ್‌ಸ್ಟೆಬಲ್ ಮಹಾದೇವಿ ಮಾದರ ಅವರಿಗೆ ಹೇಳಿದ್ದರು.

ಮಹಾದೇವಿಯವರು ಜೆರಾಕ್ಸ್ ಅಂಗಡಿಯತ್ತ ಹೊರಟಾಗ, ಆರೋಪಿ ಗೀತಾ ಹಿಂಬಾಲಿಸಿದ್ದರು. ಮಾರ್ಗಮಧ್ಯೆಯೇ ದಾಖಲೆಗಳನ್ನು ಕಸಿದುಕೊಂಡಿದ್ದ ಗೀತಾ ಅವುಗಳನ್ನು ಹರಿದು ಹಾಕಿ ಕಾನ್‌ಸ್ಟೆಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಈ ಘಟನೆ ಸಂಬಂಧ ಮಹಾದೇವಿ ದೂರು ನೀಡಿದ್ದರು. ತನಿಖೆ ನಡೆಸಿದ್ದ ಅಂದಿನ ಪಿಎಸ್‌ಐ ಸೋಮಶೇಖರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT