ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಆಸ್ಪತ್ರೆಗಳ ನಾಡಲ್ಲಿ ಚಿಕಿತ್ಸೆಗೆ ಅಲೆದಾಟ

ದುರಿತ ಕಾಲದಲ್ಲಿ ಬಯಲಾದ ಆರೋಗ್ಯ ವ್ಯವಸ್ಥೆಯ ದೌರ್ಬಲ್ಯ
Last Updated 1 ಜೂನ್ 2021, 20:37 IST
ಅಕ್ಷರ ಗಾತ್ರ

ಮಂಗಳೂರು: ‘ಮಗಳಿಗೆ ಪಾಸಿಟಿವ್ ಆದಾಗ ಕಾಲ್ ಮಾಡಿ, ವಿಷಯ ತಿಳಿಸಿದ್ದು ಬಿಟ್ಟರೆ, ಜೊತೆಗಿದ್ದ ನಮ್ಮಿಬ್ಬರ ತಪಾ
ಸಣೆ, ಮಗಳ ಆರೋಗ್ಯ ವಿಚಾರಣೆ ಮಾಡಲು ಯಾರೊಬ್ಬರೂ ಇತ್ತ ಮುಖ ಮಾಡಿಲ್ಲ. ಎರಡನೇ ದಿನಕ್ಕೆ ನನ್ನಲ್ಲೂ ಲಕ್ಷಣಗಳು ಕಾಣಿಸಿಕೊಂಡು, ಪರೀಕ್ಷಾ ವರದಿ ಪಾಸಿಟಿವ್ ಬಂತು. ನಾವೇ ನಿಗಾವಹಿಸಿ, ಸಂಬಂಧಿ ವೈದ್ಯರ ಸಲಹೆ
ಯಿಂದ ಗುಣಮುಖರಾದೆವು’ ಎಂದು ವಿಟಮಿನ್ ಮಾತ್ರೆ ಕೇಳಿಕೊಂಡು ಆಸ್ಪತ್ರೆಗೆ ಬಂದಿದ್ದ ಬೋಳಾರದ ವ್ಯಕ್ತಿಯೊಬ್ಬರು ಅನುಭವ ಹೇಳಿಕೊಂಡಿದ್ದು ಹೀಗೆ.

‘ವ್ಯಾಕ್ಸಿನ್ ತೆಕ್ಕೊಂಡು ಎರಡು ತಿಂಗಳಾಯ್ತು. ಎರಡನೇ ಡೋಸ್‌ಗೆ ಕಾಲ್ ಬರ್ಲೇ ಇಲ್ಲ. ನಾಲ್ಕೈದು ಬಾರಿ ಆಸ್ಪತ್ರೆಗೆ ಬಂದು ಹೋದೆ. ಎಂತದ್ದೂ ಮಾಹಿತಿ ಸಿಕ್ತಿಲ್ಲ. ಎಲ್ಲಿ ವ್ಯಾಕ್ಸಿನ್ ಕೊಡ್ತಾರಂತೆ’ ಎಂದು ಅಲೆದಾಡುತ್ತಿದ್ದರು 60ರ ಆಸುಪಾಸಿನ ಬಂಟ್ವಾಳದ ಮಹಿಳೆ ಅಂಜನಾ ಪ್ರಭು.

‘ಮೇಲ್ದರ್ಜೆಗೇರಿದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಐದು ಕೋಟಿ ರೂಪಾಯಿ ವೆಚ್ಚದ ಬೃಹತ್ ಕಟ್ಟಡವಿದೆ. ಇಲ್ಲಿ ಕಾಯಂ ವೈದ್ಯರಿಲ್ಲ, ಚಿಕಿತ್ಸಾ ಪರಿಕರಗಳೂ ಇಲ್ಲ. ರಾತ್ರಿ ಆಸ್ಪತ್ರೆಯ ಬಾಗಿಲು ಮುಚ್ಚಿರುತ್ತದೆ. ಕೋವಿಡ್ ಉಲ್ಬಣಿಸಿರುವ ಸಂದರ್ಭ ಇದು, ನಡುರಾತ್ರಿ ಆರೋಗ್ಯ ಹದಗೆಟ್ಟರೆ, ಪುತ್ತೂರು ಅಥವಾ ಮಂಗಳೂರಿಗೆ ರೋಗಿಯನ್ನು ಕರೆದೊಯ್ಯಬೇಕು’ ಎಂದು ಬೇಸರಿಸಿದರು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸಿಫ್.

‘ನೋಡಿ, ಕೋವಿಡ್ ಕಾಲದಲ್ಲೂ ನಮ್ಮ ಪಂಜಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ರೋಗಿ ಕಾಣ್ತಿಲ್ಲ. ಏಳು ಗ್ರಾಮಗಳ ಸುಮಾರು 5,000 ಜನರಿಗೆ ಇದೇ ಆಸ್ಪತ್ರೆ ಆಸರೆ. ಆದರೆ, ವೈದ್ಯರ ಭೇಟಿಗೆ ಜನರು ದೂರದ ಬಂಟ್ವಾಳ ತಾಲ್ಲೂಕು ಆಸ್ಪತ್ರೆಗೆ ಹೋಗ್ತಾರೆ. ಇಲ್ಲದಿದ್ದರೆ, ಮಂಗಳೂರಿಗೇ ಹೋಗ್ತಾರೆ’ ಎಂದು ಜನರ ಸುಳಿವೇ ಇಲ್ಲದ ಆಸ್ಪತ್ರೆ ತೋರಿಸಿದ ಪಂಜಿಕಲ್ಲು ಸುರೇಶ್ ಅವರು, ವೈದ್ಯರ ಬಗ್ಗೆ ಅಸಮಾಧಾನ ಹೊರಹಾಕಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ವ್ಯಕ್ತವಾದ ಅಭಿಪ್ರಾಯಗಳು ಇವು. ಜನರು ಪಾಡು ಇದಾದರೆ, ಆಸ್ಪತ್ರೆ ಸಿಬ್ಬಂದಿ ಅಳಲು ಇನ್ನೊಂದು ಬಗೆಯದು.

‘ಲಸಿಕೆ ಬಗ್ಗೆ ವಿಚಾರಿಸಲು ಲೆಕ್ಕವಿಲ್ಲದಷ್ಟು ಕಾಲ್‌ಗಳು ಬರುತ್ತವೆ. ಅದಕ್ಕೆ ಉತ್ತರಿಸಬೇಕು. ನಾವು 500 ಡೋಸ್ ಕೇಳಿದರೆ, ನಮಗೆ ಸಿಗುವುದು 50 ಅಷ್ಟೇ. ಫಾರ್ಮಸಿಸ್ಟ್‌ಗಳು, ದ್ವಿತೀಯ ದರ್ಜೆ ಸಹಾಯಕರು ಬಹುತೇಕ ಆಸ್ಪತ್ರೆಗಳಲ್ಲಿ ಇಲ್ಲ. ಇವೆಲ್ಲವುಗಳ ಹೊಣೆ ಶುಶ್ರೂಷಕರ ಹೆಗಲ ಮೇಲೆಯೇ. ‘ಇಲ್ಲ’ಗಳ ನಡುವೆ ‘ಎಲ್ಲ’ವನ್ನೂ ನಿಭಾಯಿಸಿ, ನಿಜಕ್ಕೂ ನಾವು ಜರ್ಜರಿತರಾಗಿದ್ದೇವೆ.ನಮ್ಮ ಸಮಸ್ಯೆ ಯಾರಲ್ಲಿ ಹೇಳಿಕೊಳ್ಳುವುದು?’ ಎಂದು ಅಳುಕುತ್ತಲೇ ಪಿಸುದನಿಯಲ್ಲಿ ಸಂಕಟವನ್ನು ಹೊರಗಿಕ್ಕಿದರು ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕರೊಬ್ಬರು.

ಎರಡನೇ ಅಲೆ ಹಳ್ಳಿಗಳನ್ನು ವ್ಯಾಪಿಸಿದ ಮೇಲೆ ಕೆಲವು ಪಂಚಾಯಿತಿಗಳಲ್ಲಿ ಕೋವಿಡ್ ಕಾರ್ಯಪಡೆ ಮುತುವರ್ಜಿಯಲ್ಲಿ ಕಟ್ಟುನಿಟ್ಟಿನ ಹೋಂ ಐಸೊಲೇಷನ್ ನಿಯಮಗಳು ಜಾರಿಗೊಂಡಿವೆ. ಹಳ್ಳಿಗರು ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ತಪಾಸಣೆ ಮಾಡಿಕೊಂಡು, ಫಿವರ್ ಕ್ಲಿನಿಕ್‌ನಲ್ಲಿ ಔಷಧ ಪಡೆದು ಮನೆಗೆ ತೆರಳುತ್ತಾರೆ. ರೋಗ ಲಕ್ಷಣ ಇದ್ದರೂ, ಕೋವಿಡ್ ಆರೈಕೆ ಕೇಂದ್ರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಅನೇಕ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳು ಖಾಲಿ ಇವೆ. ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿದರೆ ಮಾತ್ರ ದೂರದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ತಾಲ್ಲೂಕುಗಳ ಜನರಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳೇ ಗತಿ ಎನ್ನುವಂತಾಗಿದೆ.

ಖಾಸಗಿ ಆಸ್ಪತ್ರೆಗಳ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ, ಕೋವಿಡ್ ಸಾಂಕ್ರಾಮಿಕ ಕಾಯಿಲೆ ವೈದ್ಯಕೀಯ ವ್ಯವಸ್ಥೆಯ ಚಿತ್ರಣವನ್ನು ಬದಲಿಸಿದೆ. ಸರ್ಕಾರಿ ಆಸ್ಪತ್ರೆಗಳೆಡೆಗೆ ಜನರು ಮುಖ ಮಾಡಿದ್ದಾರೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಿಲು ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಪ್ರಯತ್ನಿಸುತ್ತಿದ್ದರೂ, ಗ್ರಾಮೀಣ ಆಸ್ಪತ್ರೆಗಳಲ್ಲಿರುವ ಅರೆಬರೆ ಸೌಲಭ್ಯಗಳು ಹಳ್ಳಿಗರನ್ನು ನಿರಾಶನ್ನಾಗಿಸಿವೆ. ವೆಚ್ಚಕ್ಕೆ ಬೆಚ್ಚಿ ಬೀಳುವ ಪರಿಸ್ಥಿತಿ ಇದ್ದರೂ, ಖಾಸಗಿ ಆಸ್ಪತ್ರೆಗಳ ಅನಿವಾರ್ಯ ಅವಲಂಬನೆ, ಬಡವರು, ಮಧ್ಯಮ ವರ್ಗದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT