ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ 470 ಕಡೆ ‘ನಮ್ಮ ಕ್ಲಿನಿಕ್‌’

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ *ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ವಿತರಣೆಗೆ ಚಾಲನೆ
Last Updated 16 ಜುಲೈ 2022, 18:46 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂರು ತಿಂಗಳ ಒಳಗೆ ಬೆಂಗಳೂರಿನಲ್ಲಿ 243 ಕಡೆ ಸೇರಿ ರಾಜ್ಯದ 470 ಕಡೆ ‘ನಮ್ಮ ಕ್ಲಿನಿಕ್’ ಪ್ರಾರಂಭಿಸಲಾಗುತ್ತದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಆರೋಗ್ಯ ಇಲಾಖೆಯು ನಗರಲ್ಲಿ ಶನಿವಾರ ಹಮ್ಮಿಕೊಂಡಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ವಿತರಣೆ ಕಾರ್ಯಕ್ರಮ ‘ಕೋವಿಡ್ ಲಸಿಕಾ ಅಮೃತ ಮಹೋತ್ಸವ’ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

‘ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರ ಬೆಂಗಳೂರಿನಲ್ಲಿ ಮೊದಲ‘ನಮ್ಮ ಕ್ಲಿನಿಕ್’ ಕಾರ್ಯಾರಂಭಿಸಲಿದೆ.18 ರಿಂದ 59 ವರ್ಷದ ನಾಲ್ಕೂವರೆ ಕೋಟಿ ಜನರಿಗೆ 75 ದಿನಗಳಲ್ಲಿ ಕೋವಿಡ್ ಲಸಿಕೆಯ ಮೂರನೇ ಡೋಸ್‌ ವಿತರಿಸಲಾಗುತ್ತದೆ.ರಾಜ್ಯದ ವಿವಿಧೆಡೆ ಏಳೂವರೆ ಸಾವಿರ ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರು ಇದರ ಲಾಭ ಪಡೆಯಬೇಕು’ ಎಂದು ಡಾ.ಕೆ. ಸುಧಾಕರ್ ಹೇಳಿದರು.

‘ಇತ್ತೀಚೆಗೆ ಕೋವಿಡ್‌ ಬಂದರೆ ಏನಾಗುತ್ತದೆ ಎಂಬ ಉದಾಸೀನತೆ ಕೆಲವರಲ್ಲಿದೆ. ಎರಡನೇ ಡೋಸ್‌ ಲಸಿಕೆ ತೆಗೆದುಕೊಂಡು ವರ್ಷ ಕಳೆದರೂ ಕೆಲವರು ಮುನ್ನೆಚ್ಚರಿಕೆ ಡೋಸ್ ಪಡೆದಿಲ್ಲ. ಇಂತಹವರಿಗೆ ಅಪಾಯ ಇರುತ್ತದೆ. ಹೀಗಾಗಿ, ಲಸಿಕಾ ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಈವರೆಗೆ ಕೋವಿಡ್‌ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಲು ಲಸಿಕಾ ಅಭಿಯಾನದ ವೇಗವೇ ಕಾರಣ. ಎಲ್ಲರೂ ಮುನ್ನೆಚ್ಚರಿಕೆ ಡೋಸ್‌ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

‘ವಿದೇಶದಲ್ಲಿ ಕೋವಿಡ್ ಪರೀಕ್ಷೆಗೆ ₹ 10 ಸಾವಿರ ಶುಲ್ಕ ನೀಡಬೇಕು. ಆದರೆ, 133 ಕೋಟಿ ಜನರಿರುವ ದೇಶದಲ್ಲಿ ಕೋವಿಡ್ ಪರೀಕ್ಷೆ, ಲಸಿಕೆ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ.ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದೆ’ ಎಂದು ತಿಳಿಸಿದರು.

‘ಲಸಿಕೆಯಿಂದ ರಕ್ಷಣೆ’

‘ಈ ಮೊದಲು ರೋಗ ಪತ್ತೆಯಾಗಿ 10–15 ವರ್ಷಗಳ ಬಳಿಕ ದೇಶಕ್ಕೆ ಲಸಿಕೆ ಬರುತ್ತಿತ್ತು. ಆದರೆ, ಈಗ ಕೋವಿಡ್ ಕಾಣಿಸಿಕೊಂಡ ವರ್ಷದೊಳಗೆ ಲಸಿಕೆ ಸಂಶೋಧಿಸಿ, ರಫ್ತು ಮಾಡಲಾಗಿದೆ. ಕೋವಿಡ್ ಕಾಣಿಸಿಕೊಂಡಾಗ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಯೋಧರಂತೆ ಕಾರ್ಯನಿರ್ವಹಿಸಿದರು. ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ವೈರಾಣುವಿನಿಂದ ರಕ್ಷಣೆ ಪಡೆದುಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT