ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್ ಮೋಹನ್‌ಗೆ ನಾಲ್ಕನೇ ಬಾರಿ ಮರಣದಂಡನೆ

ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ
Last Updated 24 ಅಕ್ಟೋಬರ್ 2019, 18:44 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಾಳೆಪುಣಿಯ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಸೈನೈಡ್ ನೀಡಿ ಕೊಲೆ ಮಾಡಿದ ಆರೋಪದಲ್ಲಿ ಸೈನೈಡ್‌ ಮೋಹನ್‌ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಮರಣದಂಡನೆ ವಿಧಿಸಿದೆ.

ಕೊಲೆ ಆರೋಪ ಸಾಬೀತಾಗಿದೆ ಎಂದು ಇದೇ 22ರಂದು ನ್ಯಾಯಾಧೀಶರಾದ ಸಯಿದುನ್ನೀಸಾ ತೀರ್ಮಾನಿಸಿದ್ದು, ‌ಶಿಕ್ಷೆಯ ಪ್ರಮಾಣವನ್ನು ಗುರುವಾರಕ್ಕೆ (ಅ.24) ಕಾಯ್ದಿರಿಸಿದ್ದರು.

ಇದು ಸೈನೈಡ್ ಮೋಹನ್‌ ಎದುರಿಸುತ್ತಿರುವ 17ನೇ ಪ್ರಕರಣವಾಗಿದ್ದು, ಇನ್ನೂ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ನ್ಯಾಯಾಲಯವು ನಾಲ್ಕರಲ್ಲಿ ಮರಣದಂಡನೆ ವಿಧಿಸಿದೆ. ಈ ಹಿಂದಿನ 3 ಪ್ರಕರಣಗಳ ಪೈಕಿ ಒಂದರಲ್ಲಿ ಜೀವಾವಧಿ ಹಾಗೂ ಇನ್ನೊಂದರಲ್ಲಿ 5 ವರ್ಷಗಳ ಸಜೆಗೆ ಶಿಕ್ಷೆಯ ಪ್ರಮಾಣವನ್ನು ಹೈಕೋರ್ಟ್ ಇಳಿಸಿತ್ತು. ಒಂದರಲ್ಲಿ ಮಾತ್ರ ಮರಣ ದಂಡನೆಯನ್ನು ಎತ್ತಿ ಹಿಡಿದಿತ್ತು.

ಕೊಲೆ, ಅಪಹರಣ, ಅತ್ಯಾಚಾರ, ವಿಷ ಉಣಿಸಿದ ಕೃತ್ಯ, ಚಿನ್ನಾಭರಣ ಸುಲಿಗೆ, ಮದುವೆ ಆಗುವುದಾಗಿ ವಂಚನೆ ಹಾಗೂ ಸಾಕ್ಷ್ಯ ನಾಶಕ್ಕಾಗಿ ಶಿಕ್ಷೆಗಳನ್ನು ವಿಧಿಸಿದ್ದು, ಎಲ್ಲ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸಬೇಕು ಹಾಗೂ ಮರಣದಂಡನೆಯನ್ನು ಹೈಕೋರ್ಟ್‌ ದೃಢೀಕರಿಸಿದರೆ, ಉಳಿದೆಲ್ಲ ಶಿಕ್ಷೆಗಳನ್ನು ಅಂತರ್ಗತ ಮಾಡಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಕೊಲೆಯಾದ ಯುವತಿಯ ಏಕೈಕ ತಂಗಿಗೆ ಪರಿಹಾರ ನೀಡಬೇಕೆಂದು ನ್ಯಾಯಾಧೀಶರಾದ ಸಯಿದುನ್ನೀಸಾ ಆದೇಶದಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ: ಬಾಳೆಪುಣಿಯ ಯುವತಿ ಜೊತೆ ‘ಆನಂದ್’ ಎಂದು ಪರಿಚಯಿಸಿಕೊಂಡಿದ್ದ ಸೈನೈಡ್ ಮೋಹನ್, ತಾನು ಆಕೆಯ ಜಾತಿಯವನಾಗಿದ್ದು, ಮದುವೆ ಆಗುವುದಾಗಿ ನಂಬಿಸಿದ್ದನು.

2005 ಅಕ್ಟೋಬರ್ 21ರಂದು ಎಲ್ಲ ಚಿನ್ನಾಭರಣ ಧರಿಸಿಕೊಂಡು ಬರಲು ಹೇಳಿದ್ದ ಮೋಹನ್‌, ಆಕೆಯನ್ನು ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದನು. ಅಲ್ಲಿ ವಸತಿಗೃಹವೊಂದರಲ್ಲಿ ತಂಗಿದ್ದು, ರಾತ್ರಿ ಅತ್ಯಾಚಾರ ಎಸಗಿದ್ದನು. ಮರುದಿನ ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸೈನೈಡ್ ನೀಡಿದ್ದು, ಅದನ್ನು ಸೇವಿಸಿದ್ದ ಯುವತಿ ಅಲ್ಲಿಯೇ ಕುಸಿದು ಬಿದ್ದಿದ್ದಳು.

ಮರಣೋತ್ತರ ಪರೀಕ್ಷೆ ವೇಳೆ ಸೈನೈಡ್ ಸೇವನೆಯು ದೃಢಪಟ್ಟಿತ್ತು. ಆದರೆ, ‘ವಾರೀಸುದಾರರು ಇಲ್ಲದ ಶವ’ ಎಂದು ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದರು.

ಇತ್ತ ವಸತಿಗೃಹಕ್ಕೆ ವಾಪಾಸಾಗಿದ್ದ ಮೋಹನ್, ಅಲ್ಲಿದ್ದ ಚಿನ್ನಾಭರಣಗಳ ಸಹಿತ ಪರಾರಿಯಾಗಿದ್ದನು.

ಆಕೆ ನಾಪತ್ತೆಯಾದ ಬೆನ್ನಲ್ಲೇ, ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2009ರ ಸೆಪ್ಟೆಂಬರ್‌ 21ರಂದು ಮೋಹನ್‌ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT