ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಗ್ರಿ ಕಾಲೇಜುಗಳಲ್ಲಿ ಪರಿಸರ ವಿಜ್ಞಾನ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಿಸಿ‘

Last Updated 27 ಜನವರಿ 2022, 14:42 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪರಿಸರ ವಿಜ್ಞಾನ ವಿಷಯದಕಾಯಂ ಉಪನ್ಯಾಸಕರು ಕಡಿಮೆ ಇದ್ದಾರೆ. ಹೀಗಾಗಿ, ಈ ವಿಷಯದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಬೇಕು’ ಎಂದು ಈ ವಿಷಯದ ಸ್ನಾತಕೋತ್ತರ ಪದವೀಧರರು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿರುವ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪರಿಸರ ವಿಜ್ಞಾನ ಅತಿಥಿ ಉಪನ್ಯಾಸಕರ ಅಗತ್ಯವಿದೆ. ಈ ವಿಷಯದ ಅತಿಥಿ ಉಪನ್ಯಾಸಕರ ಆಯ್ಕೆಗೆ ಇದೇ 30ರಂದು ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಯಲಿದೆ. ಹೀಗಾಗಿ, ಎಲ್ಲ ಕಾಲೇಜುಗಳಿಂದ ಪರಿಸರ ಅಧ್ಯಯನ, ಪರಿಸರ ವಿಜ್ಞಾನ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ವಿಷಯದ ಒಟ್ಟು ಕಾರ್ಯಭಾರವನ್ನು ಪಡೆದು, ಅಗತ್ಯವಿರುವ ಅತಿಥಿ ಉಪನ್ಯಾಸಕರ ಸಂಖ್ಯೆಯನ್ನು ನಮೂದಿಸಿ ಆಯ್ಕೆ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಷಯದ ವಿದ್ಯಾರ್ಥಿಗಳಿಗೂ ಪರಿಸರ ವಿಜ್ಞಾನ ವಿಷಯ ಬೋಧಿಸಲಾಗುತ್ತಿದೆ. ಆದರೆ, ಈ ವಿಷಯದ ಕಾಯಂ ಉಪನ್ಯಾಸಕರ ಕಡಿಮೆ ಇರುವುದರಿಂದ ಅತಿಥಿ ಉಪನ್ಯಾಸಕರು ಈ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2021-22ನೇ ಸಾಲಿಗೆ ಅನ್ವಯಿಸಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಸಂಧರ್ಭದಲ್ಲಿ ಅನೇಕ ಕಾಲೇಜುಗಳು ಲಭ್ಯವಿರುವ ಕಾರ್ಯಭಾರದ ಪಟ್ಟಿಯಲ್ಲಿ ಪರಿಸರ ವಿಜ್ಞಾನ ವಿಷಯವನ್ನು ಸೇರಿಸಿಲ್ಲ. ಕೆಲವು ಕಾಲೇಜಿನವರು ಪರಿಸರ ವಿಜ್ಞಾನ ಎಂಬುದರ ಬದಲು ಪರಿಸರ ಅಧ್ಯಯನ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕಾರ್ಯಭಾರದ ಪಟ್ಟಿ ಕಳುಹಿಸಿದ್ದಾರೆ. ಹೀಗಾಗಿ, ಈ ವಿಷಯದ ಕೇವಲ 53 ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಲಾಗುತ್ತಿದೆ. ಇದರಿಂದಾಗಿ ಕಾರ್ಯಭಾರದ ಲಭ್ಯತೆ ಇದ್ದರೂ ಅನೇಕ ವರ್ಷಗಳಿಂದ ಪರಿಸರ ವಿಜ್ಞಾನ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದೂ ಈ ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT