ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಫ್‌ಒ ಬಡ್ತಿ: ಡಿಪಿಎಆರ್‌ ಅಭಿಪ್ರಾಯಕ್ಕೆ ಡಿಎಫ್‌ಒಗಳ ಪಟ್ಟು

Published 5 ನವೆಂಬರ್ 2023, 16:27 IST
Last Updated 5 ನವೆಂಬರ್ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ (ಡಿಎಫ್‌ಒ) ಹುದ್ದೆಯಿಂದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ (ಆರ್‌ಎಫ್‌ಒ) ಹುದ್ದೆಗೆ ಪದೋನ್ನತಿ ನೀಡುವ ಮೊದಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (ಡಿಪಿಎಆರ್‌) ಸ್ಪಷ್ಟ ಅಭಿಪ್ರಾಯ ಪಡೆಯಬೇಕು ಎಂದು ಸಾಮಾನ್ಯ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಡಿಎಫ್‌ಒಗಳು ಆಗ್ರಹಿಸಿದ್ದಾರೆ.

ಇಲಾಖೆಯಲ್ಲಿ ಒಟ್ಟು 16 ಆರ್‌ಎಫ್ಒ ಹುದ್ದೆಗಳಿವೆ. ಈ ಪೈಕಿ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಉಳಿದ 15 ಹುದ್ದೆಗಳು ಖಾಲಿ ಇವೆ. ಅದರಲ್ಲಿ 13 ಉಳಿದ ಮೂಲ ವೃಂದದ ಹುದ್ದೆಗಳು. ಎರಡು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು. ಇದೀಗ 13 ಹುದ್ದೆಗಳನ್ನು ತುಂಬಲು ಇಲಾಖೆ ಮುಂದಾಗಿದೆ.

ಆರ್‌ಎಫ್‌ಒ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೆ. 30ರಂದು ಪತ್ರ ಬರೆದಿರುವ ಸಮಾಜ ಕಲ್ಯಾಣ ಇಲಾಖೆ, ಈ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) 6 ಹಾಗೂ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) 2 ಬ್ಯಾಕ್‌ಲಾಗ್‌ ಹುದ್ದೆಗಳಿದ್ದು, ಈ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಿ ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಈ ಮಧ್ಯೆ, ಅ. 11ರಂದು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಕಮಲ್‌ ಪಂತ್‌, ಸಮಾಜ ಕಲ್ಯಾಣ ಇಲಾಖೆ ನೀಡಿರುವ ವರದಿ, ಸಾಮಾನ್ಯ ವರ್ಗದ ಡಿಎಫ್‌ಒಗಳ ಆಕ್ಷೇಪಣೆ ಮತ್ತು ಎಸ್‌‌ಸಿ ಮತ್ತು ಎಸ್‌ಟಿ ಡಿಎಫ್‌ಒಗಳ ಆಕ್ಷೇಪಣೆಯನ್ನು ಪರಿಶೀಲಿಸಿ ಆರ್‌ಎಫ್‌ಒ ಹುದ್ದೆಗಳನ್ನು ಭರ್ತಿ ಮಾಡಲು ಡಿಪಿಎಆರ್‌ನಿಂದ ಸ್ಪಷ್ಟ ಅಭಿಪ್ರಾಯ ಪಡೆದು ಇಲಾಖೆಗೆ ನೀಡುವಂತೆ ತಿಳಿಸಿದ್ದಾರೆ.

‘ಡಿಜಿಪಿ ಅವರಷ್ಟೆ ಅಲ್ಲದೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಕೂಡಾ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಆರ್‌ಎಫ್‌ಒ ಹುದ್ದೆಗೆ ಬಡ್ತಿ ನೀಡುವ ಸಂದರ್ಭದಲ್ಲಿ ಡಿಪಿಎಆರ್‌ನಿಂದ ಲಿಖಿತ ಅಭಿಪ್ರಾಯ ಪಡೆದು ಕಾನೂನಾತ್ಮಕವಾಗಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಆದರೂ ಡಿಪಿಎಆರ್‌ನಿಂದ ಅಭಿಪ್ರಾಯ ಪಡೆಯದೆ, ಸಮಾಜ ಕಲ್ಯಾಣ ಇಲಾಖೆ ನೀಡಿದ ವರದಿಯನ್ನಷ್ಟೆ ಪರಿಗಣಿಸಿ ಆರ್‌ಎಫ್‌ಒ ಹುದ್ದೆಗೆ ಪದೋನ್ನತಿ ನೀಡಲು ಇಲಾಖೆ ಮುಂದಾಗಿದೆ. ಇದರಿಂದ ನಮಗೆ ಬಡ್ತಿಯಲ್ಲಿ ಅನ್ಯಾಯವಾಗಲಿದೆ’ ಎಂದು ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಡಿಎಫ್‌ಒಗಳು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT