ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DKS ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಲೋಕಾಯುಕ್ತ ತನಿಖೆಗೆ CBI ಆಕ್ಷೇಪ

Published 18 ಏಪ್ರಿಲ್ 2024, 16:28 IST
Last Updated 18 ಏಪ್ರಿಲ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐನಿಂದ ಲೋಕಾಯುಕ್ತದ ಸುಪರ್ದಿಗೆ ನೀಡಿರುವುದು ಕಣ್ಣೊರೆಸುವ ತಂತ್ರ’ ಎಂದು ಸಿಬಿಐ, ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿ, 'ಪ್ರಕರಣದ ತನಿಖೆಯನ್ನು ಸಿಬಿಐನಿಂದ ಲೋಕಾಯುಕ್ತಕ್ಕೆ ವರ್ಗಾಯಿಸಿರುವುದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಇದು ಹಿಂದೆಂದೂ ಕಂಡು ಕೇಳರಿಯದ ನಿರ್ಧಾರ. ಇಡೀ ತನಿಖೆಯನ್ನು ದಾರಿ ತಪ್ಪಿಸುವ ಮೂಲಕ ಡಿ.ಕೆ.ಶಿವಕುಮಾರ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶ ಸರ್ಕಾರದ್ದಾಗಿದೆ’ ಎಂದು ಬಲವಾದ ವಿರೋಧ ವ್ಯಕ್ತಪಡಿಸಿದರು.

‘ಸಿಬಿಐ ಹಲವು ತಿಂಗಳ ಕಾಲ ಪ್ರಾಥಮಿಕ ತನಿಖೆ ನಡೆಸಿದೆ. ಹೀಗಾಗಿ, ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡಬೇಕು. ತನಿಖೆ ಪೂರ್ಣಗೊಳಿಸಿ, ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಬೇಕು’ ಎಂದು ಕೋರಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ಪಿ.ದಳವಾಯಿ, ‘ಉಪಮುಖ್ಯಮಂತ್ರಿ ವಿರುದ್ಧದ ಪ್ರಕರಣವನ್ನು ದಾರಿ ತಪ್ಪಿಸುತ್ತಿರುವುದು ಆಘಾತಕಾರಿ ಬೆಳವಣಿಗೆ. ನಾವು ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದೆ’ ಎಂದರು.

‘ರಾಜ್ಯ ಸರ್ಕಾರದ ಆದೇಶ ಸ್ವೇಚ್ಛೆಯಿಂದ ಕೂಡಿದೆ. ಪ್ರಕರಣವನ್ನು ಸಿಬಿಐಯಿಂದ ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದರಲ್ಲಿ ಸರ್ಕಾರ ಡಿ.ಕೆ.ಶಿವಕುಮಾರ್ ರಕ್ಷಿಸುವ ಕೆಲಸ ಮಾಡಿದೆ. ಇಂತಹ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನ್ಯಾಯಾಲಯದ ಆದೇಶಗಳನ್ನು ಸಂಪುಟ ಸಭೆಯ ಮುಂದೆ ಇರಿಸಿರಲಿಲ್ಲ’ ಎಂದು ಆಕ್ಷೇಪಿಸಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರದ ಪರ ವಿಶೇಷ ಪ್ರತಿನಿಧಿಯಾಗಿ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಗೂ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮತ್ತು ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲ ಉದಯ ಹೊಳ್ಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT