ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರೆಲ್ಲ ಅನರ್ಹ; ಬಹುಮತ ಸಾಬೀತಿಗೆ ದಾರಿ ಸುಗಮ, ಯಡಿಯೂರಪ್ಪ ನಿರಾಳ

ಸಚಿವ ಸಂಪುಟ ವಿಸ್ತರಣೆಗೆ ಇದ್ದ ಅಡ್ಡಿ ನಿವಾರಣೆ
Last Updated 28 ಜುಲೈ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಕಾಂಗ್ರೆಸ್–ಜೆಡಿಎಸ್‌ನ 14 ಶಾಸಕರನ್ನು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಭಾನುವಾರ ಈ ಅವಧಿಗೆ ಅನರ್ಹಗೊಳಿಸಿದ್ದಾರೆ.

ಇದರಿಂದಾಗಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸಮತ ಸಾಬೀತುಪಡಿಸಲು ಇದ್ದ ಅಡ್ಡಿ, ಆತಂಕಗಳು ನಿವಾರಣೆಯಾಗಿವೆ.

ಒಂದು ವೇಳೆ ಅತೃಪ್ತರ ರಾಜೀನಾಮೆ ಅಂಗೀಕಾರವಾಗದೇ ಅಥವಾ ಅನರ್ಹಗೊಳ್ಳದೇ ಇದ್ದಿದ್ದರೆ ಅವರಲ್ಲಿ ಕೆಲವರು ಸದನಕ್ಕೆ ಬಂದು ಮೈತ್ರಿ ಪಾಳಯದಲ್ಲಿ ಗುರುತಿಸಿಕೊಂಡರೆ ಎಂಬ ಭಯ ಬಿಜೆಪಿ ಮುಖಂಡರನ್ನು ಕಾಡಿತ್ತು.

ಸಂಪುಟ ರಚನೆ ಕಸರತ್ತು

ಸದನದಲ್ಲಿ ಬಹುಮತ ಪಡೆದ ನಂತರ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಯ ಹಾದಿ ಸುಗಮವಾಗಲಿದೆ. ಮೈತ್ರಿ ಪಕ್ಷದಿಂದ ಬಂದವರಿಗೆ ನೀಡಬೇಕಿದ್ದಅಷ್ಟೂ ಸಚಿವ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಬಿಜೆಪಿಯಲ್ಲಿ ಎರಡರಿಂದ ಮೂರು ಸಲ ಗೆದ್ದಿರುವ 55 ಶಾಸಕರು ಇದ್ದಾರೆ. ಅವರಲ್ಲಿ ಸಾಕಷ್ಟು ಮಂದಿ ಹಿರಿಯರಿದ್ದು, ಬಹುತೇಕರಿಗೆ ಸಚಿವ ಸ್ಥಾನ ಸಿಗಲಿದೆ. ಹೊರಗಿನಿಂದ ಬಂದ ಕೆಲವರಿಗಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕಿತ್ತು. ಈಗ ಅವುಗಳ ಅಧಿಕಾರವೂ ಬಿಜೆಪಿ ಪಾಲಾಗಲಿದೆ.

ಅನರ್ಹಗೊಂಡ 17 ಶಾಸಕರಲ್ಲಿ ಕನಿಷ್ಠ 10 ರಿಂದ 12 ಮಂದಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ಬೆಂಗಳೂರು ಭಾಗದ ನಾಲ್ವರಲ್ಲಿ ಮೂವರಿಗಾದರೂ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ಇದರಿಂದಾಗಿ ನಗರದ ಬಿಜೆಪಿ ಶಾಸಕರಿಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ಮೈಸೂರು ಭಾಗದಲ್ಲಿ ಎಚ್‌.ವಿಶ್ವನಾಥ್ ಬದಲಿಗೆ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ.

ಸಾಂವಿಧಾನಿಕ ಹಾಗೂ ಲಾಭದಾಯಕ ಹುದ್ದೆಗಳನ್ನು ಹೊಂದುವಂತಿಲ್ಲ ಎಂದು ಸಭಾಧ್ಯಕ್ಷರು ಈಗಾಗಲೇ ಪ್ರಕಟಿಸಿದ್ದಾರೆ. ಈತೀರ್ಪಿನಅನ್ವಯ ಅನರ್ಹರಿಗೆ ಸಚಿವ ಸ್ಥಾನ ನೀಡಲು ಬರುವುದಿಲ್ಲ ಎಂಬ ನೆಪವನ್ನು ಮುಂದಿಟ್ಟುಕೊಂಡು ಸದ್ಯಕ್ಕೆ ಸಂಕಷ್ಟದಿಂದ ಯಡಿಯೂರಪ್ಪ ಪಾರಾಗಲಿದ್ದಾರೆ.ತಕ್ಷಣಕ್ಕೆ ಕೋರ್ಟ್ ಮೊರೆ ಹೋದರೂ ಇತ್ಯರ್ಥವಾಗಲು ಕೆಲವು ತಿಂಗಳುಗಳೇ ಬೇಕು. ಜತೆಗೆ, ಇಂಥ ವಿಚಾರದಲ್ಲಿ ಕೋರ್ಟ್ ಸಹ ತಡೆಯಾಜ್ಞೆ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಪಕ್ಷ ಸಂಘಟನೆ

ಬಿಜೆಪಿಗೆ ನೆಲೆ ಇಲ್ಲದ ಕ್ಷೇತ್ರಗಳಲ್ಲಿ ಮೈತ್ರಿ ಪಾಳಯದಿಂದ ಬರುವ ನಾಯಕರು ಆಸರೆಯಾಗಲಿದ್ದಾರೆ ಎಂದು ಭಾವಿಸಿದ್ದು, ಈಗ ಅಂತಹ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಅನರ್ಹಗೊಂಡವರ ಕ್ಷೇತ್ರಗಳಿಗೆ ತಕ್ಷಣಕ್ಕೆ ಚುನಾವಣೆ ನಡೆದರೆ ಸಮರ್ಥ ಅಭ್ಯರ್ಥಿಗಳ ಹುಡುಕಾಟ ನಡೆಸುವ ಅನಿವಾರ್ಯತೆಯೂ ಎದುರಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ರಾಜರಾಜೇಶ್ವರಿ ನಗರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯ ಹುಣಸೂರು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಂತಹ ಕ್ಷೇತ್ರಗಳಲ್ಲಿ ಪೈಪೋಟಿ ನೀಡುವಂತಹ ನಾಯಕರಿಲ್ಲ.

ಬಹುಮತ ಹೊಂದಿದ ಸರ್ಕಾರ ಉಳಿಸಿಕೊಳ್ಳಬೇಕಾದರೆ ಅನರ್ಹಗೊಂಡಿರುವ 17 ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಪಮತದಿಂದ ಸೋತವರು, ಸಮರ್ಥ ನಾಯಕರು ಇರುವ ಕ್ಷೇತ್ರಗಳಲ್ಲಿ ಸಮಸ್ಯೆಯಾಗದು. ಆದರೆ, ಪಕ್ಷ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಏನು ಮಾಡಬೇಕು ಎಂಬ ಚಿಂತೆ ಪಕ್ಷದ ಮುಖಂಡರನ್ನು ಕಾಡುತ್ತಿದೆ ಎಂದು ಮೂಲಗಳು ಹೇಳಿವೆ.

ಮಹೇಶ್ ವಿರುದ್ಧ ದೂರು

ಕೊಳ್ಳೇಗಾಲದ ಬಿಎಸ್‌ಪಿ ಶಾಸಕ ಎನ್.ಮಹೇಶ್ ವಿರುದ್ಧ ಸ್ಪೀಕರ್‌ ಕಚೇರಿಗೆ ಶನಿವಾರ ರಾತ್ರಿ ದೂರು ಬಂದಿದೆ. ಆ ಪಕ್ಷದ ಮುಖಂಡರು ನೀಡಿರುವ ದೂರಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಮುಂದಿನ ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಮೇಶ್ ಕುಮಾರ್ ತಿಳಿಸಿದರು. ‘ಶ್ರೀಮಂತ ಪಾಟೀಲ ಆಸ್ಪತ್ರೆಯಲ್ಲಿ ಇರುವ ಬಗ್ಗೆ ನನಗೆ ಯಾರೂ ಅಧಿಕೃತವಾಗಿ ವಿವರಣೆ ನೀಡಿಲ್ಲ. ಅಗತ್ಯ ದಾಖಲೆಗಳನ್ನೂ ಸಲ್ಲಿಸಿಲ್ಲ’ ಎಂದರು.

* ದೇಶದಲ್ಲಿ ಇದೊಂದು ಐತಿಹಾಸಿಕ ತೀರ್ಪು. ಪಕ್ಷಾಂತರ ನಿಷೇಧ ಕುರಿತಂತೆ ವಿವಿಧ ರಾಜ್ಯಗಳ ಸ್ಪೀಕರ್‌ಗಳು ವಿವಿಧ ರೀತಿಯಲ್ಲಿ ತೀರ್ಪು ನೀಡಿದ್ದಾರೆ

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

*ಸಭಾಧ್ಯಕ್ಷರ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಪೆಟ್ಟು. ಅಧಿಕಾರಕ್ಕೆ ತಮ್ಮನ್ನು ಮಾರಿಕೊಳ್ಳುವ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ

-ಸಿದ್ದರಾಮಯ್ಯ,ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

* ಸಭಾಧ್ಯಕ್ಷರು ಒತ್ತಡಕ್ಕೆ ಮಣಿದಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಕೈಗೆತ್ತಿಕೊಳ್ಳದೆ ಅನರ್ಹತೆಯನ್ನಷ್ಟೇ ಪರಿಗಣಿಸಿದ್ದು ತಪ್ಪು

-ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT