ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಸಂಸ್ಕೃತಿಯ ದಾಖಲೀಕರಣ

ಬೃಹತ್‌ ಯೋಜನೆಗೆ ಮುಂದಾದ ಜಾನಪದ ವಿ.ವಿ
Last Updated 20 ಡಿಸೆಂಬರ್ 2018, 19:39 IST
ಅಕ್ಷರ ಗಾತ್ರ

ಗೊಟಗೋಡಿ (ಹಾವೇರಿ ಜಿಲ್ಲೆ): ಕರ್ನಾಟಕದ ಜಾನಪದ ಸಂಸ್ಕೃತಿಯನ್ನು ಅಕ್ಷರ, ದೃಶ್ಯ ಮತ್ತು ಶ್ರವ್ಯ ರೂಪದಲ್ಲಿ ದಾಖಲಿಸಿ, ಡಿಜಿಟಲೀಕರಣಗೊಳಿಸುವ ‘ಸಮಗ್ರ ಕರ್ನಾಟಕದ ಜನಪದ ಸರ್ವೇಕ್ಷಣೆ ಮತ್ತು ಸಮಗ್ರ ಜಾನಪದ ದಾಖಲಾತಿ ಯೋಜನೆ’ಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕೈಗೆತ್ತಿಕೊಂಡಿದೆ.

ಕಣ್ಮರೆಯಾಗುತ್ತಿರುವ ಗ್ರಾಮ ಜಾನಪದವನ್ನು ಎನ್‌ಸೈಕ್ಲೋಪಿಡಿಯಾ ಮಾದರಿಯಲ್ಲಿ ದಾಖಲಿಸುವ ಉದ್ದೇಶವಿದ್ದು, ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಯೋಗ ನೀಡಿದೆ. ಆರಂಭದಲ್ಲಿ ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ದಾಖಲೀಕರಣ ನಡೆಯಲಿದೆ. ಬರಹ, ಆಡಿಯೊ, ವಿಡಿಯೊ ದಾಖಲೀಕರಣದ ಪ್ರಕ್ರಿಯೆ ಮುಗಿದ ಬಳಿಕ ಡಿಜಿಟಲೀಕರಣಗೊಳಿಸಲಾಗುವುದು ಎಂದು ಕುಲಪತಿ ಪ್ರೊ. ಡಿ.ಬಿ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತ ತಜ್ಞರ ಸಮಾಲೋಚನಾ ಸಭೆಯು ನಡೆದಿದ್ದು, 30 ಜಿಲ್ಲೆಗಳಿಗೆ ಸಂಪಾದಕರನ್ನು ಆಯ್ಕೆ ಮಾಡಿ, ಕ್ಷೇತ್ರ ಕಾರ್ಯಕರ್ತರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಲಾಗಿದೆ. ಎರಡು ತಿಂಗಳಿಗೊಮ್ಮೆ ಪುನರ್ ಪರಿಶೀಲನಾ ಸಭೆ ನಡೆಸಿ, ಪ್ರಗತಿ ಪರಿಶೀಲಿಸಲಾಗುವುದು ಎಂದು ಕುಲಸಚಿವ (ಮೌಲ್ಯಮಾಪನ) ಡಾ.ಎಂ.ಎನ್‌. ವೆಂಕಟೇಶ ಮಾಹಿತಿ ನೀಡಿದರು.

ಯೋಜನೆಯು ಪ್ರತಿ ಹಳ್ಳಿಯ ಆಯ್ದ ಕಲೆ, ಕಲಾವಿದರು ಹಾಗೂ ಜನಪದೀಯ ವಿವರಗಳನ್ನು ವಿವರವಾಗಿ ದಾಖಲಿಸಿ, ಸಮಗ್ರ ಜಾನಪದ ವಿವರಗಳನ್ನು ಪ್ರಾತಿನಿಧಿಕವಾಗಿ ಸಂಗ್ರಹಿಸಲಿದೆ. ಪ್ರಮುಖ ಕಲಾವಿದರ ಜೊತೆ ಸಂದರ್ಶನ, ಕಲೆಗಳ ಪ್ರದರ್ಶನ ಹಾಗೂ ಸಿದ್ಧತೆ, ಪ್ರೇಕ್ಷಕರ ಸಂವೇದನೆಯನ್ನು ದೃಶ್ಯ–ಶ್ರವ್ಯ ಮಾಧ್ಯಮದಲ್ಲಿ ದಾಖಲಿಸಲಿದೆ.

ಗ್ರಾಮೀಣ ಉತ್ಸವ, ಹಬ್ಬ, ಆಚರಣೆ, ಜಾತ್ರೆಗಳ ನೆಲೆಯಲ್ಲಿ ‘ವಾರ್ಷಿಕ ಕ್ಯಾಲೆಂಡರ್’ ಸಿದ್ಧಪಡಿಸಿಕೊಳ್ಳುವುದು ಹಾಗೂ ವಿಶಿಷ್ಟ ಆಚರಣೆ, ಸಂಸ್ಕೃತಿಗಳನ್ನು ವಿಶೇಷವಾಗಿ ದಾಖಲಿಸುವ ಉದ್ದೇಶ ಹೊಂದಿದೆ ಎಂದು ಕುಲಸಚಿವ ಪ್ರೊ. ಚಂದ್ರಶೇಖರ್ ವಿವರಿಸಿದರು.

ಹಂತ ಹಂತದ ಅನುದಾನ: ‘ಯೋಜನೆ ಒಂದು ವರ್ಷದ್ದಾಗಿದ್ದು, ಆಯಾ ಜಿಲ್ಲಾ ತಂಡ ಆರು ತಿಂಗಳಲ್ಲಿ ಕ್ಷೇತ್ರಕಾರ್ಯದ ವರದಿಯನ್ನು ವಿ.ವಿಗೆ ಸಲ್ಲಿಸಬೇಕು. ಎರಡು ತಿಂಗಳಿಗೊಮ್ಮೆ, ಪ್ರಗತಿ ಆಧಾರದಲ್ಲಿ ಅನು‌ದಾನ ಬಿಡುಗಡೆಯಾಗಲಿದೆ.. ಆರಂಭಿಕವಾಗಿ ₹25 ಲಕ್ಷ ಮೀಸಲಿರಿಸಿದೆ’ ಎಂದು ನಾಯಕ ವಿವರಿಸಿದರು.

**

ಸಮಗ್ರ ಗ್ರಾಮ ಕರ್ನಾಟಕದ ಜಾನಪದ ಮಾಹಿತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
–ಪ್ರೊ.ಡಿ.ಬಿ.ನಾಯಕ,ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT