ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳಲ್ಲಿ ಬಿಡಿಎ ಶುದ್ಧೀಕರಣ: ಬಿ.ಎಸ್‌. ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ
Last Updated 2 ಫೆಬ್ರುವರಿ 2021, 18:33 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ವ್ಯವಹಾರಗಳ ಕೂಪದಂತಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಬದಲಾವಣೆ ತರುವ ಪ್ರಯತ್ನ ಆರಂಭವಾಗಿದೆ. ನಾಲ್ಕು ತಿಂಗಳಲ್ಲಿ ಬಿಡಿಎ ಶುದ್ಧೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಬಿಜೆಪಿಯ ಆರಗ ಜ್ಞಾನೇಂದ್ರ, ಬಿಡಿಎ, ಕರ್ನಾಟಕ ಗೃಹ ಮಂಡಳಿ ಸೇರಿದಂತೆ ವಸತಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಪ್ರಸ್ತಾಪಿಸಿದರು.

ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ಬಿಡಿಎ ಶುದ್ಧೀಕರಣ ಆರಂಭವಾಗಿದೆ. ದೊಡ್ಡಮಟ್ಟದ ಅವ್ಯವಹಾರ ನಡೆದಿರುವುದು ನಿಜ. ಎಲ್ಲವಕ್ಕೂ ಕಡಿವಾಣ ಹಾಕುತ್ತೇವೆ. ಕೆಲವೇ ತಿಂಗಳಲ್ಲಿ ನಿವೇಶನಗಳ ಹರಾಜಿನಿಂದ ನೂರಾರು ಕೋಟಿ ರೂಪಾಯಿ ವರಮಾನ ಬಂದಿದೆ. ಅಧಿಕಾರಿಗಳೇ ಶಾಮೀಲಾಗಿ ಹಗರಣ ನಡೆಸಿ, ಮುಚ್ಚಿ ಹಾಕುತ್ತಿದ್ದರು. ಇನ್ನು ಅಂತಹದ್ದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ನಿವೇಶನ ಮಂಜೂರಾದರೂ ಫಲವಿಲ್ಲ: ‘ನನಗೆ 2009ರಲ್ಲಿ ‘ಜಿ’ ಕೋಟಾದಡಿ ಬಿಡಿಎ ನಿವೇಶನ ಮಂಜೂರಾಗಿತ್ತು. ಆದರೆ, ಈವರೆಗೂ ಮನೆ ಕಟ್ಟಲು ಆಗಿಲ್ಲ. ನಕಲಿ ದಾಖಲೆ ಸೃಷ್ಟಿಸಿದ ವ್ಯಕ್ತಿಯೊಬ್ಬ ನಿವೇಶನ ತನ್ನದೆಂದು ದಾವೆ ಹೂಡಿದ್ದಾನೆ. ಬಿಡಿಎ ಅಧಿಕಾರಿಗಳು ನಿವೇಶನದ ಜಮೀನು ತಮ್ಮದಲ್ಲ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಶಾಸಕನಾದ ನನ್ನ ಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಗತಿ ಏನು’ ಎಂದು ಅರಗ ಜ್ಞಾನೇಂದ್ರ ಪ್ರಶ್ನಿಸಿದರು.

ಗೃಹ ಮಂಡಳಿಯಲ್ಲೂ ಇದೇ ಪರಿಸ್ಥಿತಿ ಇದೆ. 1974ರಲ್ಲಿ ನಿರ್ಮಿಸಿದ ಕೆಂಗೇರಿ ಬಡಾವಣೆಯಲ್ಲಿ ಎಲ್ಲ ನಿವೇಶನಗಳೂ ಖಾಲಿಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಅಧಿಕಾರಿಗಳ ವಿಶೇಷ ತಂಡ ಕಳುಹಿಸಿ ತಪಾಸಣೆ ನಡೆಸಿದಾಗ ಹಂಚಿಕೆಯಾಗದ 74 ನಿವೇಶನಗಳು ಪತ್ತೆಯಾಗಿವೆ. ಗೃಹ ಮಂಡಳಿ ಅಧ್ಯಕ್ಷನಾದ ಕಾರಣಕ್ಕೆ ಇದನ್ನು ತಿಳಿಯಲು ಸಾಧ್ಯವಾಯಿತು. ಬಿಡಿಎ ಮತ್ತು ಗೃಹ ಮಂಡಳಿಯಲ್ಲಿ ನಿವೇಶನಗಳ ಮಾಹಿತಿಯನ್ನೇ ಮುಚ್ಚಿಟ್ಟು ಅಕ್ರಮ ಎಸಗುವ ಅಧಿಕಾರಿಗಳಿದ್ದಾರೆ ಎಂದು ದೂರಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಮ್ಯಾಜಿಸ್ಟೀರಿಯಲ್‌ ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಗಳ್ಳರಿಗೆ ನೆರವು ನೀಡುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಭೂಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಬದಲಿ ನಿವೇಶನಕ್ಕೆ ಅಲೆದಾಡುತ್ತಿದ್ದ ಮನಗೂಳಿ

‘ಇತ್ತೀಚೆಗೆ ನಿಧನರಾದ ಹಿರಿಯ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಬಿಡಿಎ ಬದಲಿ ನಿವೇಶನ ನೀಡಬೇಕಿತ್ತು. 25 ವರ್ಷಗಳಿಂದ ನಿವೇಶನ ಪಡೆಯಲು ಬಿಡಿಎ ಕಚೇರಿಗೆ ಅಲೆದಾಡುತ್ತಲೇ ಇದ್ದರು’ ಎಂದು ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹೇಳಿದರು.

‘ಬದಲಿ ನಿವೇಶನ ಮಂಜೂರಾತಿಗಾಗಿ ಇತ್ತೀಚೆಗೆ ನನ್ನ ಕಚೇರಿಗೆ ಬಂದಿದ್ದರು. ಅವರಂತಹ ವ್ಯಕ್ತಿಗೆ ಅಧಿಕಾರಿಗಳು ಕೆಲಸ ಮಾಡಿಕೊಟ್ಟಿರಲಿಲ್ಲ. ಬಿಡಿಎ ಒಳ್ಳೆಯ ಸಂಸ್ಥೆ. ಆದರೆ, ಅಧಿಕಾರಿಗಳಿಂದಾಗಿ ಭ್ರಷ್ಟಾಚಾರ, ಅಕ್ರಮಗಳ ಕೂಪವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT