ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ಬಿಡುಗಡೆ ಮಾಡದೇ ಪ್ರಧಾನಿ, ಶಾ ರಾಜ್ಯಕ್ಕೆ ಕಾಲಿಡಬಾರದು: ‌ಸುರ್ಜೇವಾಲ

Published 22 ಏಪ್ರಿಲ್ 2024, 13:40 IST
Last Updated 22 ಏಪ್ರಿಲ್ 2024, 13:40 IST
ಅಕ್ಷರ ಗಾತ್ರ

ಮಂಗಳೂರು: ‘ಕರ್ನಾಟಕದ ಜನರಿಗೆ ಹಾಗೂ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಬರ ಪರಿಹಾರವನ್ನು ಇಂದು (ಸೋಮವಾರ) ರಾತ್ರಿಯೊಳಗೆ ಬಿಡುಗಡೆ ಮಾಡದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ರಾಜ್ಯಕ್ಕೆ ಕಾಲಿಡಬಾರದು. ಬಂದರೆ ಇಲ್ಲಿನ ಜನರೇ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‌‘ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಸೂಚನೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರಿಂ ಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ‘ಒಕ್ಕೂಟ ವ್ಯವಸ್ಥೆಯಲ್ಲಿ ಇವನ್ನೆಲ್ಲ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದು ರಾಜ್ಯದ ಜನರಿಗೆ, ರೈತರಿಗೆ ಸಿಕ್ಕ ದೊಡ್ಡ ಜಯ’ ಎಂದರು.

‘ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದರು. ಕೊನೆಗೂ ನ್ಯಾಯಕ್ಕೆ ಜಯವಾಗಿದೆ. ಪ್ರಧಾನಿಯ ಅಹಂಕಾರ ಹಾಗೂ ಅವರ ದ್ವೇಷ ರಾಜಕಾರಣ ಸೋತಿದೆ’ ಎಂದರು.

‘ಮೋದಿ ಮತ್ತು ಅಮಿತ್ ಶಾ ಅವರಿಂದ ಕನ್ನಡಿಗರು ಉತ್ತರದಾಯಿತ್ವ ಬಯಸುತ್ತಿದ್ದಾರೆ. ₹ 18,172 ಕೋಟಿ ಬರ ಪರಿಹಾರ ಬಿಡುಗಡೆಗೆ ಕೋರಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಬರ ಪರಿಹಾರವನ್ನು ಬಿಡುಗಡೆ ಮಾಡದೇ ಕರ್ನಾಟಕಕ್ಕೆ ಬಂದು ಮತ ಕೇಳುವ ಹಕ್ಕು ನಿಮಗಿಲ್ಲ. ರಾಜ್ಯದ ಜನರು ನಿಮ್ಮ ವಿರುದ್ಧ ಮತ ಚಲಾಯಿಸಲಿದ್ದಾರೆ. ನಿಮಗೆ ಇಲ್ಲಿ ಒಂದೂ ಸೀಟೂ ಸಿಗದು‘ ಎಂದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದಿದ್ದಕ್ಕೆ ಕರ್ನಾಟಕದ 6.5 ಕೋಟಿ ಕನ್ನಡಿಗರು ಮತ್ತು ರೈತ ಬಂಧುಗಳ ವಿರುದ್ಧ ಕೇಂದ್ರ ಸರ್ಕಾರ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಲ್ಲಿ (ಎನ್‌ಡಿಆರ್‌ಎಫ್‌) ರಾಜ್ಯಕ್ಕೆ ನ್ಯಾಯಯುತವಾಗಿ ದಕ್ಕಬೇಕಾದ ಬರ ಪರಿಹಾರ ನಿರಾಕರಿಸಿ ದ್ವೇಷ ರಾಜಕಾರಣ ನಡೆಸಿದೆ’ ಎಂದು ಅವರು ಆರೋಪಿಸಿದರು.

‘2023ರ ಸೆ.13ರಂದೇ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿತ್ತು. ₹ 18,172 ಕೋಟಿ ಪರಿಹಾರ ನೀಡುವಂತೆ ಸೆ.22ರಂದೇ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು. ಅ.4ರಿಂದ 9ರವರೆಗೆ ಕೇಂದ್ರ ಪರ ಅಧ್ಯಯನ ತಂಡ ರಾಜ್ಯದ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಕೇಂದ್ರ ಗೃಹಸಚಿವಾಲಯಕ್ಕೆ ಅ. 25ರಂದು ವರದಿ ಸಲ್ಲಿಸಿತ್ತು. ಇಲ್ಲಿನ ನಾಯಕರು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಪದೇ ಪದೇ ಮನವಿ ಸಲ್ಲಿಸಿದರೂ ಕೇಂದ್ರವು ಕಿವಿಗೊಟ್ಟಿಲ್ಲ. ಜನರ ಹಿತಕಾಯಲು ರಾಜ್ಯ ಸರ್ಕಾರ 2024ರ ಮಾರ್ಚ್‌ 23ರಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕಾಯಿತು. ಆದರೆ, ಗೃಹಸಚಿವ ಅಮಿತ್ ಶಾ ಹಾಗೂ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬರ ಪರಿಹಾರ ವಿಚಾರದಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದರು’ ಎಂದು ಅವರು ಆರೋಪಿಸಿದರು.

‘ಬರ ನಿರ್ವಹಣೆ ಕೈಪಿಡಿ ಪ್ರಕಾರ, ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿದ ವಾರದೊಳಗೆ ಬರ ಅಧ್ಯಯನ ತಂಡವನ್ನು ಕಳುಹಿಸಬೇಕು. ತಂಡವು ವಾರದೊಳಗೆ ಬರ ಅಧ್ಯಯನ ಪ್ರವಾಸ ಕೈಗೊಳ್ಳಬೇಕು. ಇದಾಗಿ ತಿಂಗಳ ಒಳಗೆ ಬರ ಪರಿಹಾರ ಬಿಡುಗಡೆ ಮಾಡಬೇಕು. 2023ರ ನ.25 ರ ಒಳಗೆ ರಾಜ್ಯಕ್ಕೆ ಬರ ಪರಿಹಾರ ಸಿಗಬೇಕಿತ್ತು. ಆದರೆ, ಇದಾಗಿ ಐದು ತಿಂಗಳ ಬಳಿಕವೂ ಬರ ಪರಿಹಾರ ಸಿಕ್ಕಿಲ್ಲ. ಇದು ರಾಜ್ಯದ ಜನರ ಹಕ್ಕಿನ ನಿರಾಕರಣೆ’ ಎಂದರು.

‘ಕರ್ನಾಟಕಕ್ಕೆ ಅನ್ಯಾಯವಾಗಿದ್ದು ಕೇವಲ ಬರ ಪರಿಹಾರವಷ್ಟೇ ಅಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹ 58 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು. ಕರಾವಳಿ ತೀರ ಅಭಿವೃದ್ಧಿ, ಬೆಂಗಳೂರು ಪೆರಿಫೆರಲ್‌ ರಸ್ತೆ ಅಭಿವೃದ್ಧಿ, ಬೆಂಗಳೂರಿನ ಕೆರೆಗಳ ಅಭಿವೃದ್ಧಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣ ಅದು. ಅದನ್ನು ಬಿಡುಗಡೆ ಮಾಡದಿದ್ದರೆ ಕೇಳುವುದು ತಪ್ಪೇ. ಭದ್ರಾ ಮೇಲ್ದಂಡೆ ಯೋಜನೆಗೆ ₹ 6 ಸಾವಿರ ಕೋಟಿ ಅನುದಾನ ಕೊಡುವ ಭರವಸೆ ನೀಡಿದ ಕೇಂದ್ರವನ್ನು ಹಣ ಬಿಡುಗಡೆ ಮಾಡುವಂತೆ ಕೇಳಬಾರದೆ. ಪೆರಿಫೆರಲ್ ರಸ್ತೆ ಅಭಿವೃದ್ಧಿ ಸಲುವಾಗಿ ಹೈದರಾಬಾದ್‌ನಂತೆ ಬೆಂಗಳೂರಿಗೂ ₹ 30 ಸಾವಿರ ಕೋಟಿ ನೀಡುತ್ತಿದ್ದರೆ, ಇಲ್ಲಿನ ಆರ್ಥಿಕ ಚಟುವಟಿಕೆ ಮೈಸೂರು ಮತ್ತು ಅದರಾಚೆಗೂ ವಿಸ್ತರಿಸುತ್ತಿತ್ತು’ ಎಂದರು.

‘ಪ್ರಗತಿಪರ ರಾಜ್ಯವಾದ ಕರ್ನಾಟಕದ ಜನರು ಸಲ್ಲಿಸುವ ಪ್ರತಿ ₹ 100 ತೆರಿಗೆಯಲ್ಲಿ ಕೇವಲ ₹ 13 ಮಾತ್ರ ಹಿಂದಕ್ಕೆ ಸಿಗುತ್ತಿದೆ. ರಾಜ್ಯದ ರೈತರು ಸಂಕಟದಲ್ಲಿರುವಾಗಲೂ ಅವರ ಹಣದಲ್ಲಿ ನ್ಯಾಯಯುತ ಪಾಲು ಸಿಗಬಾರದೇ. ಪ್ರಗತಿಪರ ರಾಜ್ಯವನ್ನು ಈ ರೀತಿ ಪೀಡಿಸಬಹುದೇ’ ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರು ಕೊಲೆಗೀಡಾದ ನೇಹಾ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲವೇಕೆ ಎಂಬ ಪ್ರಶ್ನೆಗೆ, ‘ತಪ್ಪೆಸಗಿದವರಿಗೆ ಶಿಕ್ಷೆ ಕೊಡಿಸುವುದು ಸರ್ಕಾರದ ಕೆಲಸ. ನೇಹಾ ಕರ್ನಾಟಕದ ಮಗಳು. ನಮ್ಮ ಮಗಳು ಕೂಡ. ಯಾರೇ ಕಾನೂನು ಕೈಗೆತ್ತಿಕೊಂಡು ಇಂತಹ ನಾಚಿಕೆಗೇಡಿನ ಹಿನಾಯ ಕೃತ್ಯ ನಡೆಸಿದರೆ ಅವರಿಗೆ ಶಿಕ್ಷೆ ಕೊಡಿಸದೇ ಸರ್ಕಾರ ವಿರಮಿಸದು. ಇದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಸರ್ಕಾರ ನಡೆಸಲಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಆತನಿಗೆ ಗಲ್ಲು ಶಿಕ್ಷೆ ಆಗುವಂತೆ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ. ಯಾವುದೇ ಹುಡುಗ ಅಮಾಯಕ ಹುಡುಗಿ ಜೊತೆ ಈ ರೀತಿ ಕೃತ್ಯ ನಡೆಸಲು ಮುಂದೆ ಯಾವತ್ತೂ ಧೈರ್ಯ ಮಾಡಬಾರದು ಅಂತಹ ಶಿಕ್ಷೆ ಕೊಡಿಸಲು ಬದ್ಧರಿದ್ದೇವೆ’ ಎಂದರು.

‘ಪರೇಶ್‌ ಮೇಸ್ತ ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿತ್ತು. ಆದರೆ ಸಿಬಿಐ ತನಿಖೆ ಬಳಿಕ ಏನಾಯಿತು ಗೊತ್ತಿದೆ. ಭಾವನಾತ್ಮಕ ವಿಚಾರದಲ್ಲಿ ಬಿಜೆಪಿ ಎಷ್ಟು ನಮಗೆ ಕುಟುಂಬವನ್ನು ದುರ್ಬಳಕೆ ಮಾಡಿಕೊಂಡು ಮರೆತರು. ಮೋದಿಯವರಿಂದ ಹಿಡಿದು ಬಿಜೆಪಿಯ ಅನೇಕ ನಾಯಕರು ಸುಳ್ಳು ಹೇಳಿದ್ದರು ಎಂಬುದು ಸಿಬಿಐ ತನಿಖಾ ವರದಿಯ ಬಳಿಕ ಸಾಬೀತಾಗಿದೆ’ ಎಂದು ಬೊಟ್ಟು ಮಾಡಿದರು.

‘ಬಿಜೆಪಿ ಕೇಂದ್ರದಲ್ಲಿ 10 ವರ್ಷ ಆಳ್ವಿಕೆ ನಡೆಸಿದ ಬಳಿಕವೂ ಕರ್ನಾಟಕದ ಮಗಳ ಕೊಲೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುವಂತಹ ಹೀನಾಯ ಸ್ಥಿತಿಗೆ ಇಳಿದಿದೆ. ಜೆ.ಪಿ.ನಡ್ಡಾ ಮತ್ತು ಕಂಪನಿ, ಯಡಿಯೂರಪ್ಪ ದೇಶದಲ್ಲಿರುವ ನಿರುದ್ಯೋಗ, ಕರ್ನಾಟಕಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯ, ಬೆಲ ಏರಿಕೆ, ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆ, ಬರ ಪರಿಹಾರ ನಿರಾಕರಣೆ ಬಗ್ಗೆ ಮಾತನಾಡುವ ಬದಲು ಹೆಣದ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು’ ಎಂದರು.

‘ಮಗಳನ್ನು ಕಳೆದುಕೊಂಡ ಕುಟುಂಬದ ಭಾವನೆಗಳಿಗೆ ಗೌರವ ಕೊಡಬೇಕು. ಅವರಿಗೆ ನೋವುಂಟು ಮಾಡಬಾರದು. ಕನಿಷ್ಠ ಪಕ್ಷ ಇಷ್ಟಾದರೂ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಈ ಪ್ರಕರಣದ ವಿಚಾರಣೆಯನ್ನು 90 ದಿನಗಳ ಒಳಗೆ ಮುಗಿಸಲು ಗರಿಷ್ಠ ಪ್ರಯತ್ನ ನಡೆಸುತ್ತೇವೆ. ಹತ್ಯೆ ನಡೆಸಿದವನಿಗೆ ಗಲ್ಲು ಶಿಕ್ಷೆಗೆ ಒತ್ತಾಯಿಸಲಿದ್ದೇವೆ. ನೇಹಾಳಿಗೆ ನ್ಯಾಯ ಒದಗಿಸುವುದೇ ನಮ್ಮ ಆದ್ಯತೆ’ ಎಂದರು.

‘ದಿ.ಅಟಲ್‌ ಬಿಹಾರ್‌ ವಾಜಪೇಯಿ, ಎಲ್.ಕೆ.ಅಡ್ವಾಣಿ, ಪ್ರಮೋದ್‌ ಮಹಾಜನ್ ಅವರು 2004ರಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಅಭಿಯಾನ ನಡೆಸಿದ್ದರು. ಮೋದಿಯವರೂ ಅದನ್ನೇ ಈಗ ಮಾಡುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. 150 ಸೀಟುಗಳನ್ನು ಗೆಲ್ಲಲಾಗದ ಬಿಜೆಪಿ 400 ಸೀಟು ಗೆಲ್ಲುವ ಮಾತನಾಡುತ್ತಿದೆ’ ಎಂದರು.

‘ಶಿಕ್ಷಣಕ್ಕಾಗಿ ಪಡೆದ ಸಾಲವನ್ನು ಮರಳಿಸಲು ಶೇ 60ರಿಂದ ಶೇ 70ರಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಿಕ್ಷಣ ಸಾಲ ಮನ್ನಾದ ಭರವಸೆ ನೀಡಿದ್ದೇವೆ’ ಎಂದರು.

ಚೊಂಬು ಪ್ರದರ್ಶಿಸಿದ ಸುರ್ಜೇವಾಲ:

ಸುದ್ದಿಗೋಷ್ಠಿಯ ಕೊನೆಯಲ್ಲಿ ಖಾಲಿ ಚೊಂಬನ್ನು ಪ್ರದರ್ಶಿಸಿದ ಸುರ್ಜೇವಾಲ , ‘ಈ ಚೊಂಬಿನ ಮಾದರಿ ಅಪಾಯಕಾರಿ. 10 ವರ್ಷಗಳ ಬಳಿಕವೂ ದೇಶ ಪ್ರಧಾನಿಯಾದವರು, ಧಾರ್ಮಿಕ ವಿಭಜನೆ, ಅಲ್ಪಸಂಖ್ಯಾತರ ಶೋಷಣೆ, ದ್ವೇಷವನ್ನೇ ನೆಚ್ಚಿಕೊಂಡಿದ್ದಾರೆ ಎಂದರೆ ಮೋದಿ ಬಲೂನ್‌ ಪಂಕ್ಚರ್‌ ಆಗಿದೆ ಎಂದರ್ಥ. ಅವರ ದಿವಾಳಿತನಕ್ಕೆ ಇದು ಸಾಕ್ಷಿ’ ಎಂದರು.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT