ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀವ್ರ ಬರಗಾಲ | ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ: ಸಿಎಂ ಸಿದ್ದರಾಮಯ್ಯ

Published 5 ಮಾರ್ಚ್ 2024, 9:46 IST
Last Updated 5 ಮಾರ್ಚ್ 2024, 9:46 IST
ಅಕ್ಷರ ಗಾತ್ರ

ಬೆಂಗಳೂರು: 'ರಾಜ್ಯ ಈ ವರ್ಷ ತೀವ್ರ ಬರಗಾಲ ಎದುರಿಸುತ್ತಿದ್ದು, ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಎಷ್ಟೇ ದುಡ್ಡು ಖರ್ಚಾದರೂ ಕೊಡುವುದಾಗಿ ಹೇಳಿದ್ದೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು.

'ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬರ ನಿರ್ವಹಣಾ ಪ್ರಾಧಿಕಾರ ಇದೆ. ಆ ಪ್ರಾಧಿಕಾರ ಕೂಡಾ ಸಭೆಗಳನ್ನು ನಡೆಸುತ್ತದೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಏನಾದರೂ ಸಮಸ್ಯೆಗಳಿದ್ದರೆ ಬಗೆಹರಿಸಬೇಕು. 98 ತಾಲ್ಲೂಕುಗಳ 412 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 204 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತದೆ’ ಎಂದರು.

223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.‌ ಇತ್ತೀಚೆಗೆ ಮಾಧ್ಯಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಸುದ್ದಿಯಾಗುತ್ತಿದೆ. ನಾವು ಎಲ್ಲ ಕಾರ್ಯದರ್ಶಿಗಳು, ಡಿಸಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದೇವೆ. ಎಷ್ಟೇ ದುಡ್ಡು ಖರ್ಚಾದರೂ ಕೊಡುವುದಾಗಿ ಹೇಳಿದ್ದೇವೆ ಎಂದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹854 ಕೋಟಿ ಇದೆ. ಪ್ರತಿ ತಾಲ್ಲೂಕಿನಲ್ಲೂ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು. ಇಲ್ಲಿಯವರೆಗೆ ಟಾಸ್ಕ್ ಫೋರ್ಸ್ 349 ಸಭೆಗಳನ್ನು ನಡೆಸಿವೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು ರೈತರಿಗೆ ಪರಿಹಾರ ನೀಡಿಲ್ಲ ಎಂದು ಟೀಕೆ ಮಾಡುತ್ತಿವೆ. ಸರ್ಕಾರ 33.25 ಲಕ್ಷ ರೈತರಿಗೆ ₹631 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ಮೇವಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದರೂ ₹40 ಕೋಟಿ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಹಣವನ್ನು ಕೊಡುತ್ತಿದ್ದೇವೆ. ಪ್ರತಿ ತಿಂಗಳಿಗೆ ₹5 ಸಾವಿರ ಕುಟುಂಬಕ್ಕೆ ಸಿಗುತ್ತಿದೆ. ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಇದರ ಅನುಕೂಲವಾಗುತ್ತಿದೆ ಎಂದೂ ಹೇಳಿದರು.

ಬೆಂಗಳೂರಿನಲ್ಲಿ ಬಿಬಿಎಂಪಿ 120 ಟ್ಯಾಂಕರ್‌ಗಳು ಮತ್ತು ಜಲಮಂಡಳಿ 232 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಸರ್ಕಾರದ ಬೋರ್‌ವೆಲ್‌ಗಳನ್ನು ಇನ್ನಷ್ಟು ಕೊರೆಸುವುದು, ಪೈಪ್ ಲೈನ್ ಮಾಡುವುದು. ಖಾಸಗಿ ಬೋರ್‌ವೆಲ್‌ಗಳ ಜೊತೆ ಒಪ್ಪಂದ ಮಾಡಿಕೊಂಡು ನೀರು ಪೂರೈಕೆ. ಹೊಸ ಬೋರ್‌ವೆಲ್‌ಗಳನ್ನ ತೋಡಲು ಸಿಇಒ, ಡಿಸಿಗಳಿಗೆ ಅಧಿಕಾರ ನೀಡಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ₹140 ಕೋಟಿ ಜೊತೆಗೆ ₹20 ಕೋಟಿ ಬಿಡುಗಡೆ ಮಾಡಲಾಗಿದೆ. ಅನಿವಾರ್ಯವಾದಾಗ ಮಾತ್ರ ಬೋರ್‌ವೆಲ್‌ಗಳನ್ನ ಕೊರೆಸಬೇಕಾಗುತ್ತದೆ ಎಂದರು.

'ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ನೂರು ದಿನ ಉದ್ಯೋಗ ನೀಡಬೇಕು. ಬರಗಾಲ ಬಂದಾಗ 150 ದಿನ ಉದ್ಯೋಗ ಕೊಡಲೇಬೇಕು. ನಾಲ್ಕು ತಿಂಗಳಾಯ್ತು ಕೇಂದ್ರಕ್ಕೆ ಪತ್ರ ಬರೆದು. ಇದುವರೆಗೂ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.‌ ಕಂದಾಯ ಸಚಿವರು ದೆಹಲಿಗೆ ತೆರಳಿ ಮನವಿ ಮಾಡಿದ್ದರು.‌ ಕೇಂದ್ರ ಸರ್ಕಾರ ಸ್ಪಂದಿಸಲೇ ಇಲ್ಲ. ಕೇಳಿದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ, ಏನು ಮಾಡುವುದು ಎಂದರು.

ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT