ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರಿಗೆ ಸಕಾಲಕ್ಕೆ ಸಿಗದ ವೇತನ

ಮಧ್ಯಂತರ ಪರಿಹಾರ, ಖಜಾನೆ–2 ಸಮಸ್ಯೆ, ಹಲವು ಹಂತಗಳು ಸೃಷ್ಟಿಸಿದ ಸಮಸ್ಯೆ
Published 3 ಆಗಸ್ಟ್ 2023, 0:27 IST
Last Updated 3 ಆಗಸ್ಟ್ 2023, 0:27 IST
ಅಕ್ಷರ ಗಾತ್ರ

ಬೆಂಗಳೂರು: ತ್ರೈಮಾಸಿಕ ವೇತನಾನು ದಾನ ಬಿಡುಗಡೆ ವಿಳಂಬ, ಅನುದಾನ ಕೊರತೆಯಿಂದಾಗಿ ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಎರಡು ತಿಂಗಳಿ ನಿಂದ ವೇತನವಾಗಿಲ್ಲ. ಗ್ರಾಮೀಣ ಭಾಗದ ಬಹುತೇಕ ನೌಕರರಿಗೆ ಏಪ್ರಿಲ್‌ ನಂತರ ನಿಗದಿತ ಸಮಯಕ್ಕೆ ವೇತನ ಸಿಕ್ಕಿಲ್ಲ.

ಬಜೆಟ್‌ನಲ್ಲಿ ಆಯಾ ವರ್ಷದ ವೇತನಾನುದಾನ ನಿಗದಿ ಮಾಡಲಾಗು ತ್ತದೆ. ನಂತರ ಹಣಕಾಸು ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಬೇಡಿಕೆ ಯಷ್ಟು ಅನುದಾನ ಬಿಡುಗಡೆ ಮಾಡು ತ್ತದೆ. 2023–24ನೇ ಹಣಕಾಸು ವರ್ಷದಲ್ಲಿ ವೇತನಕ್ಕಾಗಿಯೇ ₹ 68 ಸಾವಿರ ಕೋಟಿ ನಿಗದಿ ಮಾಡಲಾಗಿತ್ತು. ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕ ₹ 17 ಸಾವಿರ ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿದ ಕಾರಣ ಮೊದಲ
ತ್ರೈಮಾಸಿಕದಲ್ಲಿ ವೇತನಕ್ಕಾಗಿ ಹೆಚ್ಚುವರಿ ₹ 2,600 ಕೋಟಿಯಷ್ಟು ಅನುದಾನ ನೀಡಬೇಕಿತ್ತು.

ಇದರಿಂದ ಸಮರ್ಪಕ ವೇತನಕ್ಕೆ ಅನುದಾನದ ಕೊರತೆಯಾಗಿ ಹಲವು ಕಚೇರಿಗಳ ನೌಕರರಿಗೆ ವೇತನ ನೀಡಿಕೆಯಲ್ಲಿ ವ್ಯತ್ಯಯವಾಗಿದೆ.

ಎರಡನೇ ತ್ರೈಮಾಸಿಕವೂ ವಿಳಂಬ: ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳ ವೇತನಕ್ಕೆ ಅಗತ್ಯವಾದ ಅನು ದಾನವನ್ನು ಪ್ರತಿ ವರ್ಷ ಜೂನ್‌ 15ರ ಒಳಗೆ ಬಿಡುಗಡೆ ಮಾಡಲಾಗುತ್ತದೆ. 

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಹೊಸ ಬಜೆಟ್‌ ಮಂಡಿಸಿದ್ದು, ಎರಡನೇ ವೇತನಾನು ದಾನವನ್ನು ಒಂದೂವರೆ ತಿಂಗಳು ವಿಳಂಬವಾಗಿ ಅಂದರೆ, ಜುಲೈ 31ರಂದು ಬಿಡುಗಡೆ ಮಾಡಿದೆ. ಇದರಿಂದ ಜೂನ್‌ ಹಾಗೂ ಜುಲೈ ತಿಂಗಳ ವೇತನ ಇನ್ನಷ್ಟು ವಿಳಂಬವಾಗಲಿದೆ.

ಬಗೆಹರಿಯದ ಗ್ರಾಮೀಣ ನೌಕರರ ಬವಣೆ: ಗ್ರಾಮೀಣ ಭಾಗದ ಬಹುತೇಕ ನೌಕರರಿಗೆ ಸಾಮಾನ್ಯ ಸನ್ನಿವೇಶಗಳಲ್ಲೂ ವಿಳಂಬವಾಗಿ ವೇತನವಾಗುತ್ತಿತ್ತು. ಈ ಬಾರಿ ಎಲ್ಲ ಇಲಾಖೆ ಗಳಲ್ಲೂ ವಿಳಂಬವಾಗಿದ್ದು, ಬಹುತೇಕ ಇಲಾಖೆಗಳ ಗ್ರಾಮೀಣ ನೌಕರರಂತೂ ಎರಡು, ಮೂರು ತಿಂಗಳು ನಿತಂತರ ವೇತನವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ನೌಕರರು ದೂರಿದ್ದಾರೆ.

ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅನುಮೋದನೆ ನೀಡುತ್ತಾರೆ. ನಂತರ ನಗರ ಪ್ರದೇಶಗಳ ನೌಕರರಿಗೆ ಖಜಾನೆ–2 ವ್ಯವಸ್ಥೆ ಮೂಲಕ ವೇತನ ಪಾವತಿಯಾಗುತ್ತದೆ. ಆದರೆ, ಗ್ರಾಮೀಣ ನೌಕರರಿಗೆ ವೇತನ ಪಾವತಿ ಹಲವು ಹಂತಗಳನ್ನು ದಾಟುತ್ತದೆ. ಇಲಾಖೆಯ ಮುಖ್ಯಸ್ಥರ ಅನುಮೋದನೆಯ ನಂತರ ಜಿಲ್ಲಾ ಪಂಚಾಯತಿ, ಅಲ್ಲಿಂದ ತಾಲ್ಲೂಕು ಪಂಚಾಯಿತಿ ತಲುಪುತ್ತದೆ. ಅಲ್ಲಿ ಮತ್ತೆ ಇಲಾಖಾವಾರು ಅನುಮೋದನೆ ಪಡೆದು ವೇತನ ನೀಡಲಾಗುತ್ತದೆ.

‘ಅರ್ಧ ಸಂಬಳ ಗ್ಯಾರಂಟಿ’

‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಫಲಶ್ರುತಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ಮಾತ್ರ ಗ್ಯಾರಂಟಿ. ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್‌ಗಳನ್ನು ಡಿಸೆಲ್‌ ಇಲ್ಲದೇ ನಿಲ್ಲಿಸಬೇಕಾಗಬಹುದು. ಸಾರಿಗೆ ಸಂಸ್ಥೆಗಳ ನೌಕರರು ಸಂಬಳ ಇಲ್ಲದೆ ದುಡಿಯಬೇಕಾಗಬಹುದು. ಕೆಟ್ಟು ಹೋದ ಬಸ್‌ಗಳು ರಸ್ತೆಗಳಲ್ಲೇ ನಿಲ್ಲುವ ದಿನಗಳೂ ದೂರವಿಲ್ಲ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ದೂರಿದ್ದಾರೆ.

ಈಡೇರದ ಜಿಲ್ಲಾವಾರು ವೇತನ ಬೇಡಿಕೆ

ಖಜಾನೆ–2 ಜಾರಿಗೆ ಬಂದ ನಂತರ ನೌಕರರಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಅನುದಾನವನ್ನು ಇಲಾಖಾವಾರು ಪರಿಗಣಿಸಲಾಗುತ್ತದೆ. ಇಲಾಖೆಗೆ ನಿಗದಿಯಾದ ಅನುದಾನವನ್ನಷ್ಟೆ ಆ ಇಲಾಖೆಯ ನೌಕರರು ಪಡೆಯಬೇಕಿದೆ. ಇಲಾಖೆಯ ಯಾವ ಕಚೇರಿಯ ಸಿಬ್ಬಂದಿ ಮೊದಲು ವೇತನದ ಪಟ್ಟಿ ಸಿದ್ಧಪಡಿಸಿ, ಖಜಾನೆಗೆ ಸಲ್ಲಿಸುತ್ತಾರೋ ಅವರಿಗೆ ವೇತನವಾಗುತ್ತದೆ. ವಿಳಂಬ ಮಾಡಿದರೆ ಆ ತಿಂಗಳ ವೇತನ ಸಿಗುವುದಿಲ್ಲ. ಉದಾಹರಣೆಗೆ ಒಂದು ಕಚೇರಿಯ ಸಿಬ್ಬಂದಿ ₹ 10 ಲಕ್ಷವಿದ್ದರೆ, ಅಲ್ಲಿನ ಕೆಲ ನೌಕರರು ₹ 1 ಲಕ್ಷ  ಹಿಂಬಾಕಿ ವೇತನವನ್ನು ಹೆಚ್ಚುವರಿ ಪಡೆದರೂ, ಅನುದಾನದಲ್ಲಿ ವ್ಯತ್ಯಯವಾಗುತ್ತದೆ. ಹಾಗಾಗಿ, ಅದೇ ಇಲಾಖೆಯ ಇತರೆ ಜಿಲ್ಲೆಗಳ ಉಳಿದ ಸಿಬ್ಬಂದಿಗೆ ಆ ತಿಂಗಳ ವೇತನ ದೊರೆಯುವುದಿಲ್ಲ. ಅವರು ಮುಂದಿನ ಅನುದಾನ ಬಿಡುಗಡೆವರೆಗೂ ಕಾಯಬೇಕಾಗುತ್ತದೆ.  

ಮುಖ್ಯಸ್ಥರು ಬದಲಾದರೂ ವೇತನವಿಲ್ಲ

ಖಜಾನೆ–2 ಬಂದ ನಂತರ ತಂತ್ರಾಂಶ ಆಧಾರಿತ ವೇತನ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರತಿ ಹಂತದಲ್ಲೂ ವೇತನಕ್ಕೆ ಅನುಮೋದನೆ ನೀಡುವ ವಿಭಾಗಗಳ ಮುಖ್ಯಸ್ಥರ ಫೋಟೊ, ಡಿಜಿಟಲ್‌ ಸಹಿ ಒಳಗೊಂಡ ವೇತನ ಕೀ ಇರುತ್ತದೆ (ಡಿಎಸ್‌ ಕೀ). ಅವರು ವರ್ಗಾವಣೆಗೊಂಡರೆ ಅವರ ಸ್ಥಾನಕ್ಕೆ ಬರುವವರ ಡಿಜಿಟಲ್‌ ಸಹಿ, ಪೋಟೊ ಕೇಂದ್ರ ಕಚೇರಿಗೆ ಕಳುಹಿಸಬೇಕು. ಅಲ್ಲಿ ದೃಢೀಕರಣಗೊಂಡ ನಂತರ ವೇತನ ಪಾವತಿಗೆ ಅನುದೋದನೆ ನೀಡಬಹುದು. ಈ ಪ್ರಕ್ರಿಯೆಗೆ ಕನಿಷ್ಠ 20ರಿಂದ 25 ದಿನಗಳು ಬೇಕಾಗುತ್ತದೆ. ಪ್ರತಿ ಬಾರಿಯೂ ವರ್ಗಾವಣೆಗಳಾದಾಗ ವೇತನ ವಿಳಂಬವಾಗುತ್ತದೆ ಎನ್ನುವುದು ನೌಕರರ ದೂರು.

****

ಜಿಲ್ಲಾವಾರು ವೇತನ ಬಿಡುಗಡೆ ಕುರಿತು ಚಿಂತನೆ ನಡೆದಿದೆ. ಅದಕ್ಕಾಗಿ ಖಜಾನೆ–3 ರೂಪಿಸಲಾಗುತ್ತಿದೆ. ಖಜಾನೆ–2ರಲ್ಲಿರುವ ಎಲ್ಲ ನ್ಯೂನತೆಗಳನ್ನೂ ನಿವಾರಿಸಿ, ಪ್ರತಿ ತಿಂಗಳು ವೇತನ ಸಿಗುವಂತೆ ಮಾಡಲಾಗುವುದು.

–ಹೆಸರು ಹೇಳಲು ಇಚ್ಚಿಸದ ಅಧಿಕಾರಿ, ಆರ್ಥಿಕ ಇಲಾಖೆ. 

****

ಸಮರ್ಪಕ ಅನುದಾನ ಮೀಸಲಿಡದೆ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ನೀಡಿದ ಕಾರಣ ಅನುದಾನದ ಕೊರತೆಯಾಗಿ 5 ಸಾವಿರಕ್ಕೂ ಹೆಚ್ಚು ಉಪನ್ಯಾಸಕರಿಗೆ ಎರಡು ತಿಂಗಳ ವೇತನ ಸಿಕ್ಕಿಲ್ಲ.

–ರಾಜಪ್ಪ, ಪಿಯು ಉಪನ್ಯಾಸಕ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT