ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕಲಿ ಖಾತೆ: ₹5.7 ಕೋಟಿ ವಂಚಿಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಆರೋಪಿಗಳು

Published 10 ಜುಲೈ 2024, 23:11 IST
Last Updated 10 ಜುಲೈ 2024, 23:11 IST
ಅಕ್ಷರ ಗಾತ್ರ

ಬೆಂಗಳೂರು:  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಆರೋಪಿಗಳು, ಸರ್ಕಾರಿ ಕಾಮಗಾರಿಗಳ ನಿರ್ವಹಣೆ ನಡೆಸುತ್ತಿರುವ ಇಲ್ಲಿನ ‘ರಾಮ್‌ ಎಂಟರ್‌ಪ್ರೈಸಸ್‌ ಕಂಪನಿ’ ಹೆಸರಿನಲ್ಲಿ ನಕಲಿ ಖಾತೆ ತೆರೆದು ₹5.7 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿರುವುದನ್ನು ವಿಶೇಷ ತನಿಖಾ ದಳ (ಎಸ್ಐಟಿ) ಪತ್ತೆ ಮಾಡಿದೆ.

ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ₹89.62 ಕೋಟಿ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಪೊಲೀಸರೂ ಸಹ ಚುರುಕುಗೊಳಿಸಿದ್ದು, ಮಹತ್ವದ ಮಾಹಿತಿ ಕಲೆಹಾಕುತ್ತಿದ್ದಾರೆ. 

ಹೈದರಾಬಾದ್ ಹಾಗೂ ಬೆಂಗಳೂರಿನ ಆರಕ್ಕೂ ಹೆಚ್ಚು ಕಂಪನಿಗಳಿಗೆ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ.

‘ಬೆಂಗಳೂರಿನ ಮಾಗಡಿ ರಸ್ತೆಯ ಮಂಜುನಾಥ್‌ ನಗರದ ನಿವಾಸಿ ವಿಜಯ್‌ ಕೃಷ್ಣ ಅವರು 2017 ರಿಂದ ರಾಮ್ ಎಂಟರ್‌ಪ್ರೈಸಸ್‌ ನಡೆಸುತ್ತಿದ್ದು, ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಕೆನರಾ ಬ್ಯಾಂಕ್‌ನ ಶಾಖೆಯಲ್ಲಿ ಕಂಪನಿಯ ಖಾತೆಯಿದೆ. ಕಂಪನಿಯ ಹೆಸರು ಹಾಗೂ ವಿಳಾಸ ಬಳಸಿಕೊಂಡಿದ್ದ ಆರೋಪಿಗಳು, ಹೈದರಾಬಾದ್‌ನ ಬಂಜಾರ ಹಿಲ್ಸ್‌ ಫಸ್ಟ್ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿಯ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆದಿದ್ದರು. ಫಸ್ಟ್‌ ಫೈನಾನ್ಸ್‌  ಬ್ಯಾಂಕ್‌ನಿಂದ ಕಂಪನಿ ಖಾತೆಗೆ ತಪ್ಪಾಗಿ ₹5.7 ಕೋಟಿ ಜಮೆಯಾಗಿದೆ ಎಂದು ಹೇಳಿ ಹಣವನ್ನು ವಾಪಸ್ ಮರಳಿಸುವಂತೆ ಆರೋಪಿಗಳು ಸೂಚಿಸಿದ್ದರು. ಆ ಖಾತೆಯಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಎಸ್ಐಟಿ ಪೊಲೀಸರು ಹೇಳಿದರು.

‘ಹೈದರಾಬಾದ್‌ನ ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ, ಬಂಧಿತ ಆರೋಪಿ ಸತ್ಯನಾರಾಯಣ ಇಟಕಾರಿ ಅವರು 18 ನಕಲಿ ಖಾತೆಗಳನ್ನು ತೆರೆದಿದ್ದರು. ಆ ಪೈಕಿ ರಾಮ್‌ ಕಂಪನಿ ಹೆಸರಿನಲ್ಲೂ ಒಂದು ನಕಲಿ ಖಾತೆ ತೆರೆಯಲಾಗಿತ್ತು. ಯಾರದ್ದೋ ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ನೀಡಿ ನಕಲಿ ಖಾತೆ ತೆರೆದು ತಪ್ಪಾಗಿ ಹಣ ಸಂದಾಯ ಆಗಿದೆಯೆಂದು ಹೇಳಿ ವಾಪಸ್‌ ಪಡೆದುಕೊಳ್ಳುತ್ತಿದ್ದರು. ಹಣ ವಾಪಸ್‌ ನೀಡಲು ಕೆಲವರಿಗೆ ಕಮಿಷನ್‌ ಸಹ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘₹3.62 ಕೋಟಿ ಪಡೆದಿದ್ದ ಪದ್ಮನಾಭ’

‘ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣದಲ್ಲಿ ತಮ್ಮ ಪಾಲಿಗೆ ಬಂದಿದ್ದ ₹3.62 ಕೋಟಿಯನ್ನು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ.ಪದ್ಮನಾಭ್ ತಮ್ಮ ಪುತ್ರ ಧೀರಜ್‌ನ ಸ್ನೇಹಿತ ರೇವಂತ್‌ ಮನೆಯಲ್ಲಿ ಇಟ್ಟಿದ್ದರು. ಅದನ್ನು ನೆಲಮಂಗಲ ತಾಲ್ಲೂಕಿನ ಗೋವಿನಹಳ್ಳಿಯ ಗ್ರಾಮದ ಮನೆಯಲ್ಲಿ ಜಪ್ತಿ ಮಾಡಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಅಕ್ರಮದಿಂದ ಬಂದ ಹಣವನ್ನು ಪದ್ಮನಾಭ್‌, ವಿವಿಧ ಸ್ಥಳಗಳಲ್ಲಿ ಹಲವರಿಗೆ ಹಂಚಿಕೆ ಮಾಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ನಾಗೇಂದ್ರ, ದದ್ದಲ್‌ಗೆ ಮತ್ತೆ ನೋಟಿಸ್‌

ಎಸ್ಐಟಿ ವಿಚಾರಣೆಗೆ ಬುಧವಾರ ಗೈರಾಗಿದ್ದ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರಿಗೆ ಎಸ್ಐಟಿ ಮತ್ತೆ ನೋಟಿಸ್ ಜಾರಿ ಮಾಡಿದೆ.

ಇ.ಡಿ ದಾಳಿ ಕಾರಣದಿಂದ ಇಬ್ಬರೂ ವಿಚಾರಣೆಗೆ ಗೈರಾಗಿದ್ದರು. ಗುರುವಾರ ಬೆಳಿಗ್ಗೆ 11ಕ್ಕೆ ಸಿಐಡಿ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಬರುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT