ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,097 ಮಂದಿ ವಿರುದ್ಧ ಪ್ರಕರಣ l ಜಾತಿಪತ್ರ ನಕಲಿ: ಪ್ರಹಾರ

ವಿಚಾರಣೆ ಇಲ್ಲದೇ ವಜಾಕ್ಕೆ ಅವಕಾಶ
Last Updated 26 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಗಿಟ್ಟಿಸುವವರ ಸಂಖ್ಯೆಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಇದರ ವಿರುದ್ಧ ಗದಾ ಪ್ರಹಾರಕ್ಕೆ ರಾಜ್ಯ ಸರ್ಕಾರ ತಯಾರಿ ನಡೆಸಿದೆ.

ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಇಂತಹ ಪ್ರಕರಣಗಳಲ್ಲಿ ವಿಚಾರಣೆ ಇಲ್ಲದೇ ನೌಕರರನ್ನು ಸೇವೆಯಿಂದ ವಜಾ ಮಾಡಲು ಅವಕಾಶವಿದ್ದು, ಈ ‘ಅಸ್ತ್ರ’ವನ್ನು ಪ್ರಯೋಗಿಸಲು ಸರ್ಕಾರ ಸಿದ್ಧತೆ ನಡೆಸಿದೆ.

‘ನಕಲಿ ಜಾತಿ ಪ್ರಮಾಣಪತ್ರ ಪಡೆದವರು ಸೇವೆಯಿಂದ ನಿವೃತ್ತಿ ಹೊಂದಿದ್ದರೂ ಅವರನ್ನು ಬಿಡುವ ಪ್ರಶ್ನೆ ಇಲ್ಲ. ಅಂತಹ ಅಧಿಕಾರಿ ಅಥವಾ ನೌಕರರ ವಿರುದ್ಧ ವಿಚಾರಣೆ ಮುಂದುವರೆಯುತ್ತದೆ. ಆರೋಪ ಸಾಬೀತಾದರೆ ಅವರ ಸೇವಾವಧಿಯ ಸಂಬಳ ಮತ್ತು ನಿವೃತ್ತಿ ಬಳಿಕದ ಪಿಂಚಣಿಯನ್ನೂ ವಸೂಲು ಮಾಡಲಾಗುತ್ತದೆ. ನಕಲಿ ಪ್ರಮಾಣ ಪತ್ರವನ್ನು ಮಾಡಿಕೊಟ್ಟವರಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ’ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ರವೀಂದ್ರನಾಥ್.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣಗಳ ತನಿಖೆ ಕುರಿತಂತೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ‘1097 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. 165 ಪ್ರಕರಣಗಳಲ್ಲಿ ತಹಶೀಲ್ದಾರ್‌ ಮತ್ತು ಇತರ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ ಬರೆಯಲಾಗಿದೆ’ ಎಂದರು.

‘ನಕಲಿ ಜಾತಿ ಪ್ರಮಾಣ ಪತ್ರಪಡೆಯುವುದು ಮತ್ತು ಅದನ್ನುಮಾಡಿಕೊಡುವುದು ಸಂವಿಧಾನಬಾಹಿರ. ನಕಲಿ ಜಾತಿ ಪ್ರಮಾಣ ಪತ್ರದಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಯಾರೇ ದೂರು ಕೊಟ್ಟರೂ, ಇಲಾಖೆಯು ನಮಗೆ ಅದರ ಒಂದು ಪ್ರತಿಯನ್ನು ಕಳುಹಿಸುತ್ತದೆ. ಅದರ ಆಧಾರದ ಮೇಲೆ ನಾವು ತನಿಖೆಯನ್ನು ನಡೆಸುತ್ತೇವೆ’ ಎಂದರು.

‘ವಿಶ್ವನಾಥ್‌ ಪಿಳ್ಳೈ ಪ್ರಕರಣದಲ್ಲಿಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ನೀಡಿ ನೌಕರಿ ಪಡೆದಿದ್ದರೆ, ವಿಚಾರಣೆ ಇಲ್ಲದೇ ವಜಾ ಮಾಡಬೇಕು. ಇತರ ಯಾವುದೇ ಪ್ರಕರಣಗಳಲ್ಲಿ ವಜಾಗೆ ಮುನ್ನ ಅವರ ವಾದವನ್ನು ಆಲಿಸಲು ಅವಕಾಶ ಇರುತ್ತದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಕಲಿ ಜಾತಿ ಪ್ರಮಾಣಪತ್ರದ ವಿಚಾರದಲ್ಲಿ ನೇರವಾಗಿ ಶಿಕ್ಷೆಗೆ ಗುರಿಪಡಿಸಬಹುದು’ ಎಂದು ರವೀಂದ್ರನಾಥ್‌ ಹೇಳಿದರು.

ಜಾತಿ ಪ್ರಮಾಣಪತ್ರ ನೀಡುವಾಗ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರ ಜವಾಬ್ದಾರಿ ಹೆಚ್ಚು. ಯಾರೇ ಒಬ್ಬರು ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಸಾರ್ವಜನಿಕ ನೋಟಿಸ್‌ ನೀಡಿ ಅಹವಾಲು ಆಹ್ವಾನಿಸಬೇಕು. ಅರ್ಜಿ ಸಲ್ಲಿಸಿದಾಗ ನಿಜವಾಗಿಯೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರೇ ಎಂಬುದನ್ನು ಅಕ್ಕಪಕ್ಕದವರಲ್ಲಿ ವಿಚಾರಿಸಿ ಖಾತರಿ ಪಡಿಸಿಕೊಳ್ಳುವುದು ಕಡ್ಡಾಯ. ಇದರಲ್ಲಿ ಲೋಪವಾದರೆ ಸಂಬಂಧಿತ ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಹೇಳಿದರು.

ಬುಡ್ಗಾ ಜಂಗಮ, ಕಾಡು ಕುರುಬ, ಮಲೆಯರು ಹೆಸರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಪ್ರಮಾಣಪತ್ರವನ್ನು ಸೃಷ್ಟಿಸಿರುವುದು ಕಂಡು ಬಂದಿದೆ ಎಂದೂ ರವೀಂದ್ರನಾಥ್‌ ಅವರು ತಿಳಿಸಿದರು.

ಕೆಂಪಯ್ಯ ಮನೆಗೆ ನೋಟಿಸ್‌

ನಕಲಿ ಜಾತಿ ಪ್ರಮಾಣಪತ್ರದ ಆರೋಪದ ಕಾರಣ ವಿಚಾರಣೆಗೆ ಹಾಜರಾಗುವಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ ಎಂದು ರವೀಂದ್ರನಾಥ್‌ ಹೇಳಿದರು. ಕೆಂಪಯ್ಯ ಅವರಿಗೆ ವೈಯಕ್ತಿಕವಾಗಿ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದೆವು. ನೋಟಿಸ್‌ ಪಡೆದ ಅವರು ಸೋಮವಾರ ಹಾಜರಾಗುತ್ತೇನೆ ಎಂದು ಹೇಳಿಯೂ ಬರಲಿಲ್ಲ ಎಂದರು. ಕೆಂಪಯ್ಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಡು ಕುರುಬ ಜಾತಿಗೆ ಸೇರಿದವರು ಎಂಬ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕಡತ ಕಣ್ಮರೆಯಾಗಿದ್ದರಿಂದ ತನಿಖೆ ತಡವಾಗಿದೆ.

[object Object]
Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT