ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 25ರಂದು ಬಿಜೆಪಿಯಿಂದ ರೈತರ ದಿನ: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್

Last Updated 23 ಡಿಸೆಂಬರ್ 2020, 8:46 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿಯಿಂದ ಡಿ. 25 ರಂದು ದೇಶದಾದ್ಯಂತ ರೈತರ ದಿನ‌ ಆಚರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ರೈತ ದಿನಕ್ಕೆ ಚಾಲನೆ ನೀಡುವರು ಎಂದರು.

ಗ್ರಾಮ ಪಂಚಾಯಿತಿ, ತಾಲ್ಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರೈತ ದಿನ ಆಚರಿಸಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ 100, ತಾಲ್ಲೂಕು ಹಂತದಲ್ಲಿ 250 ಮತ್ತು ಜಿಲ್ಲಾ ಹಂತದಲ್ಲಿ 500 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುವುದು.‌ ಎಲ್ ಇಡಿ ಪರದೆ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೋದಿ ಅವರು ಇದೇ ವೇಳೆ ಕಿಸಾನ್ ಸಮ್ಮಾನ್ ನಿಧಿ ಯೋಡನೆಯಡಿ ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿ ಹಣವನ್ನು ಖಾತೆಗಳಿಗೆ ಜಮೆ ಮಾಡಲಿದೆ. ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡುವರು.

ಕೇಂದ್ರ ಸರ್ಕಾರ ರೈತರ ಪರವಾಗಿ ಯಾವ ಕಾರ್ಯಕ್ರಮ ಹಮ್ಮಿಕೊಂಡಿದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆಯೂ ಮೋದಿ ಅವರು ಮಾತನಾಡುವರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ದಿನಕ್ಕೆ ಚಾಲನೆ ನೀಡುವರು.

ರೈತರು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಈ ಪ್ರತಿಭಟನೆಗೆ ಎಡಪಂಥೀಯರು, ಕೆಲವು ಬುದ್ದಿಜೀವಿಗಳು ಮತ್ತು ರೈತ ಸಂಘದವರು ಮಾತ್ರ ಬೆಂಬಲ ನೀಡಿದ್ದಾರೆ. ರೈತರು ಈ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುತ್ತಿಲ್ಲ. ಅವುಗಳ ಪರವಾಗಿ ಇದ್ದಾರೆ. ಕಾನೂನಿನಲ್ಲಿ ರೈತ ವಿರೋಧಿ ಅಂಶಗಳು ಇಲ್ಲವೇ ಇಲ್ಲ ಎಂದು ಹೇಳಿದರು.

ಪರಿಷತ್ ನಲ್ಲಿ ಅಹಿತಕರ ಘಟನೆ ನಡೆಯಬಾರದಿತ್ತು. ಜೆಡಿಎಸ್‌ನವರು ಸಭಾಪತಿ ಅವರನ್ನು ಕೆಳಗಿಳಿಸಲು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಸಭಾಧ್ಯಕ್ಷ ಸ್ಥಾನದ ವಿಚಾರಕ್ಕೆ ಮಾತ್ರ ಜೆಡಿಎಸ್‌ನವರು ನಮಗೆ ಬೆಂಬಲ ಕೊಟ್ಟಿದ್ದಾರೆ. ಒಂದು ವೇಳೆ ಸಭಾಧ್ಯಕ್ಷರನ್ನು ಇಳಿಸಿದರೆ ಆ ಸ್ಥಾನ ಜೆಡಿಎಸ್‌ಗೆ ನೀಡಬೇಕೊ ಅಥವಾ ಬಿಜೆಪಿಯವರು ಸಭಾಧ್ಯಕ್ಷರಾಗಬೇಕೊ ಎನ್ನುವುದನ್ನು ನಮ್ಮ ರಾಜ್ಯ ವರಿಷ್ಠರು ನಿರ್ಧರಿಸುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT