ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಹೋರಾಟಕ್ಕೆ ಪಿಎಫ್‌ಐ ಹಣ, ತನಿಖೆಯಾಗಲಿ: ಸಿದ್ದರಾಮಯ್ಯ

Last Updated 28 ಜನವರಿ 2020, 4:33 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಗಳಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದಿಂದ (ಪಿಎಫ್‌ಐ) ಹಣ ಸಂದಾಯವಾಗಿದೆ ಎನ್ನುವ ವಿಷಯದ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ವಿಧಾನಸಭೆಯ ಪ್ರತಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಣ ಎಲ್ಲಿಂದ ಹಾಗೂ ಹೇಗೆ ಬಂತು ಎನ್ನುವುದರ ಬಗ್ಗೆ ತನಿಖೆ ನಡೆಯಬೇಕು. ಹೊರ ದೇಶಗಳಿಂದ ಅಕ್ರಮವಾಗಿ ಹಣ ಬಂದಿದ್ದರೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಬೇಕು’ ಎಂದರು.

ಯಡಿಯೂರಪ್ಪ ಒದ್ದಾಟ:ಬಿಜೆಪಿಯವರು ಅಧಿಕಾರಕ್ಕಾಗಿ ಹಣ ನೀಡಿ ಬೇರೆ ಪಕ್ಷಗಳ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆದುಕೊಂಡರು. ಸಚಿವ ಸ್ಥಾನ ಕೊಡುವುದಾಗಿ ಆಸೆ ತೋರಿಸಿ ಅದನ್ನು ಈಡೇರಿಸಲಾಗಿದೆ ಈಗ ಒದ್ದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಇರುವ ಪರಮಾಧಿಕಾರ. ಆದರೆ, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೆಂಬುದೇ ಇಲ್ಲ. ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಮುಖ್ಯಮಂತ್ರಿಗೆ ಅಧಿಕಾರವೇ ಇಲ್ಲದಂತಾಗಿದೆ. ಆದ್ದರಿಂದ ಯಡಿಯೂರಪ್ಪ ಈಗ ವಿಲಿವಿಲಿ ಒದ್ದಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರದಿಂದ ಹಣ ಬಾರದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇ ಪ್ರಶ್ನೆ ಕೇಳಿದರೂ, ಬಜೆಟ್‌ ಬಳಿಕ ನೋಡಿ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರ ಬಳಿ ಎನಾದರೂ ಮಂತ್ರ ದಂಡವಿದೆಯೋ ಎಂದು ಪ್ರಶ್ನಿಸಿದರು.

ಸಿಎಎ ವಿಷಯದಲ್ಲಿ ಕಾಂಗ್ರೆಸ್‌ ನಿಲುವು ಸ್ಪಷ್ಟ. ಇದು ಮುಸ್ಲಿಮರಷ್ಟೇ ಅಲ್ಲ; ದಲಿತರು, ಆದಿವಾಸಿಗಳು, ಬುಡಕಟ್ಟು ಜನ, ಅಲೆಮಾರಿಗಳ ಜನರ ವಿರೋಧಿಯಾಗಿದೆ ಎಂದರು.

ಮತ್ತೆ ಕರಿ ಕೋರ್ಟ್‌ ಧರಿಸಲ್ಲ:ಮುಖ್ಯಮಂತ್ರಿಯಾಗಿದ್ದಾಗ ಹಿಂತಿರುಗಿಸಿದ್ದ ರಾಜ್ಯ ವಕೀಲರ ಪರಿಷತ್‌ನ ಪರವಾನಗಿ ವಾಪಸ್‌ ನೀಡುವಂತೆ ಪತ್ರ ಬರೆದಿದ್ದೇನೆ. ಮತ್ತೆ ವಕೀಲಿಕಿ ವೃತ್ತಿ ಆರಂಭಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘1983ರಲ್ಲಿ ಕೊನೆಯ ಬಾರಿಗೆ ಕರಿ ಕೋಟ್ ಧರಿಸಿದ್ದೆ. ಈಗ ಮತ್ತೆ ಆ ಕೆಲಸ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT