ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಪ್ರಾಧ್ಯಾಪಕರ ಸ್ಥಳ ನಿಯುಕ್ತಿಗೆ ಹಳಬರ ಎತ್ತಂಗಡಿ: ತಿಂಗಳಲ್ಲಿ 2 ಸಲ ವರ್ಗಾವಣೆ

Published : 11 ಸೆಪ್ಟೆಂಬರ್ 2024, 19:47 IST
Last Updated : 11 ಸೆಪ್ಟೆಂಬರ್ 2024, 19:47 IST
ಫಾಲೋ ಮಾಡಿ
Comments

ಬೆಂಗಳೂರು: ಒಂದೇ ತಿಂಗಳಲ್ಲಿ ಎರಡು ಪ್ರತ್ಯೇಕ ವರ್ಗಾವಣೆ ನಡೆಸಲು ನಿರ್ಧರಿಸಿರುವ ಕಾಲೇಜು ಶಿಕ್ಷಣ ಇಲಾಖೆ ನಡೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರು ಆಕ್ಷೇಪಿಸಿದ್ದಾರೆ.

ಪ್ರತಿ ವರ್ಷದಂತೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸೆ. 17ರಿಂದ ಸ್ಥಳ ಆಯ್ಕೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆ ಮುಗಿದ ತಕ್ಷಣ ಇದೇ ತಿಂಗಳ ಕೊನೆಗೆ ವಿಶೇಷ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಆಯ್ಕೆಯಾಗಿರುವ 1,242 ಸಹಾಯಕ ಪ್ರಾಧ್ಯಾಪಕರನ್ನು ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಥಳ ನಿಯುಕ್ತಿ ಮಾಡಲು, ಈಗಾಗಲೇ ಆ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರನ್ನು ವಿಶೇಷ ವರ್ಗಾವಣೆ ಮೂಲಕ ಎತ್ತಂಗಡಿ ಮಾಡಲಾಗುತ್ತಿದೆ.

ವಲಯ ಆಯ್ಕೆಯಲ್ಲೂ ತಾರತಮ್ಯ: ಬೆಂಗಳೂರು ನಗರವನ್ನು ‘ಎ’ ಕೇಂದ್ರವಾಗಿ, ಮಹಾನಗರ ಪಾಲಿಕೆ ಇರುವ ನಗರಗಳನ್ನು ‘ಬಿ’, ಜಿಲ್ಲಾ ಕೇಂದ್ರಗಳನ್ನು ‘ಸಿ’, ತಾಲ್ಲೂಕು ಕೇಂದ್ರಗಳನ್ನು ‘ಡಿ’ ಹಾಗೂ ಹೋಬಳಿ ಮಟ್ಟದಲ್ಲಿರುವ ಪದವಿ ಕಾಲೇಜುಗಳನ್ನು ‘ಇ’ ವಲಯಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯ ವರ್ಗಾವಣೆಯಲ್ಲಿ ಒಂದು ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರು ಆ ವಲಯ ಬಿಟ್ಟು ಇತರೆ ಯಾವುದೇ ವಲಯಗಳಲ್ಲಿನ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ವಿಶೇಷ ವರ್ಗಾವಣೆಯಲ್ಲಿ ಹೋಬಳಿಮಟ್ಟದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವವರು ತಾಲ್ಲೂಕು ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವವರು ಜಿಲ್ಲಾ ಕೇಂದ್ರದ ಕಾಲೇಜುಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. 

‘ಸಾಮಾನ್ಯ ವರ್ಗಾವಣೆ ಪಟ್ಟಿಯಲ್ಲಿ ಇರುವವರು  ‘ಎ’ ವಲಯದಿಂದ ‘ಸಿ’ವರೆಗಿನ ಬಹುತೇಕ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ನಂತರ ನಡೆಯುವ ವಿಶೇಷ ವರ್ಗಾವಣೆ ವೇಳೆಗೆ ಸಮೀಪದ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಲಭ್ಯತೆ ಕಡಿಮೆ ಇರುತ್ತವೆ. ಒಂದು ತಾಲ್ಲೂಕು ವ್ಯಾಪ್ತಿಯ ಹೋಬಳಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆ ಜಿಲ್ಲೆಯ ಯಾವುದೇ ತಾಲ್ಲೂಕು ಕೇಂದ್ರಗಳಲ್ಲಿ ಖಾಲಿ ಹುದ್ದೆ ಸಿಗದಿದ್ದರೆ ಬೇರೆ ಜಿಲ್ಲೆಗೆ ತೆರಳುವುದು ಅನಿವಾರ್ಯ. ಆ ಜಿಲ್ಲೆಯ ಜಿಲ್ಲಾ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇದ್ದರೂ, ಅವಕಾಶ ಇಲ್ಲ’ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕ ಅನಿಲ್‌. 

‘ಹೊಸದಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಕಡ್ಡಾಯಗೊಳಿಸಲು ಸರ್ಕಾರ ವಿಶೇಷ ವರ್ಗಾವಣೆಯ ನಿಯಮ ರೂಪಿಸಿದೆ. ನಾವು ಗ್ರಾಮೀಣ ಭಾಗದಲ್ಲೇ ಕೆಲಸ ಮಾಡಲು ಬಯಸಿದರೂ ಕಡ್ಡಾಯ ವರ್ಗಾವಣೆಗೆ ಒಳಗಾಗುತ್ತಿದ್ದೇವೆ. ಯಾರು ಕೆಲಸ ಮಾಡಿದರೇನು? ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ಅಷ್ಟೇ ಎನ್ನುವುದು ನಮ್ಮ ಆಶಯ’ ಎಂದು ಅವರು ವಿವರಿಸಿದರು.

ವಿಶೇಷ ವರ್ಗಾವಣೆಯ ಕರಡು ಅಧಿಸೂಚನೆ ಪ್ರಕಟವಾದ ಮೂರೇ ದಿನದಲ್ಲಿ 500ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಎಲ್ಲಾ ವಲಯದ ಕಾಲೇಜುಗಳನ್ನೂ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳವುದೂ ಸೇರಿದಂತೆ ವಿಶೇಷ ವರ್ಗಾವಣೆಯ ನಿಯಮಗಳಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಿ, ನಂತರ ಪ್ರಕ್ರಿಯೆ ಆರಂಭಿಸುವಂತೆ ‘ಇ’ ವಲಯದಲ್ಲಿ ಕೆಲಸ ಮಾಡುತ್ತಿರುವ ಬೋಧಕ ಸಿಬ್ಬಂದಿ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. 

ಎರಡೂವರೆ ವರ್ಷ; ಆರು ವರ್ಗಾವಣೆ
ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ಕ್ರೀಡಾ ನಿರ್ದೇಶಕರ ವರ್ಗಾವಣೆಗೆ ಸರ್ಕಾರ 2021ರವರೆಗೂ ಸೂಕ್ತ ನಿಯಮಗಳನ್ನೇ ರೂಪಿಸಿರಲಿಲ್ಲ. 2009ರ ನಂತರ ವರ್ಗಾವಣಾ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದ್ದವು. 2021ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆಗೆ ನಿಯಮಗಳನ್ನು ರೂಪಿಸಿ, ಜಾರಿಗೊಳಿಸಿತ್ತು. ಆದರೆ, ಆ ವರ್ಷ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರಲಿಲ್ಲ. 2022ರ ಏಪ್ರಿಲ್‌ನಲ್ಲಿ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ಅಲ್ಲಿಂದ ಈ ಬಾರಿಯ ಎರಡು ವರ್ಗಾವಣೆಗಳೂ ಸೇರಿ ಎರಡೂವರೆ ವರ್ಷಗಳಲ್ಲಿ ಒಟ್ಟು ಆರು ವರ್ಗಾವಣೆಗಳನ್ನು ನಡೆಸಿದ ಶ್ರೇಯ ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲುತ್ತದೆ.
ಹೊಸಬರಿಗೆ ಗ್ರಾಮೀಣ ಸೇವೆ ಕಡ್ಡಾಯ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಅಂಶಗಳಿಗೆ ಒತ್ತು ನೀಡಿ ವಿಶೇಷ ವರ್ಗಾವಣೆ ನಡೆಸಲಾಗುತ್ತಿದೆ. ನಾಲ್ಕು ವರ್ಷ ಪೂರೈಸದವರನ್ನು ವರ್ಗಾವಣೆ ಪಟ್ಟಿಯಿಂದ ಕೈಬಿಡಲಾಗಿದೆ.
–ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT