ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಕೆಲವೆಡೆ ರಭಸದ ಮಳೆ: ವಿವಿಧೆಡೆ ಐವರ ಸಾವು

Published : 30 ಸೆಪ್ಟೆಂಬರ್ 2024, 23:32 IST
Last Updated : 30 ಸೆಪ್ಟೆಂಬರ್ 2024, 23:32 IST
ಫಾಲೋ ಮಾಡಿ
Comments

ನರಗುಂದ (ಗದಗ ಜಿಲ್ಲೆ): ರಾಜ್ಯದ ಕೆಲವೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಮಳೆಯಾಗಿದೆ. ಸಿಡಿಲು ಬಡಿದು ಒಬ್ಬರು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹುಣಸಿಕಟ್ಟಿ–ನರಗುಂದ ಮಧ್ಯದ ಒಡ್ಡಿನ ಹಳ್ಳವು ಭಾನುವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯುವಾಗಲೇ ಬೈಕ್‌ನಲ್ಲಿ ತೆರಳಲು ಪ್ರಯತ್ನಿಸಿದ ಹುಣಸಿ ಕಟ್ಟಿಯ ಮಣಿಕಂಠ ಅಶೋಕ ಮಲ್ಲಾಪುರ (26) ಮತ್ತು ಶಿವಪ್ಪ ಅಶೋಕ ಅವರಾದಿ (25) ನೀರಿನಲ್ಲಿ ಕೊಚ್ಚಿ ಹೋಗಿ, ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಇಬ್ಬರ ಶವ ಪತ್ತೆ ಮಾಡಿದರು.

ಬಾಲಕನ ಶವ ಪತ್ತೆ: ಗದಗದ ಕೊನೇರಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದ ಗಂಗಾಪುರ ಪೇಟೆಯ ಪ್ರಥಮ್‌ ಅಶೋಕ ಮಾಡಳ್ಳಿ (9) ಎಂಬ ಬಾಲಕನ ಶವವನ್ನು ಸೋಮವಾರ ಬೆಳಿಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಪತ್ತೆ ಮಾಡಿದರು. ಸ್ನೇಹಿತರೊಂದಿಗೆ ಆಟ ಆಡುವಾಗ, ಪ್ರಥಮ್‌ ಕಾಲು ಜಾರಿ ಬಿದ್ದಿದ್ದ. ಹೊಂಡದಲ್ಲಿ ಗಣಪತಿ ಮೂರ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜಿಸಿದ್ದರಿಂದ ಕೆಸರು ತುಂಬಿತ್ತು. ಸಂಜೆಯ ಮಳೆ ಆಗಿದ್ದ ರಿಂದ ಕಾರ್ಯಾಚರಣೆ ನಡೆಸಲು ಸಾಧ್ಯ ವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕುರಿಗಾಹಿ ಸಾವು: ಲಿಂಗಸುಗೂರು (ರಾಯಚೂರು): ತಾಲ್ಲೂಕಿನ ನಡುಗಡ್ಡೆ ಗ್ರಾಮ ಹಂಚಿನಾಳದಲ್ಲಿ ಸೋಮವಾರ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಮೃತಪಟ್ಟಿದ್ದಾರೆ.

ಕುರಿ ಕಾಯಲು ತೆರಳಿದ್ದ ದುರುಗಪ್ಪ ಹನುಮಪ್ಪ ಕರಡಕಲ್ಲ (38) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೊಚ್ಚಿ ಹೋದ ವ್ಯಕ್ತಿ ಸಾವು: ಅಮೀನಗಡ (ಬಾಗಲಕೋಟೆ): ಬಸವನಾಳ ಗ್ರಾಮದ ಬಳಿ ರಭಸದಿಂದ ಹರಿಯುತ್ತಿರುವ ಹಳ್ಳದಲ್ಲಿ ಅಂಬಲಿಕೊಪ್ಪ ಗ್ರಾಮದ ಮಲ್ಲಪ್ಪ ಶಿವಪ್ಪ ಬಸವನಾಳ (38) ಎಂಬುವರು ಭಾನುವಾರ ರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿ, ಮೃತಪಟ್ಟಿದ್ದಾರೆ. ಅವರು ಬೈಕ್‌ನಲ್ಲಿ ಹಳ್ಳ ದಾಟುವ ವೇಳೆ ಕೊಚ್ಚಿ ಹೋಗಿದ್ದಾರೆ ಎಂದು ಅಮೀನಗಡ ಠಾಣೆ ಪೊಲೀಸರು ತಿಳಿಸಿದ್ದಾರೆ.

ದಾವಣಗೆರೆ ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ನಸುಕಿನಲ್ಲಿ ಭಾರಿ ಮಳೆ ಸುರಿದಿದ್ದು, ಹಳ್ಳ– ಕೊಳ್ಳಗಳು ತುಂಬಿ ಹರಿದಿವೆ. ಜಲಮೂಲಗಳಿಗೆ ಜೀವಕಳೆ ಬಂದಿದೆ.

ನಸುಕಿನ 3.15ಕ್ಕೆ ಆರಂಭವಾದ ಮಳೆ ಒಂದೂವರೆ ಗಂಟೆ ಬಿರುಸಿನಿಂದ ಸುರಿಯಿತು. ನಗರದ ಆವರಗೆರೆಯ ಸರ್ಕಾರಿ ಶಾಲೆಯ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ದಾವಣಗೆರೆ ಹಾಗೂ ಜಗಳೂರಿನಲ್ಲಿ 3 ಸೆಂ.ಮೀ ಮಳೆ ದಾಖಲಾಗಿದೆ.

ಗಾಳಿ,ಮಳೆಗೆ ನೆಲ ಕಚ್ಚಿದ ಬಾಳೆ

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನೆಲ್ಲೆಡೆ ಸುರಿದ ಗಾಳಿ, ಮಳೆಗೆ ದಾಸನಪುರ ಗ್ರಾಮದ ದೊರೆಸ್ವಾಮಿ ಅವರ ಜಮೀನಿನಲ್ಲಿ 2 ಸಾವಿರ ಬಾಳೆ ಗಿಡ ನೆಲ ಕಚ್ಚಿದೆ. ‘ಫಲವತ್ತಾದ ಬೆಳೆ ಕೈ ಸೇರುವಷ್ಟರಲ್ಲಿ ಮಳೆ ಬಿದ್ದು ಸಂಪೂರ್ಣ ತೋಟ ನಾಶವಾಗಿ, ಅಂದಾಜು ₹ 6 ಲಕ್ಷ ನಷ್ಟವಾಗಿದೆ’ ಎಂದು ದೊರೆಸ್ವಾಮಿ ಅಲವತ್ತುಕೊಂಡರು. ತಿ.ನರಸೀಪುರ ತಾಲ್ಲೂಕಿನ ಬನ್ನೂರು, ಅತ್ತಹಳ್ಳಿಯಲ್ಲೂ ಗದ್ದೆಗೆ ಮಳೆ ನೀರು ನುಗ್ಗಿ ಭತ್ತದ ಬೆಳೆ ಜಲಾವೃತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT