ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಸ್ಥಿರಾಸ್ತಿ ದರ ಪರಿಷ್ಕರಣೆ ಆರಂಭ

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ಕರಡು ಪಟ್ಟಿ ಪ್ರಕಟ
Published 8 ಸೆಪ್ಟೆಂಬರ್ 2023, 15:25 IST
Last Updated 8 ಸೆಪ್ಟೆಂಬರ್ 2023, 15:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳ ಪರಿಷ್ಕರಣೆ ಪ್ರಕ್ರಿಯೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆರಂಭಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳ ಕರಡು ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.

ಎರಡು ಹಂತಗಳಲ್ಲಿ ಸ್ಥಿರಾಸ್ತಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯ ರಾಜಧಾನಿ ಮತ್ತು ಸಮೀಪದ ಎರಡು ಜಿಲ್ಲೆಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಕರಡು ದರ ಪಟ್ಟಿ ಪ್ರಕಟವಾಗಿದೆ. ಎರಡನೇ ಹಂತದಲ್ಲಿ ಅಕ್ಟೋಬರ್‌ 1ರಂದು ಉಳಿದ 28 ಜಿಲ್ಲೆಗಳ ಕರಡು ದರ ಪಟ್ಟಿಗಳನ್ನು ಪ್ರಕಟಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಬಾರಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಸರಾಸರಿ ಹೆಚ್ಚಳ ಮಾಡಿಲ್ಲ. ಹೊಸದಾಗಿ ಸಿದ್ಧಪಡಿಸಿರುವ ಮಾನದಂಡಗಳ ಆಧಾರದಲ್ಲಿ ಶೇಕಡ 5ರಿಂದ ಶೇಕಡ 70ರವರೆಗೂ ಹೆಚ್ಚಳ ಮಾಡುವ ಪ್ರಸ್ತಾವ ಕರಡು ಪಟ್ಟಿಯಲ್ಲಿದೆ ಎಂದು ಮೂಲಗಳು ಹೇಳಿವೆ.

ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇರುವುದನ್ನು ಗುರುತಿಸಿ ವ್ಯತ್ಯಾಸ ಸರಿಪಡಿಸುವ ಪ್ರಯತ್ನ ಮಾಡಲಾಗಿದೆ. ಕೆಲವೆಡೆ ನೈಜ ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರಗಳ ನಡುವೆ ಭಾರಿ ಅಂತರ ಇದೆ. ಅಂತಹ ಪ್ರದೇಶಗಳಲ್ಲೂ ಅಂತರ ತಗ್ಗಿಸುವಂತೆ ದರ ನಿಗದಿ ಮಾಡಲಾಗಿದೆ. ಈ ಬಾರಿ ಹೆಚ್ಚು ವೈಜ್ಞಾನಿಕವಾಗಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯ ಪ್ರಕ್ರಿಯೆ ನಡೆದಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೊ ರೈಲು ಮಾರ್ಗ ಹಾದು ಹೋಗಿರುವ ಪ್ರದೇಶಗಳು, ಮೆಟ್ರೊ ರೈಲು ನಿಲ್ದಾಣಗಳಿಗೆ ಸಮೀಪದಲ್ಲಿರುವ ಪ್ರದೇಶಗಳು, ಉದ್ದೇಶಿತ ಹೊಸ ಮೆಟ್ರೊ ರೈಲು ಮಾರ್ಗಗಳ ಪ್ರದೇಶಗಳು, ಬೃಹತ್‌ ರಸ್ತೆಗಳು ನಿರ್ಮಾಣವಾಗಿರುವ ಪ್ರದೇಶಗಳು, ಹೊರ ವರ್ತುಲ ರಸ್ತೆ, ಉಪನಗರ ವರ್ತುಲ ರಸ್ತೆಯ ಸಮೀಪದ ಪ್ರದೇಶಗಳು, ಹೊಸದಾಗಿ ಬೃಹತ್‌ ಮಾಲ್‌ಗಳು, ವಾಣಿಜ್ಯ ಸಮುಚ್ಛಯಗಳು ನಿರ್ಮಾಣವಾಗಿರುವ ಪ್ರದೇಶಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಕೆಲವು ರಸ್ತೆಗಳು ಮಾರ್ಗಸೂಚಿ ದರ ಪಟ್ಟಿಯಲ್ಲಿ ನಮೂದಾಗಿರಲಿಲ್ಲ. ಅಂತಹ ಪ್ರದೇಶಗಳಲ್ಲಿ ಕಡಿಮೆ ದರ ಇತ್ತು. ಅವುಗಳನ್ನು ಪತ್ತೆಮಾಡಿ ಪಟ್ಟಿಯಲ್ಲಿ ನಮೂದಿಸಿ, ಪಕ್ಕದ ಪ್ರದೇಶಗಳಿಗೆ ಸಮನಾದ ಮಾರ್ಗಸೂಚಿ ದರ ನಿಗದಿಪಡಿಸಲಾಗಿದೆ.

ಬೆಂಗಳೂರು ನಗರದ ಹೊರ ವಲಯ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚೆನ್ನೈ– ಬೆಂಗಳೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ, ಬೃಹತ್‌ ಕೈಗಾರಿಕಾ ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಆಸ್ತಿಗಳ ಮಾರ್ಗಸೂಚಿ ದರವನ್ನು ಗಣನೀಯವಾಗಿ ಹೆಚ್ಚಿಸುವ ಪ್ರಸ್ತಾವ ಕರಡು ಪಟ್ಟಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT