ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕದ ನಡಿಗೆ ನಿಮ್ಮದೊಂದೇ ಅಲ್ಲ, ನಮ್ಮದೂ ನೋಡಿ ‘ಸ್ವಾಮಿ’

ಹಾವೇರಿ ತಾಲ್ಲೂಕಿನ ಹಾವಂಶಿ –ಶಾಕಾರ ಗ್ರಾಮಸ್ಥರ ಗೋಳು l ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿರುವ ಹಳ್ಳಿಗರು l ಅಧಿ
Last Updated 16 ಜುಲೈ 2018, 19:30 IST
ಅಕ್ಷರ ಗಾತ್ರ

ಶಿರಸಿ: ‘ಮಳೆನಾಡೆಂಬ’ ಮಲೆನಾಡಿನಲ್ಲಿ ಮುಂಗಾರು, ಸಂಭ್ರಮದ ಜತೆಗೆ ಸಂಕಟವನ್ನೂ ಹೊತ್ತು ತರುತ್ತದೆ. ಊರಿಗೆ ಅಡ್ಡಲಾಗಿ ಸೊಕ್ಕಿ ಹರಿಯುವ ಹಳ್ಳಗಳು ಜನರ ನಡುವಿನ ಸಂಪರ್ಕ ಕೊಂಡಿಯನ್ನು ಕಳಚುತ್ತವೆ. ನಿರಾತಂಕವಾಗಿ ಹಳ್ಳ ದಾಟಲು ಕಾಂಕ್ರೀಟ್ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿರುವ ಹಳ್ಳಿಗರು, ತಾವೇ ತಾತ್ಕಾಲಿಕ ಕಾಲುಸಂಕಗಳನ್ನು ನಿರ್ಮಿಸಿಕೊಂಡಿದ್ದಾರೆ.

ಅಡಿಕೆ ದಬ್ಬೆ, ಮರದ ತುಂಡುಗಳನ್ನು ಬಳಸಿ ಮಳೆಗಾಲದ ಮುನ್ನ ಕಟ್ಟುವ ಕಾಲು ಸಂಕದ ಮೇಲೆ, ಕೈಯಲ್ಲಿ ಜೀವ ಹಿಡಿದುಕೊಂಡು ಹೆಜ್ಜೆ ಹಾಕುವುದು ಶಾಲೆಗೆ ಹೋಗುವ ಮಕ್ಕಳ ದೈನಂದಿನ ಅನಿವಾರ್ಯವಾಗಿದೆ. ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಮತ್ತು ವಜ್ರಳ್ಳಿ ಗ್ರಾಮ ಪಂಚಾಯ್ತಿ ಗಡಿಯಲ್ಲಿರುವ ಕೀಚನಾಳ ಗ್ರಾಮಸ್ಥರು ಮಳೆಗಾಲ ಬಂತೆಂದರೆ, ಊರಿನ ಹಳ್ಳಕ್ಕೆ ಅಡಿಕೆ ದಬ್ಬೆಯ ಸಂಕ ಕಟ್ಟುತ್ತಾರೆ. ಈ ಸೇತುವೆ ಇಲ್ಲವೆಂದರೆ ಮಕ್ಕಳು ಮಳೆಗಾಲದ ನಾಲ್ಕು ತಿಂಗಳೂ ಶಾಲೆಗೆ ರಜೆ ಹಾಕಬೇಕು! ದಶಕದ ಹಿಂದೆ ನಿರ್ಮಾಣವಾಗಿದ್ದ ಶಾಶ್ವತ ಸೇತುವೆಯೊಂದು ಕಳಪೆ ಕಾಮಗಾರಿಯಿಂದಾಗಿ 2013ರಲ್ಲಿ ಕುಸಿದು ಬಿದ್ದಿದೆ. ಆಗಿನಿಂದ ಊರವರು ಮತ್ತೆ ಮೊದಲಿನ ಸಂಕಟವನ್ನೇ
ಅನುಭವಿಸುತ್ತಿದ್ದಾರೆ.

ಕಾಡಿನ ನಡುವಿನ ಜೊಯಿಡಾ ತಾಲ್ಲೂಕಿನಲ್ಲಿ ತಾತ್ಕಾಲಿಕ ಕಾಲುಸಂಕಗಳ ಸಂಖ್ಯೆಯನ್ನು ಲೆಕ್ಕ ಹಾಕುವುದು ತುಸು ಕಷ್ಟ. ದೇವಸ, ಅಜಗಾಂವ, ಶಿವಪುರ, ಬಾಮಣಿ, ಬೊಂಡೋಲಿ, ಕರಂಜೆ, ನಾರಗಾಳಿ ಮೊದಲಾದ ಹಳ್ಳಿಗಳಲ್ಲಿ ಮರದ ಕಾಲುಸಂಕಗಳೇ ಮಳೆಗಾಲದ ಸಂಪರ್ಕ ಮಾರ್ಗಗಳು.

ಸಿದ್ದಾಪುರ ತಾಲ್ಲೂಕಿನ ಮನಮನೆ ಸಮೀಪ ನಿಸರ್ಗ ನಿರ್ಮಿತ ಕಾಲುಸಂಕವಿದೆ. ವರ್ಷಂಪ್ರತಿ ಜನರು ಇದರ ಮೇಲೆಯೇ ಓಡಾಡುತ್ತಾರೆ. ಬೆಂಗಳೂರು– ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆರು ಅಡಿ ಅಗಲದ ಈ ಕಾಲುಸಂಕವು, ಹೊಳೆ ದಾಟುವವರಿಗೆ ಆಸರೆಯಾಗಿದೆ. ಆದರೆ, ನಿರ್ವಹಣೆಯ ಕೊರತೆಯಿಂದ ಅದು ಕೂಡ ಶಿಥಿಲಗೊಳ್ಳುತ್ತಿದೆ. ನಾಣಿಕಟ್ಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತಿಹಳ್ಳಿ, ಬೆಣ್ಣೆಕೇರಿ, ಇರಾಸೆ ಊರುಗಳ ಜನರಿಗೆ ಕಾಲುಸಂಕ ಕಟ್ಟಿಕೊಳ್ಳದಿದ್ದರೆ ಮಳೆಗಾಲದಲ್ಲಿ ತಾಲ್ಲೂಕು ಕೇಂದ್ರ ತಲುಪುವುದು ಕಷ್ಟ. ಇರಾಸೆ ಹಳ್ಳಕ್ಕೆ ಅಡ್ಡಲಾಗಿ ಅವರು ಒಣಕಟ್ಟಿಗೆಯ ಕಾಲುಸಂಕ ಕಟ್ಟಿಕೊಳ್ಳುತ್ತಾರೆ.

ಒಂದು ತುದಿಯಲ್ಲಿ ನಿಂತು ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯನ್ನು ನೋಡಿದರೆ, ಗುರುತಿಸಲಾಗದಷ್ಟು ಉದ್ದದ ಕಾಲುಸಂಕ ಬಾಳೂರಿನಲ್ಲಿದೆ. ಶಾಲೆಗೆ ಹೋಗುವ ಮಕ್ಕಳು, ಬೆಟ್ಟಕ್ಕೆ ಹೋಗಿ ಸೊಪ್ಪಿನ ಹೊರೆ ಹೊತ್ತು ತರುವವರು ಇದೇ ಸಂಕದ ಮೇಲೆ ನಡೆಯುತ್ತಾರೆ. ಸಂಕದ ಮೇಲೆ ಕಾಲು ಎತ್ತಿಡುವಾಗ, ಕೆಳಗೆ ರಭಸದಲ್ಲಿ ಹರಿಯುವ ಅಘನಾಶಿನಿ ನದಿಯನ್ನು ನೋಡಿದರೆ ಮೈಜುಮ್ಮೆನ್ನುತ್ತದೆ.

ಶಿರಸಿ ತಾಲ್ಲೂಕಿನ ಮತ್ತಿಘಟ್ಟದಲ್ಲಿ ಮುಂಡಗನಮನೆ ಸೊಸೈಟಿ ಹಿಂಭಾಗದಲ್ಲಿರುವ ಹಳ್ಳಕ್ಕೆ ಮಳೆಗಾಲದಲ್ಲಿ ಕಾಲುಸಂಕ ನಿರ್ಮಿಸದಿದ್ದರೆ, ಮಕ್ಕಳಿಗೆ ಶಾಲೆ ತಲುಪಲು ಪರ್ಯಾಯ ಮಾರ್ಗವೇ ಇಲ್ಲ. ಸದ್ಯದಲ್ಲಿ ಹಳ್ಳಕ್ಕೆ ಕಾಂಕ್ರೀಟ್ ಸೇತುವೆ ನಿರ್ಮಾಣವಾಗಿದೆ. ಆದರೆ ಅದಕ್ಕೆ ಸಂಪರ್ಕ ರಸ್ತೆ ಇಲ್ಲದ ಕಾರಣ ಮಕ್ಕಳು ಕಾಲುಸಂಕವನ್ನೇ ಅವಲಂಬಿಸುವಂತಾಗಿದೆ. ‘ಅಸಳ್ಳೆ ಸುಣಜೋಗನಕೇರಿ, ಹಳವಳ್ಳಿ– ಕೆಳಗಿನಕೇರಿ ನಡುವೆ ಸೇತುವೆ ನಿರ್ಮಿಸುವಂತೆ ನಾಲ್ಕು ದಶಕಗಳಿಂದ ಕೇಳುತ್ತಿದ್ದೇವೆ. ಆದರೂ, ಕಾಲುಸಂಕದ ಗೋಳು ತಪ್ಪಿಲ್ಲ. ಪಾಲಕರು ಬರದಿದ್ದರೆ, ಮಕ್ಕಳು ಶಾಲೆಗೆ ಬರಲು ಸಾಧ್ಯವೇ ಇಲ್ಲ. ಅಡಿಕೆ ದಬ್ಬೆಯ ಸಣ್ಣ ಸಣ್ಣ ಕಾಲುಸಂಕಗಳು 15ಕ್ಕೂ ಹೆಚ್ಚು ಇವೆ’ ಎನ್ನುತ್ತಾರೆ ಮತ್ತಿಘಟ್ಟದ ವಿ.ಆರ್.ಹೆಗಡೆ.

ಸರ್ಕಸ್ ಸಾಕಾಗಿದೆ, ಶಾಶ್ವತ ಸಂಕ ನಿರ್ಮಿಸಿ

ಮುತ್ತೂರು: ವಿದ್ಯಾರ್ಥಿಗಳ ಒತ್ತಾಯ

ಹೊಸನಗರ: 'ಸಂಕದ ಮೇಲೆ ಹೋಗಲು ಹೆದರಿಕೆ ಆಗುತ್ತೆ. ಸತ್ತ ಅಜ್ಜನ ನೆನಪು ಕಾಡುತ್ತೆ. ನೀ ಬಾರಪ್ಪ ಜತೆಗೆ'-ಇದು ತಮ್ಮ ಪೋಷಕರು ನಿರ್ಮಿಸಿದ ಕಾಲುಸಂಕ ದಾಟುವ ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರಿನ ವಿದ್ಯಾರ್ಥಿಗಳ ಅಳಲು.

ಕಾಲುಸಂಕ ದಾಟುವಾಗ ಬಿದ್ದು ವೆಂಕಟನಾಯ್ಕ ಮೃತಪಟ್ಟ ನಂತರ ಕಾಲುಸಂಕ ಮಕ್ಕಳಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.

'ಮಕ್ಕಳು ಕಾಲುಸಂಕ ದಾಟಲು ಹೆದರುತ್ತಿವೆ. ಅಂಗನವಾಡಿ ಮಗು ಸೇರಿ ಸುಮಾರು 9 ಮಕ್ಕಳು ನಿತ್ಯ ಶಾಲಾ–ಕಾಲೇಜುಗಳಿಗೆ ಈ ಸಂಕ ದಾಟಿಯೇ ಹೋಗಬೇಕು. ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ' ಎಂಬುದು ಮೃತ ವೆಂಕಟನಾಯ್ಕನ ಅವರ ಪುತ್ರ ನಾಗರಾಜ ಆರೋಪ.

ಸಂಕದ ಮೇಲೆ ಸರ್ಕಸ್: ಮರದ ತುಂಡುಗಳಿಗೆ ಅಡ್ಡಲಾಗಿ ಹಗ್ಗ ಬಿಗಿದು ಸುಮಾರು 15 ಅಡಿ ಉದ್ದ ಕಾಲುಸಂಕವನ್ನು ಸುತ್ತಲಿನ ಆರು ಮನೆಯವರು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ್ದಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ನಿತ್ಯ ಮುಂಬಾರು ಹಾಗೂ ಹೊಸನಗರಕ್ಕೆ ಹೋಗಲು ಜೀವಭಯದಲ್ಲಿಯೇ ಸಂಕ ದಾಟಬೇಕಾದ ಪರಿಸ್ಥಿತಿ ಇದೆ.

ಹೆದರಿದ ಅಧಿಕಾರಿಗಳು: ಸ್ಥಳಕ್ಕೆ ಸೋಮವಾರ ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ, ಸ್ಥಳ ಪರಿಶೀಲಿಸಿದರು. ಆದರೆ ಸಂಕ ದಾಟಲು ಭಯಪಟ್ಟರು. ಜಾರುವ ಹಾಗೂ ತೂಗಾಡುವ ಸಂಕದ ಮೇಲೆ ಒಂದು ಹೆಜ್ಜೆಯನ್ನೂ ಇಡದೇ ಹಿಂತಿರುಗಿದರು.

(ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಡ್ಲು–ನಾಗರಗಂಡಿ ಗ್ರಾಮಸ್ಥರು ಕಟ್ಟಿನಮನೆ ಗ್ರಾಮಕ್ಕೆ ಬರಲು ಮಾರ್ಗಮಧ್ಯ ಹರಿಯುವ ಹಳ್ಳಕ್ಕೆ ನಿರ್ಮಿಸಿಕೊಂಡಿರುವ ಮರದ ದಿಮ್ಮಿಯ ಕಾಲು ಸಂಕ)

ಎತ್ತ ಹೋದರೂ ಕಾಲುಸಂಕವೇ ಆಧಾರ!

ಖಾನಾಪುರ (ಬೆಳಗಾವಿ ಜಿಲ್ಲೆ): ಮಳೆಗಾಲದಲ್ಲಿ, ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಕಾಲುಸಂಕವನ್ನುಸಾರ್ವಜನಿಕರು ಬಳಸುತ್ತಾರೆ. ಇವುಗಳ ಪೈಕಿ ಎರಡು ಕಾಲುಸಂಕವನ್ನು ಪಾಂಡರಿ ನದಿ, ಒಂದು ಕಾಲುಸಂಕ ಮಹದಾಯಿ ನದಿ ದಾಟಲು ಹಾಗೂ ಮತ್ತೊಂದನ್ನು ಬಂಡೂರಿ ಹಳ್ಳವನ್ನು ದಾಟಲು ಉಪಯೋಗಿಸಲಾಗುತ್ತದೆ.

ತಾಲ್ಲೂಕಿನ ಗುಂಜಿ ಹೋಬಳಿಯ ಅರಣ್ಯದ ನಡುವೆ ಇರುವ ಗ್ರಾಮಗಳಿಗೆ ತೆರಳಲು, ಆಯಾ ಊರಿನ ಗ್ರಾಮಸ್ಥರೇ ನಾಲ್ಕೂ ಕಾಲುಸಂಕವನ್ನು ನಿರ್ಮಿಸಿಕೊಳ್ಳುತ್ತಾರೆ. ಸ್ಥಳೀಯವಾಗಿ ಸಿಗುವ ಕಟ್ಟಿಗೆ, ಹಲಗೆ, ಬಿದಿರು ಸಾಮಗ್ರಿಗಳನ್ನು ಬಳಸಿ ಮಳೆ ಆರಂಭಕ್ಕೂ ಮುನ್ನ ಕಾಲುಸಂಕ ನಿರ್ಮಿಸಲಾಗುತ್ತದೆ. ಇದರ ನಿರ್ವಹಣೆಗೆ ಗ್ರಾಮ ಪಂಚಾಯ್ತಿಯಿಂದಲೂ ಸ್ವಲ್ಪ ಅನುದಾನ ಸಿಗುತ್ತದೆ.

ಲೋಂಡಾ ಗ್ರಾಮದಿಂದ ಸಾತನಾಳಿ, ಮಾಚಾಳಿ ಗ್ರಾಮಗಳಿಗೆ ಮತ್ತು ಘೋಷೆ ಕೆ.ಎಚ್ ಗ್ರಾಮಕ್ಕೆ ತೆರಳಲು ಪಾಂಡರಿ ನದಿಗೆ ಅಡ್ಡಲಾಗಿ ಕಾಲುಸಂಕ ನಿರ್ಮಿಸಲಾಗಿದೆ.

*ನಾಲ್ಕೂ ಸೇತುವೆಗಳನ್ನು ಪರಿಶೀಲಿಸಿ ಕಾಲುಸಂಕಗಳಿರುವ ಜಾಗದಲ್ಲಿ ಶಾಶ್ವತವಾದ ಸೇತುವೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
-ಶಿವಾನಂದ ಉಳ್ಳೇಗಡ್ಡಿ, ತಹಶೀಲ್ದಾರ್

ಸೇತುವೆ ತಲುಪಲು ಸಾರವೆ ಆಸರೆ

ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದ ಶೆಟ್ಟಿಹಡ್ಲು ಮತ್ತು ಅಬ್ಬಿಗುಂಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲುಸಂಕದ ಎರಡೂ ಕಡೆ ಹಳ್ಳದ ದಂಡೆ ಕೊಚ್ಚಿ ಹೋಗಿದ್ದು, ಹಳ್ಳದ ಮಧ್ಯೆ ದ್ವೀಪದಂತಿರುವ ಸೇತುವೆಯನ್ನು ತಲುಪಲು ಸಾರ (ಸಾರವೆ) ಬಳಸಬೇಕಾದ ವಿಲಕ್ಷಣ ಪರಿಸ್ಥಿತಿ ತಲೆದೋರಿದೆ.

2009ರಲ್ಲಿ ಆಲೆಮನೆ ಶಾಲೆಯ ಮುಖ್ಯ ಶಿಕ್ಷಕಿ ಶೈಲ ಅವರೊಂದಿಗೆ ಅಬ್ಬಿಗುಂಡಿಯಿಂದ ನಡೆದು ಬರುತ್ತಿದ್ದ ಶಾಲಾ ಬಾಲಕಿ ಈ ಕಾಲುಸಂಕ ದಾಟುವ ವೇಳೆ ಆಯ ತಪ್ಪಿ ಹಳ್ಳಕ್ಕೆ ಬಿದ್ದಿದ್ದು, ಶಿಕ್ಷಕಿ ಶೈಲ ಮಗುವನ್ನು ರಕ್ಷಿಸಿದ್ದರು.

ಈ ಘಟನೆಯಿಂದಾಗಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅಬ್ಬಿಗುಂಡಿ ಹಳ್ಳಕ್ಕೆ ಅಂದಾಜು ₹1.5 ಲಕ್ಷ ವೆಚ್ಚದಲ್ಲಿ ಕಾಲುಸಂಕ ನಿರ್ಮಿಸಲಾಯಿತು.

ಆದರೆ, ಮಳೆಯಿಂದಾಗಿ ಅಬ್ಬಿಗುಂಡಿ ಹಳ್ಳದಲ್ಲಿ ಸತತ ಪ್ರವಾಹ ಕಾಣಿಸಿಕೊಂಡು, ದಡ ಉಕ್ಕಿ ಹರಿದು ಕಾಲುಸಂಕದ ಎರಡೂ ಪಾರ್ಶ್ವದ ದಂಡೆ ಕೊಚ್ಚಿ ಹೋಗಿದೆ. ಇದರಿಂದಾಗಿ ಅಬ್ಬಿಗುಂಡಿ ಹಾಗೂ ಶೆಟ್ಟಿಹಡ್ಲು ಭಾಗದ 25ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ವ್ಯವಸ್ಥೆ ಕಡಿತಗೊಂಡಿದೆ.

ದೊಡ್ಡಹಡ್ಲು– ನಾಗರಗಂಡಿ ಗ್ರಾಮಸ್ಥರ ಪರದಾಟ

ಕಟ್ಟಿನಮನೆ (ಎನ್.ಆರ್.ಪುರ): ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಿಂದ ದೊಡ್ಡಹಡ್ಲು ಮತ್ತು ನಾಗರಗಂಡಿ ಗ್ರಾಮಕ್ಕೆ ಹೋಗುವ ಜನರು ಗ್ರಾಮದ ಮಧ್ಯೆ ಹರಿಯುವ ಹಳ್ಳವನ್ನು ದಾಟಬೇಕಿದ್ದು, ಇದಕ್ಕೆ ಕಾಲುಸಂಕವೇ ಆಸರೆಯಾಗಿದೆ.

12 ವರ್ಷಗಳ ಹಿಂದೆ ಗ್ರಾಮಸ್ಥರೇ ಕಾಲುಸಂಕ ನಿರ್ಮಿಸಿದ್ದರು. ಈ ಗ್ರಾಮದ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು 150ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಈ ಗ್ರಾಮದಿಂದ ಪ್ರತಿನಿತ್ಯ ಕಾಲುಸಂಕವನ್ನು ದಾಟಿಕೊಂಡು 25ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ.

ಈ ಕಾಲುಸಂಕ ದಾಟಿದರೆ ಕೇವಲ 2 ಕಿ.ಮೀ ಅಂತರದಲ್ಲಿ ಕಟ್ಟಿನಮನೆ ಗ್ರಾಮಕ್ಕೆ ಬಂದು ತಲುಪಬಹುದು. ಒಂದು ವೇಳೆ ಮಳೆಗಾಲದಲ್ಲಿ ಹಳ್ಳತುಂಬಿ ಹರಿದರೆ ಕಾಲುಸಂಕವು ಮುಳುಗುತ್ತದೆ.

ಕಾಲುಸಂಕಗಳಿಗೆ ಬೇಕಿದೆ ಕಾಯಕಲ್ಪ

ಶಿವಮೊಗ್ಗ:ಹೊಸನಗರ ತಾಲ್ಲೂಕಿನ ಮುಂಬಾರಿನಲ್ಲಿ ಕೂಲಿ ಕಾರ್ಮಿಕ ವೆಂಕಟನಾಯ್ಕ,ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳು ದೊಡ್ಲಿಮನೆಹಳ್ಳದಲ್ಲಿ ಗುಡ್ಡೇಕೇರಿ ಶಾಲೆ ವಿದ್ಯಾರ್ಥಿನಿ ಆಶಿಕಾ ಕಾಲುಸಂಕದಿಂದ ಬಿದ್ದು ಮೃತಪಟ್ಟ ನಂತರ ಮಲೆನಾಡಿನ ಸಮಸ್ಯೆಗಳು ಮತ್ತೆ ರಾಜ್ಯದ ಗಮನ ಸೆಳೆದಿವೆ.

ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ತೊರೆ ದಾಟಲು ಜಿಲ್ಲೆಯ ದಟ್ಟ ಮಲೆನಾಡಿನ ಪ್ರದೇಶಗಳಾದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಜನರು ಈಗಲೂ ಕಾಲುಸಂಕಗಳನ್ನೇ ನಂಬಿಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಈಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಈ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ಕಾಲುಸಂಕಗಳಿವೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಐದಾರು ಕಾಲುಸಂಕಗಳಿವೆ. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪರಿಣಾಮ ಸಣ್ಣಪುಟ್ಟ ಹಳ್ಳ, ಝರಿ, ತೊರೆಗಳೂ ಭೋರ್ಗರೆದು ಹರಿಯುತ್ತವೆ. ಇಂತಹ ಸಮಯದಲ್ಲಿ ಮುಖ್ಯರಸ್ತೆ, ಜಮೀನು, ತೋಟ, ಶಾಲೆ, ಮನೆಗಳನ್ನು ತಲುಪಲು, ಆಸ್ಪತ್ರೆ, ಕಚೇರಿ ಕೆಲಸಗಳಿಗೆ ಪಟ್ಟಣಕ್ಕೆ ಹೋಗಿ ಬರುವ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಈ ಕಾಲುಸಂಕಗಳೇ ಆಸರೆ.

ಕೆಲವು ಭಾಗಗಳಲ್ಲಿ ಮಾತ್ರ ವ್ಯವಸ್ಥಿತ ಕಾಂಕ್ರೀಟ್ ಕಾಲುಸಂಕಗಳಿದ್ದರೆ, ಶೇ 95ರಷ್ಟು ಸಂಕಗಳನ್ನು ಸ್ಥಳೀಯರು ಕಟ್ಟಿಗೆ, ಅಡಿಕೆ ದಬ್ಬೆ, ಮರದ ತುಂಡು, ಹಗ್ಗ, ಕಲ್ಲುಚಪ್ಪಡಿಗಳನ್ನು ಬಳಸಿ ಸಿದ್ಧಪಡಿಸಿದ್ದಾರೆ. ಅವುಗಳಲ್ಲಿ ಬಹುತೇಕ ಅಪಾಯಕಾರಿ ಸ್ಥಿತಿಯಲ್ಲಿವೆ.

ಹೊಸನಗರ ತಾಲ್ಲೂಕಿನ ನಿಟ್ಟೂರು–ಗಾಂಜಾಳ, ಮಾರುತಿಪುರ–ಸಾದರಗುಂಡಿ, ಮುತ್ತೂರು–ಮುಂಬಾರು ವ್ಯಾಪ್ತಿಯ ಹಲವು ಕಾಲುಸಂಕಗಳು, ತೀರ್ಥಹಳ್ಳಿ ತಾಲ್ಲೂಕಿನ ಮುಳಬಾಗಿಲು ಪಂಚಾಯಿತಿ ವ್ಯಾಪ್ತಿಯ ಬಿಂತ್ಲ, ಆಗುಂಬೆ ಬಳಿಯ ಕಾರೆಮನೆ, ಹೊದಲ–ಹರಳಾಪುರ ಪಂಚಾಯಿತಿ ವ್ಯಾಪ್ತಿಯ ಮರಡಿಹಳ್ಳ, ದಬ್ಬಣಗೆರೆ–ಎಡವಿನಕೊಪ್ಪದ ಕಮನಿಹಳ್ಳ, ಸಾಗರ ತಾಲ್ಲೂಕು ಕಾರ್ಗಲ್–ಜೋಗ ಸಮೀಪದ ಬಚ್ಚೋಡಿ, ಹೆನ್ನಿ, ಹಂಜಕಿ ಹಳ್ಳ, ಸರಳಹಳ್ಳ, ಬಾರಂಗಿ ಹೋಬಳಿಯ ಹಲವು ಕಾಲುಸಂಕಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

(ಕಾರ್ಗಲ್‌ ಸಮೀಪದ ಬಜ್ಜೋಡಿಯ ಸರಳ ಹಳ್ಳದ ಕಾಲುಸಂಕದ ಮೇಲೆ ನಡೆದುಬರುತ್ತಿದ್ದ ಗುಡಿಹಿತ್ತಲ ವೃದ್ಧ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT