ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ವರು ಮ್ಯಾಜಿಸ್ಟ್ರೇಟ್‌ರ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳಿಗೆ ಕಾನೂನು ನೆರವು ಅಲಭ್ಯ ಆರೋಪ
Published : 22 ಜೂನ್ 2018, 17:21 IST
ಫಾಲೋ ಮಾಡಿ
Comments

ಬೆಂಗಳೂರು: ‘ಪೊಲೀಸರಿಂದ ಬಂಧನಕ್ಕೊಳಗೊದ ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಲ್ಲಿ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆಕ್ಷೇಪಿಸಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತಂತೆ ಶಿವಮೊಗ್ಗ ಜಿಲ್ಲೆ ಕುಪ್ಪನಹಳ್ಳಿಯ ಸುಜಿತ್ ಕುಮಾರ್, ವಿಜಯಪುರ ಜಿಲ್ಲೆಯ ತಿಕೋಟಾ ಹೋಬಳಿ ರತ್ನಾಪುರ ಗ್ರಾಮದ ಮನೋಹರ ಯಡವೆ, ಪುಣೆಯ ಚಿಂಚವಾಡದ ಅಮೋಲ್‌ ಕಾಳೆ ಮತ್ತು ಸಿಂಧುದುರ್ಗ ಜಿಲ್ಲೆ ಕರಣಿ ಗ್ರಾಮದ ಅಮಿತ್ ರಾಮಚಂದ್ರ ದೇಗ್ವೇಕರ್‌ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಎನ್‌.ಪಿ.ಅಮೃತೇಶ್‌ ವಕಾಲತ್ತು ವಹಿಸಿದ್ದು ಇದಿನ್ನೂ ವಿಚಾರಣೆಗೆ ಬರಬೇಕಿದೆ. ರಿಟ್‌ ಅರ್ಜಿಯಲ್ಲಿ 5ನೇ ಎಸಿಎಂಎಂ ಕೋರ್ಟ್‌ ಮ್ಯಾಜಿಸ್ಟ್ರೇಟ್‌ ಸೋಮಶೇಖರ್, 3ನೇ ಎಸಿಎಂಎಂ ಕೋರ್ಟ್‌ ಮ್ಯಾಜಿಸ್ಟ್ರೇಟ್‌ ವಿ.ಪ್ರಕಾಶ್, 1ನೇ ಎಸಿಎಂಎಂ ಕೋರ್ಟ್‌ ಮ್ಯಾಜಿಸ್ಟ್ರೇಟ್‌ ಜಗದೀಶ್, 4ನೇ ಎಸಿಎಂಎಂ ಕೋರ್ಟ್‌ ಮ್ಯಾಜಿಸ್ಟ್ರೇಟ್ ಮಾಲಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಆರೋಪಿಗಳಿಗೆ ಪೊಲೀಸರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಹಿಂಸೆಯ ಬಗ್ಗೆ ನ್ಯಾಯಾಧೀಶರ ಮುಂದೆ ಏನಾದರೂ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಇದರಿಂದಾಗಿ ಅವರು ತಮ್ಮನ್ನ ಸಮರ್ಥಿಸಿಕೊಳ್ಳುವ ದಿಸೆಯಲ್ಲಿ ಮತ್ತು ಕಾನೂನು ನೆರವನ್ನು ಪಡೆಯಲು ಸಾಧ್ಯವಾಗಿಲ್ಲ. ವಿಶೇಷ ಎಂದರೆ ಆರೋಪಿಗಳಲ್ಲಿ ಇಬ್ಬರು ಮರಾಠಿ ಭಾಷಿಕರು. ಅವರಿಗೆ ಕನ್ನಡವೇ ಗೊತ್ತಿಲ್ಲ. ಹೀಗಾಗಿ ಕೋರ್ಟ್‌ ಕಲಾಪದ ವಿವರ ಅರಿಯಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನಾಲ್ವರು ಮ್ಯಾಜಿಸ್ಟ್ರೇಟರು ಆರೋಪಿಗಳ ಸಾಂವಿಧಾನಿಕ ಹಕ್ಕುಗಳನ್ನು ಮೊಟಕು ಮಾಡಿದ್ದಾರೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಮನವಿ ಏನು?

* ತಪ್ಪು ಎಸಗಿರುವ ಮ್ಯಾಜಿಸ್ಟ್ರೇಟರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು.

* ನಾಲ್ವರೂ ಮ್ಯಾಜಿಸ್ಟ್ರೇಟರು ಆರೋಪಿಗಳಿಗೆ ತಲಾ ₹ 1 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಬೇಕು.

* ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು.

* ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿರುವ ದಾಖಲೆಗಳನ್ನು ಹೈಕೋರ್ಟ್‌ಗೆ ತರಿಸಿಕೊಂಡು ಪರಿಶೀಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT