ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಜಿಸ್ಟ್ರೇಟ್‌ ಹೆಸರು ತೆಗೆಯಿರಿ’

ಪ್ರತಿವಾದಿ ಪಟ್ಟಿಯಲ್ಲಿ ನ್ಯಾಯಾಧೀಶರ ಹೆಸರು: ಹೈಕೋರ್ಟ್‌ ಅಸಮಾಧಾನ
Last Updated 4 ಸೆಪ್ಟೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಾಧೀಶರನ್ನೇ ಪ್ರತಿವಾದಿಗಳನ್ನಾಗಿ ಮಾಡುವ ಮೂಲಕ ನೀವು ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ’ ಎಂದು ಗೌರಿ ಲಂಕೇಶ್‌ ಹತ್ಯೆ ಪ್ರಕಣದ ಆರೋಪಿಗಳ ಮೇಲೆ ಹೈಕೋ‌ರ್ಟ್‌ ಹರಿಹಾಯ್ದಿದೆ.

‘ಪೊಲೀಸರಿಂದ ಬಂಧನಕ್ಕೊಳಗಾದ ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಲ್ಲಿ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆಕ್ಷೇಪಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, ’ನಿಮಗೆ ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲವೇ’ ಎಂದು ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ‘ಇಂತಹುದನ್ನು ಕೋರ್ಟ್‌ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

‘ಪ್ರಕರಣದಲ್ಲಿ ನಗರದ 5ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಸೋಮಶೇಖರ್, 3ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ವಿ.ಪ್ರಕಾಶ್, 1ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಜಗದೀಶ್, 4ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮಾಲಾ ಅವರ ಹೆಸರು
ಗಳನ್ನು ಪ್ರತಿವಾದಿಗಳ ಪಟ್ಟಿಯಿಂದ ತೆಗೆದು ಹಾಕಿ’ ಎಂದು ಆದೇಶಿಸಿದರು.

ಶಿವಮೊಗ್ಗ ಜಿಲ್ಲೆ ಕುಪ್ಪನಹಳ್ಳಿಯ ಸುಜಿತ್ ಕುಮಾರ್, ವಿಜಯಪುರ ಜಿಲ್ಲೆ ತಿಕೋಟಾ ಹೋಬಳಿ ರತ್ನಾಪುರ ಗ್ರಾಮದ ಮನೋಹರ ಯಡವೆ, ಪುಣೆಯ ಚಿಂಚ್‌ವಾಡದ ಅಮೋಲ್‌ ಕಾಳೆ ಮತ್ತು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ ಕರಣಿ ಗ್ರಾಮದ ಅಮಿತ್ ರಾಮಚಂದ್ರ ದೇಗ್ವೇಕರ್‌ ಸಲ್ಲಿಸಿರುವ ರಿಟ್‌ ಅರ್ಜಿ ಇದಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಪೊಲೀಸರು ನಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಹಿಂಸೆಯ ಬಗ್ಗೆ ನ್ಯಾಯಾಧೀಶರ ಮುಂದೆ ಏನಾದರೂ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಇದರಿಂದಾಗಿ ನಾವು ವಕೀಲರ ನೆರವು ಪಡೆಯಲು ಸಾಧ್ಯವಾಗಿಲ್ಲ' ಎಂದು ಅರ್ಜಿದಾರರು ಹೇಳಿದ್ದಾರೆ.

‘ಕಳಾಸ್ಕರ್ ಶೂಟರ್’

ಪುಣೆ: ‘ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರಿಗೆ ಗುಂಡು ಹೊಡೆದ ಇಬ್ಬರಲ್ಲಿ ಶರದ್ ಕಳಾಸ್ಕರ್ ಕೂಡ ಒಬ್ಬ’ ಎಂದು ಸಿಬಿಐ ಅಧಿಕಾರಿಗಳು ಪುಣೆ ನ್ಯಾಯಾಲಯಕ್ಕೆ ಹೇಳಿದ್ದಾರೆ.

2013ರ ಆಗಸ್ಟ್‌ನಲ್ಲಿ ದಾಭೋಲ್ಕರ್ ಹತ್ಯೆ ನಡೆದಿತ್ತು. ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪದಡಿ ಸಚಿನ್ ಪ್ರಕಾಶ್‌ರಾವ್ ಅಂಧುರೆಯನ್ನು ಬಂಧಿಸಿದ್ದ ಸಿಬಿಐ, ಆತನ ಸ್ನೇಹಿತ ಕಳಾಸ್ಕರ್ ಕೂಡ ಗುಂಡು ಹಾರಿಸಿದ್ದ ಎಂದು ಹೇಳಿದೆ. ಹೀಗಾಗಿ, ಕಳಾಸ್ಕರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಇದೇ10ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT