ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಘಟಪ್ರಭಾ ಪ್ರವಾಹ; ಸಚಿವರ ಜೊತೆ ಶೀಘ್ರ ಸಭೆ– ಸಿದ್ದರಾಮಯ್ಯ

Published : 28 ಆಗಸ್ಟ್ 2024, 15:58 IST
Last Updated : 28 ಆಗಸ್ಟ್ 2024, 15:58 IST
ಫಾಲೋ ಮಾಡಿ
Comments

ಬೆಂಗಳೂರು: ‘ಘಟಪ್ರಭಾ ನದಿಯ ಪ್ರವಾಹದಿಂದ ಪ್ರತಿವರ್ಷ ಉಂಟಾಗುತ್ತಿರುವ ಹಾನಿಯ ಕುರಿತು ನೀರಾವರಿ, ಕಂದಾಯ ಮತ್ತು ಲೋಕೋಪಯೋಗಿ ಸಚಿವರ ಜೊತೆ ಶೀಘ್ರದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಧೋಳ ತಾಲ್ಲೂಕಿನ ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮುಧೋಳ ಕ್ಷೇತ್ರದ ಶಾಸಕರೂ ಆಗಿರುವ ಅಬಕಾರಿ ಸಚಿವ ಆರ್.‌ಬಿ. ತಿಮ್ಮಾಪುರ ನೇತೃತ್ವದಲ್ಲಿ ರೈತರ ನಿಯೋಗ ಮುಖ್ಯಮಂತ್ರಿ ಅವರನ್ನು ಬುಧವಾರ ಭೇಟಿ ಮಾಡಿತು.

ಘಟಪ್ರಭಾ ನದಿಯ ಪ್ರವಾಹದಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 34,639 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2019ರಲ್ಲಿ 15,088 ಹೆಕ್ಟೇರ್‌, 2021ರಲ್ಲಿ 7,051 ಹೆಕ್ಟೇರ್ ಮತ್ತು 2024‌ರಲ್ಲಿ 12,500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಇದಕ್ಕೆ ಸೂಕ್ತ  ಪರಿಹಾರ ಮತ್ತು ಶಾಶ್ವತ ಪರಿಹಾರ ಒದಗಿಸಬೇಕು ಎಂದು ನಿಯೋಗವು ಮನವಿ ಮಾಡಿತು.

‘ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನೀರಾವರಿ ಕ್ಷೇತ್ರದ ಕಬ್ಬಿನ ಬೆಳೆಗೆ ಪ್ರತಿ ಹೆಕ್ಟೇರಿಗೆ ₹ 22,500, ಇತರ ಬೆಳೆಗಳಿಗೆ ₹ 17 ಸಾವಿರ ಪರಿಹಾರ ಧನ ನಿಗದಿಪಡಿಸಲಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಕರ್ನಾಟಕದಲ್ಲಿ ಕಬ್ಬು ಬೆಳೆಯಲು ತಗಲುವ ವೆಚ್ಚ ಪ್ರತಿ ಹೆಕ್ಟೇರ್‌ಗೆ ₹ 1.50 ಲಕ್ಷವೆಂದು ಈಗಾಗಲೇ ಕೃಷಿ ವಿಶ್ವವಿದ್ಯಾಲಯ ನಿಗದಿಪಡಿಸಿದೆ. ಆದರೆ, ಇದು ಕೂಡಾ ಅವೈಜ್ಞಾನಿಕ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕನಿಷ್ಠವಾಗಿದ್ದು, ಪ್ರತಿ ಎಕರೆ ಕಬ್ಬು ಬೆಳೆಗೆ ₹ 1 ಲಕ್ಷ ಹಾಗೂ ಇತರ ಬೆಳೆಗಳಿಗೆ ₹ 50 ಸಾವಿರ ಪರಿಹಾರ  ನೀಡಬೇಕು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಮಾನದಂಡಗಳನ್ನು ಪರಿಗಣಿಸದೆ ಪರಿಹಾರ ಧನ‌ ಕೊಡಬೇಕು’ ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT