ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ, ವಿಡಿಯೊ ನಿಷೇಧದ ಆದೇಶ ವಾಪಸ್‌: ಸರ್ಕಾರಿ ಆದೇಶದಲ್ಲಿ ಅಕ್ಷರ ದೋಷ

ಫೋಟೊ, ವಿಡಿಯೊ ನಿಷೇಧದ ಆದೇಶ ವಾಪಸ್‌
Last Updated 17 ಜುಲೈ 2022, 1:16 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆ ಸಾರ್ವಜನಿಕರು ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನುನಿಷೇಧಿಸಿದ್ದ ಆದೇಶವನ್ನು ಹಿಂಪಡೆದು ಶುಕ್ರವಾರ ತಡರಾತ್ರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಹೊರಡಿಸಿದ ಆದೇಶದಲ್ಲಿದ್ದ ಅಕ್ಷರ ದೋಷಗಳು ರಾಜ್ಯ ಸರ್ಕಾರವನ್ನು ನಗೆಪಾಟಲಿಗೆ ಈಡುಮಾಡಿವೆ!

ಆದೇಶದಲ್ಲಿದ್ದ ಅಕ್ಷರದೋಷಗಳು ಗಮನಕ್ಕೆ ಬರುತ್ತಿದ್ದಂತೆ, ಅವುಗಳನ್ನು ಸರಿಪಡಿಸಿ ಮರು ಆದೇಶ ಹೊರಡಿಸಲಾಗಿತ್ತು. ಅಚ್ಚರಿಯೆಂದರೆ, ಮರು ಆದೇಶದ ಪ್ರತಿಯಲ್ಲಿ ಅದನ್ನು ಹೊರಡಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಯ ಹೆಸರೇ ತಪ್ಪಾಗಿತ್ತು!

ಇಲಾಖೆಗಳ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುವ ಸುಳಿವು ಸಿಗುತ್ತಿದ್ದಂತೆ, ಅದನ್ನು ವಾಪಸು ಪಡೆಯುವಂತೆ ಡಿಪಿಎಆರ್‌ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದ್ದರೂ, ಆದೇಶ ಹೊರಬಿದ್ದಿದ್ದು ಮಾತ್ರ ರಾತ್ರಿ 2 ಗಂಟೆಗೆ.

ಆದೇಶದ ಪ್ರತಿ ಶನಿವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಜೊತೆಗೆ, ಆದೇಶದಲ್ಲಿದ್ದ ಅಕ್ಷರ ದೋಷಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಗೆ ಟೀಕೆ ವ್ಯಕ್ತವಾಗಿತ್ತು. ಸರ್ಕಾರದ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಭರಿತ ಮಾತುಗಳು ಹರಿದಾಡಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಡಿಪಿಎಆರ್‌, ಪರಿಷ್ಕೃತ ಆದೇಶವನ್ನು ಮತ್ತೊಮ್ಮೆ ‌ಹೊರಡಿಸಿತು.

ಇಲಾಖೆಗಳ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿದ ಆದೇಶ ಹೊರಬೀಳುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಆರ್‌ಎಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್‌ ಸಿ.ಎನ್‌. ಸೇರಿದಂತೆ ಹಲವರು ಸರ್ಕಾರದ ನಡೆಯನ್ನು ಟೀಕಿಸಿದ್ದರು.

ಕರ್ನಾಟಕದ ಬದಲು ‘ಕರ್ನಾಟಾ’!

ನಿರ್ಬಂಧ ವಾಪಸು ಪಡೆದ ಆದೇಶವನ್ನು ಶುಕ್ರವಾರ ರಾತ್ರಿ 2 ಗಂಟೆಗೆ ತರಾತುರಿ
ಯಲ್ಲಿ ಹೊರಡಿಸಲಾಗಿತ್ತು. ಆ ಆದೇಶದ ಪ್ರತಿಯಲ್ಲಿ ಆರಂಭದಿಂದ ಕೊನೆಯವರೆಗೆ ತಪ್ಪುಗಳೇ ನುಸುಳಿದ್ದವು. ನಡಾವಳಿಗಳು– ನಡವಳಿಗಳು, ಪ್ರಸ್ತಾವನೆ–ಪ್ರಸತ್ತಾವನೆ, ಮೇಲೆ– ಮೇಲೇ, ಭಾಗ–1– ಬಾಗ–1, ಕರ್ನಾಟಕ–ಕರ್ನಾಟಾ, ಆಡಳಿತ– ಆಡಳಿತದ ಎಂದಾಗಿತ್ತು. ಈ ತಪ್ಪುಗಳನ್ನು ಸರಿಪಡಿಸಿ ಹೊರಡಿಸಿದ ಆದೇಶದಲ್ಲಿ, ಸಹಿ ಮಾಡಿದ್ದ ಅಧಿಕಾರಿ ಹೆಸರು ಆನಂದ ಬದಲು ‘ಅನಂದ’ ಎಂದಾಗಿತ್ತು!

ಗಮನಕ್ಕೆ ಬಂದಿರಲಿಲ್ಲ-ಬೊಮ್ಮಾಯಿ

‘ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊ ಮಾಡದಂತೆ ಆದೇಶ ಹೊರಡಿಸಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದೇ ರೀತಿಯ ನಿಷೇಧ ಆಗಬಾರದು, ಮೊದಲು ಇದ್ದಂತೆ ಇರಲಿ ಎಂಬ ಕಾರಣಕ್ಕೆ ಆ ಆದೇಶವನ್ನು ವಾಪಸು ಪಡೆಯುವ ತಾತ್ವಿಕ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದನ್ನೂ ಮುಚ್ಚಿಡುವುದಿಲ್ಲ. ಯಾರೂ ಏನೇ ಹೇಳಿಕೊಳ್ಳಲಿ’ ಎಂದ ಅವರು, ‘ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊ ಮಾಡದಂತೆ ಕೆಲವು ಸರ್ಕಾರಿ ನೌಕರರು ಬಹಳ ದಿನಗಳಿಂದ ಹೇಳುತ್ತಿದ್ದರು. ಅವರು ಹೇಳುವುದರಲ್ಲೂ ಅರ್ಥವಿದೆ. ಕೆಲವು ಹೆಣ್ಣುಮಕ್ಕಳ ಫೋಟೋ ತೆಗೆದು ತೊಂದರೆ ಆಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT