ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಮಳಿಗೆ ತೆರೆಯಲು ಎಂಎಸ್‌ಐಎಲ್‌ ಯೋಜನೆ

ರಾಜ್ಯದಾದ್ಯಂತ ಹೈಟೆಕ್‌ ಮದ್ಯದಂಗಡಿ ತೆರೆಯಲು ಎಂಎಸ್‌ಐಎಲ್‌ ಯೋಜನೆ
Published 7 ಆಗಸ್ಟ್ 2023, 19:51 IST
Last Updated 7 ಆಗಸ್ಟ್ 2023, 19:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಪ್ರೀಮಿಯಂ ವಿದೇಶಿ ಬ್ರ್ಯಾಂಡ್‌ಗಳ ಚಿಲ್ಲರೆ ಮದ್ಯ ಮಾರಾಟಕ್ಕೆ ‘ಹೈಟೆಕ್‌’ ಮಳಿಗೆಗಳನ್ನು ತೆರೆಯಲು ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಮುಂದಾಗಿದೆ. ಆ ಮೂಲಕ, ವಾರ್ಷಿಕ ₹150 ಕೋಟಿಯಿಂದ ₹200 ಕೋಟಿ ಹೆಚ್ಚುವರಿ ವಹಿವಾಟು ನಡೆಸುವ ಗುರಿ ಹೊಂದಿದೆ.

ರಾಜ್ಯದ ಬಹುತೇಕ ನಗರಗಳಲ್ಲಿ ಮದ್ಯ ಮಾರಾಟದ ಬೃಹತ್‌ ಖಾಸಗಿ ಶೋ ರೂಂಗಳು ಇವೆ. ಅದೇ ಮಾದರಿಯಲ್ಲಿ, ಬಾಡಿಗೆ ಕಟ್ಟಡಗಳಲ್ಲಿ ಎಂಎಸ್‌ಐಎಲ್‌ ಮದ್ಯದಂಗಡಿಗಳೂ ಶೀಘ್ರದಲ್ಲಿ ಬರಲಿವೆ. 

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 10, ಬೆಳಗಾವಿ, ಮೈಸೂರು, ಮಂಗಳೂರು, ದಾವಣಗೆರೆ ಸೇರಿದಂತೆ ದೊಡ್ಡ ನಗರಗಳಲ್ಲಿ ತಲಾ 2, ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಅತ್ಯಾಧುನಿಕ ವಿನ್ಯಾಸದ ಮದ್ಯದಂಗಡಿಯನ್ನು ತೆರೆಯಲು ಎಂಎಸ್‌ಐಎಲ್‌ ನಿರ್ಧರಿಸಿದೆ. ಮುಂದಿನ ಹಂತದಲ್ಲಿ ಬೆಂಗಳೂರಿನಲ್ಲಿ ಇನ್ನೂ 40 ಹೈಟೆಕ್‌ ಮದ್ಯದಂಗಡಿಗಳು ಬರಲಿವೆ.

ಬೆಂಗಳೂರಿನಲ್ಲಿ ಸುಮಾರು 1,500 ಚದರ ಅಡಿ ವಿಸ್ತೀರ್ಣ, ಜಿಲ್ಲಾ ಕೇಂದ್ರಗಳಲ್ಲಿ 1,000 ಚದರ ಅಡಿ ವಿಸ್ತೀರ್ಣದಲ್ಲಿ ಜನಾಕರ್ಷಕವಾಗಿ ಮದ್ಯದ ಮಳಿಗೆ ತೆರೆಯಲು ಈಗಾಗಲೇ ಯೋಜನೆ ಸಿದ್ಧಗೊಂಡಿದೆ. ಬೆಂಗಳೂರು, ದಾವಣಗೆರೆ ಸೇರಿದಂತೆ ಕೆಲವು ಕಡೆ ಜಾಗವನ್ನೂ ಗುರುತಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆ ಇರುವ ಸ್ಕಾಚ್‌, ವಿಸ್ಕಿ, ವೊಡ್ಕಾ, ವೈನ್‌ಗಳು ಇಲ್ಲಿ ಸಿಗಲಿವೆ.

ದುಬಾರಿ ಬೆಲೆಯ ಮದ್ಯ‌ ಮಾರಾಟ ಖಾಸಗಿಯವರ‌ ಸ್ವತ್ತಲ್ಲ. ಎಂಎಸ್ ಐಎಲ್ ಕೂಡ ಆ‌‌ ನಿಟ್ಟಿನಲ್ಲಿ ‌ಕೆಲಸ‌ ಮಾಡಬೇಕು; ಹಣವಂತರನ್ನೂ ನಮ್ಮ‌ ಮಳಿಗೆಯತ್ತ ಸೆಳೆಯಬೇಕು
ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ

ಮದ್ಯ ಮಾರಾಟದಲ್ಲಿ ಎಂಆರ್‌ಪಿ (ಗರಿಷ್ಠ ಚಿಲ್ಲರೆ ಬೆಲೆ) ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ  ಗ್ರಾಹಕರಿಗೆ ಗುಣಮಟ್ಟದ ಮದ್ಯ ಪೂರೈಸಲು ರಾಜ್ಯ ಸರ್ಕಾರ 2009ರಲ್ಲಿ 463 ಚಿಲ್ಲರೆ ಮದ್ಯದಂಗಡಿಗಳನ್ನು (ಸಿಎಲ್‌ 11–ಸಿ) ಎಂಎಸ್‍ಐಎಲ್‍ಗೆ ಹಂಚಿಕೆ ಮಾಡಿತ್ತು. ಅದು ಯಶಸ್ಸು ಕಂಡಿದ್ದರಿಂದಾಗಿ 2016ರಲ್ಲಿ ಹೆಚ್ಚುವರಿಯಾಗಿ 900 ಮಳಿಗೆಗಳನ್ನು  ಮಂಜೂರು ಮಾಡಲಾಗಿದೆ. ಒಟ್ಟು 1,363 ಚಿಲ್ಲರೆ ಮದ್ಯದ ಮಳಿಗೆ ತೆರೆಯಲು ಪರವಾನಗಿ ಇದ್ದರೂ ಸದ್ಯ 1,023 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಎಂಎಸ್‌ಐಎಲ್‌ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಮದ್ಯದ ಮಳಿಗೆ ತೆರೆಯುವ ಗುರಿ ಹೊಂದಿದೆ. ಆದರೆ, ಅನೇಕ ಕ್ಷೇತ್ರಗಳಲ್ಲಿ ಸ್ಥಳೀಯರ ವಿರೋಧದಿಂದ ಇದು ಸಾಧ್ಯವಾಗಿಲ್ಲ.

ಸದ್ಯ ಬಡವರು ಮತ್ತು ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟು ಎಂಎಸ್‌ಐಎಲ್‌ ಮದ್ಯ ಮಾರುತ್ತಿದೆ. ಈಗ ಶ್ರೀಮಂತರನ್ನು ಆಕರ್ಷಿಸಲು ಮುಂದಾಗಿದೆ. ಎಂಎಸ್‌ಐಎಲ್‌ ಮದ್ಯ ಮಾರಾಟದಲ್ಲಿ ₹2,400 ಕೋಟಿಯಿಂದ ₹2,700 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಹೈಟೆಕ್‌ ಮದ್ಯದಂಗಡಿ ಮೂಲಕ ಇನ್ನೂ ₹200 ಕೋಟಿ ಹೆಚ್ಚು ವಹಿವಾಟಿನ ಗುರಿ ಇಟ್ಟುಕೊಂಡಿದೆ.

ಹೆಸರು ಸೂಚಿಸಬಹುದು

‘ಉದ್ದೇಶಿತ ಹೈಟೆಕ್ ಮದ್ಯದಂಗಡಿಗಳಿಗೆ ಗಮನ ಸೆಳೆಯುವಂಥ ಹೆಸರು ಇಡಬೇಕು ಎನ್ನುವ ಯೋಚನೆ‌ ಕೂಡ ಇದೆ. ಆಕರ್ಷಕ ಹೆಸರು ಸೂಚಿಸುವ ಮೂಲಕ ಇದಕ್ಕೆ ಸಾರ್ವಜನಿಕರು ಕೂಡ ನೆರವಾಗಬಹುದು. ಆಸಕ್ತರು ಹೆಸರುಗಳನ್ನು ಇ–ಮೇಲ್‌ (msil.liqour@msilonline.com) ಮಾಡಬಹುದು’ ಎಂದು ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ತಿಳಿಸಿದರು.

ಸರ್ಕಾರಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಮಳಿಗೆ ತೆರೆಯಲು ಎಂಎಸ್‌ಐಎಲ್‌ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT