ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖುದ್ದು ಹಾಜರಿಲ್ಲದೇ ಆಸ್ತಿ ನೋಂದಣಿಗೆ ಅವಕಾಶ: ಸ್ಪಷ್ಟನೆ ಕೇಳಿದ ರಾಜ್ಯಪಾಲ

Published : 8 ಸೆಪ್ಟೆಂಬರ್ 2024, 21:34 IST
Last Updated : 8 ಸೆಪ್ಟೆಂಬರ್ 2024, 21:34 IST
ಫಾಲೋ ಮಾಡಿ
Comments

ಬೆಂಗಳೂರು: ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಮಾಡಿ ಕೊಡುವ, ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಕೆಲವು ಸ್ಪಷ್ಟನೆ ಕೇಳಿದ್ದಾರೆ.

ಇದೇ ಫೆಬ್ರುವರಿಯಲ್ಲಿ ಮಸೂದೆಗೆ ವಿಧಾನಮಂಡಲದ ಅನುಮೋದನೆ ದೊರೆತಿತ್ತು. ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಈಚೆಗೆ ರಾಜ್ಯಪಾಲರು ಈ ಮಸೂದೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.

‘ಮಸೂದೆ ಜಾರಿಯಾದರೆ, ಉಪ– ನೋಂದಣಾಧಿಕಾರಿ ಕಚೇರಿಗೆ ವ್ಯಕ್ತಿ ಹಾಜರಾಗದೇ ಆಸ್ತಿ ನೋಂದಣಿ ಮಾಡಿಸಬಹುದು ಮತ್ತು ಸಹಿ ಮಾಡಿದ ಮೂಲ ದಾಖಲೆಗಳನ್ನು ನೀಡುವ ಪದ್ಧತಿ ಹೋಗಿ, ಡಿಜಿಟಲ್‌ ಸಹಿ ಇರುವ ದಾಖಲೆಗಳನ್ನು ನೀಡಲಾಗುತ್ತದೆ. ಇದು ಹಣಕಾಸು ವಂಚನೆ ಮತ್ತು ನೋಂದಣಿ ಪ್ರಕ್ರಿಯೆ ವೇಳೆಯೂ ವಂಚನೆಗೆ ಕಾರಣವಾಗಬಹುದು. ಈ ಅಪಾಯವನ್ನು ಬಹಳ ಎಚ್ಚರದಿಂದ ನಿರ್ವಹಿಸಬೇಕು’ ಎಂದು ರಾಜ್ಯಪಾಲರು ಹೇಳಿದ್ದರು.

‘ಕೇಂದ್ರ ಸರ್ಕಾರವೇ, ಡಿಜಿಟಲ್‌ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದ ಅಡಿಯಲ್ಲಿ ಇಂತಹ ಸುಧಾರಣೆಗಳನ್ನು ಸೂಚಿಸಿದೆ. ಅದನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ ಅಷ್ಟೆ. ರಾಜ್ಯಪಾಲರ ಕಳವಳಕ್ಕೆ ಕಾರಣಗಳಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿ ಹಣಕಾಸು ವ್ಯವಹಾರಗಳೂ ಡಿಜಿಟಲ್‌ ಸಹಿ ಮುಖೇನವೇ ನಡೆಯುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮಜಾಯಿಷಿ ನೀಡಿದ್ದಾರೆ.

‘ಫೆಬ್ರುವರಿಯಲ್ಲೇ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಸಹಿ ಮಾಡದೇ ಇದ್ದ ಕಾರಣಕ್ಕೆ, ಇದನ್ನು ಮೊದಲು ಅನುಷ್ಠಾನಕ್ಕೆ ತಂದ ರಾಜ್ಯ ಎಂಬ ಶ್ರೇಯ ಮಧ್ಯಪ್ರದೇಶಕ್ಕೆ ಹೋಯಿತು’ ಎಂದಿದ್ದಾರೆ. ‘ಈ ಪದ್ಧತಿ ಜಾರಿಗೆ ತಂದರೂ, ಖುದ್ದಾಗಿ ಹಾಜರಾಗಿ ನೋಂದಣಿ ಮಾಡಿಸುವ ಹಳೆಯ ಪದ್ಧತಿಯೂ ಜಾರಿಯಲ್ಲಿರಲಿದೆ’ ಎಂದು ಸ್ಟಷ್ಟಪಡಿಸಿದ್ದಾರೆ.

‘ನಕಲಿ ಖಾತೆಗಳನ್ನು ತೊಡೆದುಹಾಕುವ ಉದ್ದೇಶದಿಂದ ಕಾವೇರಿ ತತ್ರಾಂಶದ ವ್ಯಾಪ್ತಿಗೆ ಬಿಬಿಎಂಪಿ, ಬಿಡಿಎ ಮತ್ತು ಸ್ಥಳೀಯ ಸಂಸ್ಥೆಗಳನ್ನು ತರುವುದಕ್ಕೂ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಜಾರಿಗೆ ಮಾಡಿದರೆ, ನಕಲಿ ಖಾತೆಗಳನ್ನು ತೊಡೆದುಹಾಕಬಹುದಾಗಿದೆ. ಅಲ್ಲದೇ ಉಪ–ನೋಂದಣಾಧಿಕಾರಿಗಳು ಅಕ್ರಮವಾಗಿ ಆಸ್ತಿಗಳನ್ನು ನೋಂದಣಿ ಮಾಡುವುದನ್ನು ತಪ್ಪಿಸಬಹುದಾಗಿದೆ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಪಾಲರು ಕೇಳಿರುವ ಸ್ಪಷ್ಟನೆಯನ್ನು ಒಳಗೊಂಡ ಉತ್ತರದ ಕರಡು ಈಗಾಗಲೇ ಸಿದ್ಧವಾಗಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ಕಳುಹಿಸಲಾಗುತ್ತದೆ.
–ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT