ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ರಾಘವೇಂದ್ರ ಬ್ಯಾಂಕ್ ಬೇರೆಯವರಿಗೆ ವಹಿಸಲು ಕ್ರಮ– ಸೋಮಶೇಖರ್‌

Last Updated 13 ಸೆಪ್ಟೆಂಬರ್ 2022, 14:53 IST
ಅಕ್ಷರ ಗಾತ್ರ

ಬೆಂಗಳೂರು: ‘ಅವ್ಯವಹಾರ ಕಾರಣಕ್ಕೆ ಆರ್ಥಿಕ ಸಂಕಷ್ಟದಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ್ನು ವಹಿಸಿಕೊಳ್ಳಲು ಮುಂಬೈಯವರೂ ಸೇರಿದಂತೆ 3–4 ಸಂಸ್ಥೆಯವರು ಮುಂದೆ ಬಂದಿದ್ದಾರೆ. ಈ ಬಗ್ಗೆ ಅನುಮತಿಗಾಗಿ ರಿಸರ್ವ್‌ ಬ್ಯಾಂಕಿಗೆ ಪತ್ರ ಬರೆಯಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಯು.ಬಿ. ವೆಂಕಟೇಶ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಈ ವಿಚಾರದಲ್ಲಿ ಕೇಂದ್ರ ಆರ್ಥಿಕ ಇಲಾಖೆಯ ಜೊತೆ ಸಂಸದ ತೇಜಸ್ವಿಸೂರ್ಯ ಅವರು ದೆಹಲಿಯಲ್ಲಿ ಸಮನ್ವಯ ಮಾಡುತ್ತಿದ್ದಾರೆ. ಬ್ಯಾಂಕಿನ ಸಾಲಗಳೂ ಸೇರಿದಂತೆ ಎಲ್ಲ ವ್ಯವಹಾರಗಳನ್ನು ವಹಿಸಿಕೊಳ್ಳುವ ಕುರಿತಂತೆ ಸಂಸ್ಥೆಗಳ ಜೊತೆ ಚರ್ಚೆ ನಡೆದಿದೆ’ ಎಂದರು.

‘ಗುರು ರಾಘವೇಂದ್ರ ಸಹಕಾರ ಬ್ಯಾಂಕ್ಮತ್ತುಶ್ರೀವಸಿಷ್ಠ ಪತ್ತಿನ ಸೌಹಾರ್ದಸಹಕಾರಸಂಘದಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬ್ಯಾಂಕಿನ ಆಸ್ತಿ ಜಪ್ತಿ ಮಾಡಲಾಗಿದ್ದು, ಠೇವಣಿದಾರರಿಗೆ ಶೀಘ್ರದಲ್ಲಿ ಹಣ ಹಿಂದಿರುಗಿಸಲಾಗುವುದು ಎಂದು ಈ ಹಿಂದೆಯೇ ಭರವಸೆ ನೀಡಿದ್ದರೂ ಏನೂ ಆಗಿಲ್ಲ. 90‌ಕ್ಕೂ ಹೆಚ್ಚು ಮಂದಿ ಅದೇ ಕೊರಗಿನಲ್ಲಿ ಸಾವಿಗೀಡಾಗಿದ್ದಾರೆ’ ಎಂದು ಯು.ಬಿ. ವೆಂಕಟೇಶ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಯ ಮಾಹಿತಿ ಠೇವಣಿದಾರರಿಗೆ ಸಿಗುತ್ತಿಲ್ಲ. ಅಕ್ರಮ ಎಸಗಿದವರು ಯಾವುದೇ ಭಯ ಇಲ್ಲದೆ ಓಡಾಡುತ್ತಿದ್ದಾರೆ. ಸಿಐಡಿ ತನಿಖೆ ಪ್ರಗತಿ ಕಾಣುತ್ತಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಬ್ಯಾಂಕಿನಲ್ಲಿ ಠೇವಣಿ ಇಟ್ಟ ಜನ ವಿಷ ಕುಡಿದು ಸಾಯಲು ಮುಂದಾಗಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರಿಸಿದ ಸಚಿವರು, ‘ನಿಜವಾಗಿ ವ್ಯಕ್ತಿ ಇಲ್ಲದಿದ್ದರೂ ಅನ್ಯರ ಹೆಸರಿನಲ್ಲಿ ಈ ಬ್ಯಾಂಕಿನಲ್ಲಿ ಠೇವಣಿ ಮಾಡಿರುವುದು, ₹ 1,544.43 ಕೋಟಿ ಸಾಲಗಳಿಗೆ ಸಂಬಂಧಿಸಿದಂತೆ 1,576 ಸಾಲದ ಖಾತೆಗಳಿಗೆ ದಾಖಲೆಗಳೇ ಇಲ್ಲದಿರುವುದು, ಸಾಲ ಮಂಜೂರಾತಿ ಪ್ರಾಧಿಕಾರ ಸಾಲ ಮಂಜೂರು ಮಾಡದಿದ್ದರೂ ಸಾಲದ ಹಣ ಬಿಡುಗಡೆ ಮಾಡಿರುವುದು, 24 ಸಾಲಗಾರರಿಗೆ ₹ 892.85 ಕೋಟಿ ಮಂಜೂರು ಮಾಡಿರುವುದು, ಠೇವಣಿ ಇಲ್ಲದಿದ್ದರೂ ಇದೆ ಎಂದು ತೋರಿಸಿ ₹ 409.11 ಕೋಟಿ ಸಾಲ ನೀಡಿರುವ ಗಂಭೀರ ಲೋಪಗಳು ಪತ್ತೆ ಆಗಿವೆ. ಈ ಎಲ್ಲ ಅವ್ಯವಹಾರಗಳ ವಿಚಾರದಲ್ಲಿ ಹೈಕೋರ್ಟ್, ರಿಸರ್ವ ಬ್ಯಾಂಕಿನ ನಿರ್ದೇಶನದಂತೆ ನಾವು ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಬ್ಯಾಂಕಿನಿಂದ ಅತಿ ಹೆಚ್ಚು ಸಾಲ ಪಡೆದ ಜಸ್ವಂತ ರೆಡ್ಡಿ, ರಂಜಿತ್ ರೆಡ್ಡಿ ಇಬ್ಬರೂ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಅವರನ್ನು ವಾಪಸು ಕರೆತರುವ ಪ್ರಯತ್ನ ನಡೆಯುತ್ತಿದೆ. ಹೆಚ್ಚಿನ ಮೊತ್ತದ ಸಾಲ ಪಡೆದವರ ವಿವರಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಲಾಗಿದೆ. ಬ್ಯಾಂಕಿನಲ್ಲಿ ಲೆಕ್ಕ ಪರಿಶೋಧನೆ ಮುಗಿದಿದೆ. ‌ಇದೀಗ ಅಂತಿಮ ನೋಟಿಸ್ ಕೂಡಾ ನೀಡಲಾಗಿದೆ. ಕೆಲವರು ಸಾಲ ಮರುಪಾವತಿ ಮಾಡುತ್ತಿದ್ದು, ಅವರಿಗೆ ದಾಖಲೆಗಳನ್ನು ಹಿಂದಿರುಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಅಧಿವೇಶನ ಕೊನೆಯಾಗುವ ಮೊದಲೇ ಇನ್ನೊಂದು ಸಭೆ ಮಾಡುತ್ತೇವೆ’ ಎಂದರು.

‘ಶ್ರೀ ವಸಿಷ್ಠ ಪತ್ತಿನ ಸೌಹಾರ್ದ ಸಂಘದಲ್ಲಿ ₹ 85 ಕೋಟಿ ಅವ್ಯವಹಾರ ಆರೋಪವಿದೆ. ಇದರ ಕುರಿತು ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವು ಆಗಿದೆ. ಆದರೆ, ಈ ಸಂಘ ಸೌಹಾರ್ದ ಸಂಘಗಳ ಒಕ್ಕೂಟದಡಿ ಬರುತ್ತದೆ. ಸಹಕಾರ ಇಲಾಖೆಯ ನಿಯಂತ್ರಣದಲ್ಲಿಲ್ಲ. ಸೌಹಾರ್ದ ಸಂಘಗಳ ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಿ, ಶೀಘ್ರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT