ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯವರ್ತಿ ಹಾವಳಿ ತಡೆಗಟ್ಟದಿದ್ದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಡಿಸಿ, ಸಿಇಒಗಳಿಗೆ ಸಿಎಂ ನಿರ್ದೇಶನ | ಲೋಪ ದೋಷ ಮುಂದುವರಿದರೆ ಮುಲಾಜಿಲ್ಲದೆ ಕ್ರಮ
Published 9 ಜುಲೈ 2024, 21:30 IST
Last Updated 9 ಜುಲೈ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರದ ಸವಲತ್ತುಗಳನ್ನು ಮಧ್ಯವರ್ತಿಗಳ ಹಾವಳಿಗಳಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಸರ್ಕಾರದ ಹಣ ದುರುಪಯೋಗ ಆಗದಂತೆ ಕೆಲಸ ಮಾಡಬೇಕು. ಉದ್ದೇಶಪೂರ್ವಕವಾಗಿ ಲೋಪ ದೋಷಗಳನ್ನು ಮುಂದುವರೆಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನ ನಡೆದ ಸಭೆಯ ಅಂತ್ಯದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೂರು ತಿಂಗಳ ನಂತರ ಮತ್ತೆ ಸಭೆ ನಡೆಸುತ್ತೇನೆ. ಆಗ ಪರಿಸ್ಥಿತಿ ಸುಧಾರಣೆ ಆಗದಿದ್ದರೆ ಸಹಿಸಲಾಗದು’ ಎಂದರು.

ಅದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಚೆನ್ನಾಗಿ ಕೆಲಸ ಮಾಡುವವರ ಬೆನ್ನು ತಟ್ಟುವ, ಸರಿಯಾಗಿ ಕೆಲಸ ಮಾಡದವರ ಕಿವಿ ಹಿಂಡಿ ಚುರುಕುಗೊಳಿಸುವುದು ಈ ಸಭೆಯ ಉದ್ದೇಶವಾದರೆ, ಮತ್ತೊಂದು ಮುಖ್ಯ‌ ಉದ್ದೇಶ ಸರ್ಕಾರದ ಧ್ಯೇಯೋದ್ದೇಶಗಳೇನು? ಆಶಯಗಳೇನು? ಆಸಕ್ತಿಗಳೇನು? ಆದ್ಯತೆಗಳೇನು? ಎಂಬುದನ್ನು ಮನವರಿಕೆ ಮಾಡಿಕೊಟ್ಟು ಕೆಲಸ ಮಾಡಿಸುವುದೂ ಆಗಿದೆ’ ಎಂದರು.

‘ಸಭೆಯಲ್ಲಿ ವಿಪತ್ತು ನಿರ್ವಹಣೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ನರೇಗಾ, ಹೆದ್ದಾರಿ, ಮೂಲಸೌಕರ್ಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಅನರ್ಹ ಪಡಿತರ ಚೀಟಿಗಳ ರದ್ದು ಸೇರಿದಂತೆ 30 ಇಲಾಖೆಗಳ 68 ವಿಷಯಗಳ ಕುರಿತು ಚರ್ಚಿಸಲಾಯಿತು. ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಜಿಲ್ಲಾವಾರು ಪರಿಶೀಲಿಸಲಾಯಿತು. ಕಡಿಮೆ ಸಾಧನೆಯಾದ ಜಿಲ್ಲೆಗಳ ಅಧಿಕಾರಿಗಳಿಗೆ ಕೆಲಸಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಯಿತು’ ಎಂದರು.

‘ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, 27 ಜಿಲ್ಲೆಗಳ 177 ತಾಲ್ಲೂಕುಗಳ 1,247 ಗ್ರಾಮ ಪಂಚಾಯಿತಿಗಳಲ್ಲಿ ಪ್ರವಾಹದ ಅಪಾಯ ಹೊಂದಿರುವ 2,225 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳ 20.38 ಲಕ್ಷ ಜನರು ಪ್ರವಾಹ ಪೀಡಿತರಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ₹ 783.69 ಕೋಟಿ ಅನುದಾನ ಲಭ್ಯವಿದೆ. ಪೂರ್ವ ಮುಂಗಾರು ಅವಧಿಯಲ್ಲಿ 3,714 ಮನೆ ಹಾನಿ ಹಾಗೂ ಬೆಳೆ ಹಾನಿ ಸಂಭವಿಸಿದೆ. ಇದಕ್ಕೆ ಎಸ್‌ಡಿಆರ್‌ಎಫ್‌ ಮಾನದಂಡಗಳಂತೆ ಪರಿಹಾರ ವಿತರಿಸಲು ಸೂಚಿಸಲಾಗಿದೆ’ ಎಂದರು.

'9,811 ಶಾಲಾ ಕೊಠಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ 1,000 ಪಿ.ಯು. ಕಾಲೇಜುಗಳ ಕೊಠಡಿಗಳೂ ಸೇರಿವೆ. ವಸತಿ ನಿಲಯ, ವಸತಿ ಶಾಲೆಗಳಿಗೆ 114 ಕಡೆ ಮತ್ತು 8,058 ಅಂಗನವಾಡಿಗಳಿಗೆ ಜಾಗ ಕೊಡಲು ಬಾಕಿ ಇದೆ. ತಕ್ಷಣ ಜಾಗ ಜಾಗ ಕೊಡಬೇಕೆಂದು ನಿರ್ದೇಶನ ನೀಡಲಾಗಿದೆ’ ಎಂದರು.

‘ಕಂದಾಯ ನ್ಯಾಯಾಲಯಗಳಲ್ಲಿ ಕಳೆದ‌ ಒಂದು ವರ್ಷದಲ್ಲಿ 52,238 ಪ್ರಕರಣಗಳು ಇತ್ಯರ್ಥವಾಗಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು‌ ಪ್ರತಿ ಪ್ರಕರಣ ಇತ್ಯರ್ಥವಾಗಲು ಸರಾಸರಿ 212 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಅದು‌ 97 ದಿನಗಳಿಗೆ ಇಳಿಕೆಯಾಗಿದೆ. ಆದರೂ ವಿವಿಧ ಕಾರಣಗಳಿಗಾಗಿ ಹೊಸದಾಗಿ ದಾಖಲಿಸಿಕೊಂಡ ಮೇಲ್ಮನವಿಗಳೂ ಸೇರಿ 56 ಸಾವಿರ ಪ್ರಕರಣಗಳು ಕಂದಾಯ ನ್ಯಾಯಾಲಯಗಳಲ್ಲಿವೆ. ಅವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ನಿರ್ದೇಶನ ನೀಡಲಾಗಿದೆ’ ಎಂದರು.

‘ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ರಾಜ್ಯದಲ್ಲಿ ನಿರುದ್ಯೋಗ ನಿವಾರಿಸಲು ಸಮರ್ಥ ಕ್ಷೇತ್ರ ಪ್ರವಾಸೋದ್ಯಮ. ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಗಳ ವಿವಿಧ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ. ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿ ಪ್ರವಾಸೋದ್ಯಮದ ಚಟುವಟಿಕೆ‌ ಹೆಚ್ಚಿಸಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT